August 7, 2026
IMG-20260807-WA0229

ಚಳ್ಳಕೆರೆ:- ಗೋಮಾತೆಗೆ ಪೂಜೆ ಮತ್ತು ಅವುಗಳ ಸಂರಕ್ಷಣೆಗಾಗಿ ಶೆಡ್ ಗಳನ್ನು ನಿರ್ಮಾಣ ಮಾಡಿರುವುದು ಶ್ಲಾಘನೀಯ ಸೇವೆಯಾಗಿದ್ದು ಇದು ಭಾರತೀಯ ಸನಾತನ ಸಂಸ್ಕೃತಿಯ ಉಳಿವಿಗೆ ಭದ್ರವಾದ ಅಡಿಪಾಯವನ್ನು ಹಾಕಿದಂತೆ ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಹಾರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಹೊರವಲಯದ ಜಗಲೂರಜ್ಜನ ದೇವಸ್ಥಾನದ ಸಮೀಪದಲ್ಲಿ ಮುನ್ನೂರ ಐವತ್ತು ದೇವರ ಎತ್ತುಗಳಿಗಾಗಿ ದೇವರ ಎತ್ತುಗಳ ಸಂರಕ್ಷಣಾ ಸಮಿತಿ,ಶ್ರೀನರಹರಿ ಸೇವಾ ಪ್ರತಿಷ್ಠಾನ, ನನ್ನಿವಾಳದ ಕಟ್ಟೆಮನೆಯ ಮುತ್ತಿಗಾರ ದೇವರ ಎತ್ತುಗಳ ಕ್ಷೇಮಾಭಿವೃದ್ಧಿ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಒಂದು ಲಕ್ಷದ ಅರವತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಶೆಡ್ ಗಳನ್ನು ಗೋಪೂಜೆ ಮಾಡುವ ಮೂಲಕ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದಿಂದ ಪ್ರತಿವರ್ಷ ಬೇಸಿಗೆಯಲ್ಲಿ ಈ ಭಾಗದ ದೇವರ ಎತ್ತುಗಳ ಹುಲ್ಲಿಗಾಗಿ ಮುವತ್ತು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ.ದೇವರ ಎತ್ತುಗಳ ಸಂರಕ್ಷಣೆಯಲ್ಲಿ ಕಿಲಾರಿಗಳ ಸೇವೆ ಮಹತ್ವದಾಗಿದ್ದು ನೂತನ ಶೆಡ್ ಗಳ ನಿರ್ಮಾಣದಿಂದ ಬೇಸಿಗೆ ಮತ್ತು ಮಳೆಗಾಲದಲ್ಲಿ ದೇವರ ಎತ್ತುಗಳಿಗೆ ಸಾಕಷ್ಟು ರೀತಿಯಲ್ಲಿ ಅನುಕೂಲವಾಗುತ್ತದೆ.ದೇವರ ಎತ್ತುಗಳ ಸೇವೆಯೇ ಸಾಕ್ಷಾತ್ ಭಗವಂತನ ಸೇವೆ ಎಂಬ ಮನೋಭಾವದಿಂದ ಅವುಗಳ ಸಂರಕ್ಷಣೆಗೆ ಮುಂದಾಗಿರುವುದು ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಸಾರ್ಥಕವಾದ ಸೇವೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಅವರು ಈ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಕಲಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮ‌ ಹಾಗೂ ಶ್ರೀನರಹರಿ ಸೇವಾ ಪ್ರತಿಷ್ಠಾನದ ಪೀಠಾಧ್ಯಕ್ಷರಾದ ಪೂಜ್ಯ ಡಾ.ವೈ ರಾಜಾರಾಮ್ ಗುರುಗಳು ನೂತನ ಶೆಡ್ ಗಳ ನಿರ್ಮಾಣದಲ್ಲಿ ಶ್ರೀನರಹರಿ ಸೇವಾ ಪ್ರತಿಷ್ಠಾನದಿಂದ ಇಪ್ಪತ್ತು ಸಾವಿರ ರೂಪಾಯಿಯನ್ನು ನೀಡಲಾಗಿದ್ದು ಮುಂದಿನ ದಿನಗಳಲ್ಲಿ ದೇವರ ಎತ್ತುಗಳ ನೀರಿನ ವ್ಯವಸ್ಥೆಗಾಗಿ ನಮ್ಮ ಪ್ರತಿಷ್ಠಾನದಿಂದ ಹತ್ತು ಸಾವಿರ ರೂಪಾಯಿ ಪ್ರೋತ್ಸಾಹಧನ ಮತ್ತು ಸಹಕಾರ ನೀಡಲಾಗುವುದು ಎಂದು ಘೋಷಿಸಿದ ಅವರು ಗೋಸೇವೆಯ ಮೂಲಕ ಚಳ್ಳಕೆರೆ ಪ್ರಾಂತ್ಯವನ್ನು ಗೋಮಯವಾಗಿ ಮಾಡುವಂತೆ ಎಲ್ಲರಿಗೂ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಉಪಾಧ್ಯಕ್ಷರಾದ ರೆಡ್ಡಿಹಳ್ಳಿ ವೀರಣ್ಣ, ತಾಲ್ಲೂಕು ಛಾಯಾಗ್ರಾಹಕ ಸಂಘದ ಅಧ್ಯಕ್ಷ ನೇತಾಜಿ ಪ್ರಸನ್ನ, ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥೆ ಹೆಚ್ ಲಕ್ಷ್ಮೀದೇವಮ್ಮ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವರ ಎತ್ತುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷೆ ಶುಭಾ ಸೋಮಶೇಖರ್ ವಹಿಸಿದ್ದರು. ಈ ಸಂದರ್ಭದಲ್ಲಿ ಕಿಲಾರಿಗಳ ವತಿಯಿಂದ ಸ್ವಾಮಿ ಜಪಾನಂದಜೀ ಅವರಿಗೆ ಗೌರವಪೂರ್ವಕ ಸನ್ಮಾನ ಮಾಡಲಾಯಿತು‌. ಕಾರ್ಯಕ್ರಮದ ನಿರೂಪಣೆಯನ್ನು ಯತೀಶ್ ಎಂ ಸಿದ್ದಾಪುರ, ಪ್ರಾರ್ಥನೆಯನ್ನು ಸುನೀತಾ, ಮಾಕಂಸ್ ಲಕ್ಷ್ಮೀ ಮಾಡಿದರೆ ಸ್ವಾಗತ-ಪರಿಚಯವನ್ನು ಗೀತಾ ಪ್ರಕಾಶ್ ಮಾಡಿದರು. ಸಮಾರಂಭದಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ದೇವರಹಳ್ಳಿ ರಾಜಣ್ಣ, ಹನುಮಂತಪ್ಪ, ಮೈರಾಡ್ ಚಂದ್ರಣ್ಣ, ಕಮಲ್ ಬಾಬು, ಉಮೇಶ್, ಮಹೇಶ್, ಸಿದ್ದೇಶ್, ಮಲ್ಲಿಕಾರ್ಜುನ, ರಾಘವೇಂದ್ರ, ವಿಶಾಲಾಕ್ಷಿ, ಮೋಹಿನಿ,ಪದ್ಮ,ಸುಧಾಮಣಿ, ಪಿ.ಎಸ್ ಮಾಣಿಕ್ಯ, ಗೀತಾ ನಾಗರಾಜ್, ಸುಧಾ, ಗಂಗಾಧರಶೆಟ್ಟಿ,ಪರಿಮಳಾ, ಯಶೋಧಾ, ಶಾರದಾ, ರಾಜೇಶ್ವರಿ, ನಾಗರತ್ನಮ್ಮ, ಪ್ರೇಮಾ, ರುಕ್ಮಿಣಿ,ಶೈಲಜಾ, ಸೌಭಾಗ್ಯ, ಲಕ್ಷ್ಮೀದೇವಿ ಸೇರಿದಂತೆ ಕಿಲಾರಿಗಳು ಹಾಗೂ ಸಮಿತಿಯ ಸದಸ್ಯರು,ದೇವರ ಎತ್ತುಗಳ ಆರಾಧಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading