ಹಿರಿಯೂರು, ಜೂ.6: ವಾಣಿವಿಲಾಸ ಸಾಗರ (ವಿವಿ ಸಾಗರ) ಜಲಾಶಯವನ್ನು ಉಳಿಸಲು ಹಾಗೂ ಜಲಾಶಯಕ್ಕೆ ಶಾಶ್ವತವಾಗಿ ನೀರಿನ ಹಂಚಿಕೆ ಕಲ್ಪಿಸಲು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ವಿವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ರೈತರ ಹಿತರಕ್ಷಣ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜೂನ್ 6ರಂದು ನಡೆದ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿವಿ ಸಾಗರ ಜಲಾಶಯದಿಂದ ನಾಯಕನಹಟ್ಟಿ, ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಸೇರಿದಂತೆ ವೇದಾವತಿ ಮತ್ತು ಸುವರ್ಣಮುಖಿ ನದಿಗಳಿಗೆ ನೀರು ಹರಿಸಲಾಗುತ್ತಿದೆ. ಅಲ್ಲದೆ ಅನೇಕ ಗ್ರಾಮಗಳಿಗೆ ಕುಡಿಯುವ ನೀರು, ಧರ್ಮಪುರ ಭಾಗದ ಕೆರೆಗಳು, ಇತ್ತೀಚೆಗೆ ದಿಂಡಾವರ ಭಾಗದ ಕೆರೆಗಳು, ಹಿರಿಯೂರು ನಗರ ಹಾಗೂ ಕೈಗಾರಿಕಾ ಕಾರಿಡಾರ್‌ಗೆ ಸೇರಿ ಸುಮಾರು 8 ಟಿಎಂಸಿ ನೀರು ಬಳಸಲಾಗುತ್ತಿದೆ ಎಂದು ಹೇಳಿದರು.
ಆದರೆ ಭದ್ರಾ ಮೇಲ್ದಂಡೆ ಯೋಜನೆಯಿಂದ ವಿವಿ ಸಾಗರಕ್ಕೆ ಕೇವಲ 2 ಟಿಎಂಸಿ ನೀರನ್ನು ಮಾತ್ರ ಮೀಸಲಿಡಲಾಗಿದೆ. ನೀರಿನ ಬೇಡಿಕೆ ಬಂದಾಗ ಜಿಲ್ಲೆಯ ಜನಪ್ರತಿನಿಧಿಗಳು ತುರ್ತು ಆದೇಶಗಳನ್ನು ಮಾಡಿಸುತ್ತಾರೆ. ಆದರೆ ವಿವಿ ಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ತರಲು ಅಗತ್ಯ ಪ್ರಯತ್ನಗಳು ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ ವಿವಿ ಸಾಗರಕ್ಕೆ ನೀರು ಬಂದ ಪರಿಣಾಮ ಬೆಂಗಳೂರಿಗೆ ವಲಸೆ ಹೋಗಿದ್ದ ಹಿರಿಯೂರು ಭಾಗದ ಅನೇಕ ರೈತರು ಮರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿವರ್ಷ ಭದ್ರಾ ಜಲಾಶಯ ತುಂಬಿ ನೂರಾರು ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗುತ್ತದೆ. ಹೆಚ್ಚುವರಿ ನೀರಿನ ಸಂದರ್ಭಗಳಲ್ಲಿ ವಿವಿ ಸಾಗರ ಜಲಾಶಯ ತುಂಬಿಸಲು ಸರ್ಕಾರ ಶಾಶ್ವತ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಧರ್ಮಪುರ ಭಾಗ ಹಾಗೂ ಜೆಜೆಹಳ್ಳಿ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ಹಂಚಿಕೆಯಾದ ನೀರನ್ನು ವಿವಿ ಸಾಗರ ಜಲಾಶಯಕ್ಕೆ ಮರುಹಂಚಿಕೆ ಮಾಡುವ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೇವಲ ವಿವಿ ಸಾಗರದಿಂದಲೇ ಎಲ್ಲೆಡೆ ನೀರು ಹಂಚಿಕೆ ಮಾಡಿಕೊಳ್ಳುವುದು ಸಮರ್ಪಕ ಪರಿಹಾರವಲ್ಲ ಎಂದು ಹೇಳಿದರು.
ಜಿಲ್ಲೆಯ ಎಲ್ಲ ಶಾಸಕರು ಹಾಗೂ ಜನಪ್ರತಿನಿಧಿಗಳು ವಿಷಯದ ಕುರಿತು ಅಧ್ಯಯನ ನಡೆಸಿ ಸರ್ಕಾರದೊಂದಿಗೆ ಚರ್ಚಿಸಿ, ವಾಣಿವಿಲಾಸ ಸಾಗರ ಜಲಾಶಯಕ್ಕೆ ನಿರಂತರವಾಗಿ ನೀರು ಹರಿದುಬರುವಂತೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಸಭೆಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಹೆಚ್.ಆರ್. ತಿಮ್ಮಣ್ಣ, ಪ್ರಧಾನ ಕಾರ್ಯದರ್ಶಿ ಆಲೂರು ಸಿದ್ರಾಮಣ್ಣ, ಖಜಾಂಚಿ ಬಬ್ಬೂರು ಸುರೇಶ್, ಆರ್.ಕೆ. ಗೌಡ್ರು, ಮಂಜುನಾಥ್ ಮಾಳಿಗೆ, ಪಿಟ್ಲಾಲಿ ಶ್ರೀನಿವಾಸ್, ಆನಂದ ಶೆಟ್ರು, ಪ್ರೊ. ಮೈಸೂರು ಶಿವಣ್ಣ, ಬೀರನಹಳ್ಳಿ ಶಿವಲಿಂಗಪ್ಪ, ರಾಮಚಂದ್ರ ಕಸವನಹಳ್ಳಿ, ಬಿದರಕೆರೆ ಬೇಲಪ್ಪ ಸೇರಿದಂತೆ ಹಲವರು ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಸಮಿತಿಯ ನಿರ್ದೇಶಕರಾಗಿದ್ದ ಟಿ. ನಾಗೇನಹಳ್ಳಿ ಮೂಡಲಗಿರಿಯಪ್ಪ, ಕುಂದಲಗೂರು ಶ್ರೀನಿವಾಸ್ ಹಾಗೂ ಹಿರಿಯೂರಿನ ಉದ್ಯಮಿ ಶಫಿ ಮೇಷ್ಟ್ರು ಅವರ ನಿಧನಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶೀರ್ಷಿಕೆ: ವಿವಿ ಸಾಗರ ಜಲಾಶಯಕ್ಕೆ ಶಾಶ್ವತ ನೀರಿನ ಹಂಚಿಕೆ ಕಲ್ಪಿಸಿ: ಕಸವನಹಳ್ಳಿ ರಮೇಶ್
About The Author
Discover more from JANADHWANI NEWS
Subscribe to get the latest posts sent to your email.