August 4, 2026
IMG-20260804-WA0411

ಹೊಸದುರ್ಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಬಿ.ಜಿ.ಗೋವಿಂದಪ್ಪ
ರಾಜ್ಯ ಸಚಿವ ಸಂಪುಟ ರಚನೆಯಲ್ಲಿ ಕುರುಬ ಸಮುದಾಯಕ್ಕೆ ಸಚಿವ ಸ್ಥಾನ ನೀಡದೆ ಕಡೆಗಣಿಸಿರುವುದು ಸಮುದಾಯಕ್ಕೆ ಮಾಡಿದ ದೊಡ್ಡ ಅನ್ಯಾಯ- ಶಾಸಕ ಬಿ.ಜಿ. ಗೋವಿಂದಪ್ಪ
ವರದಿ: ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ರಾಜ್ಯ ಸಚಿವ ಸಂಪುಟ ರಚನೆಯಲ್ಲಿ ಕುರುಬ ಸಮುದಾಯಕ್ಕೆ ಸಚಿವ ಸ್ಥಾನ ನೀಡದೆ ಕಡೆಗಣಿಸಿರುವುದು ಸಮುದಾಯಕ್ಕೆ ಮಾಡಿದ ದೊಡ್ಡ ಅನ್ಯಾಯವಾಗಿದೆ ಎಂದು ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಗೊಂಡಿದೆ. ವಿವಿಧ ಜಾತಿ, ವರ್ಗ ಹಾಗೂ ಪ್ರಾದೇಶಿಕ ಸಮತೋಲನವನ್ನು ಪರಿಗಣಿಸಿ ಸಚಿವರನ್ನು ನೇಮಕ ಮಾಡಲಾಗಿದೆ. ಆದರೆ, ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾದ ಕುರುಬ ಸಮುದಾಯಕ್ಕೆ ಸಚಿವ ಸ್ಥಾನ ನೀಡದೇ ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ಬಾಗಲಕೋಟೆ, ಚಿಕ್ಕಮಗಳೂರು, ಹಾವೇರಿ, ಕೊಪ್ಪಳ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕುರುಬ ಸಮುದಾಯದ ಶಾಸಕರಿದ್ದು, ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಿತ್ತು. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕುರುಬ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಈ ಬಾರಿ ಒಬ್ಬರಿಗೂ ಅವಕಾಶ ನೀಡದಿರುವುದು ಸಮುದಾಯದ ಆಶಾಭಾವನೆಗೆ ಧಕ್ಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಕುರುಬ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಶೀಘ್ರದಲ್ಲಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿಲ್ಲ. ಈಗ ನೀಡಿರುವ ನಿಗಮದ ಜವಾಬ್ದಾರಿಯನ್ನು ಸರ್ಕಾರವೇ ಎರಡು ದಿನಗಳೊಳಗೆ ಹಿಂಪಡೆಯುವ ಸಾಧ್ಯತೆ ಇದೆ ಎಂದು ಹೇಳಿದರು.
ಶಾಸಕನಾಗಿರುವವರೆಗೂ ಕ್ಷೇತ್ರದ ಜನರ ಅಭಿವೃದ್ಧಿಗೆ ಬದ್ಧನಾಗಿ ಕೆಲಸ ಮಾಡುತ್ತೇನೆ. ಹೊಸದುರ್ಗ ತಾಲೂಕಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ನಾನು ಸಚಿವನಾಗುವೆನೆಂಬ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅವರ ಆಶಾಭಾವನೆ ಈಡೇರಿಲ್ಲ. ಈ ಕುರಿತು ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರೂ ರಾಜಕೀಯವಾಗಿ ಏನು ವ್ಯತ್ಯಾಸಗಳಾಗಿವೆ ಎಂಬುದು ತಿಳಿದಿಲ್ಲ ಎಂದು ಹೇಳಿದರು.
ಈ ಬೆಳವಣಿಗೆಯಿಂದ ಕ್ಷೇತ್ರದ ಜನರಿಗೆ ನಿರಾಸೆಯಾಗಿದ್ದರೂ, ಪಕ್ಷದ ವಿರುದ್ಧ ಬೇಸರ ವ್ಯಕ್ತಪಡಿಸದೆ, ಈವರೆಗೆ ನೀಡಿದ ಗೌರವವನ್ನು ಮುಂದುವರಿಸಬೇಕು. ಭವಿಷ್ಯದ ರಾಜಕೀಯವನ್ನು ಉತ್ತಮ ನಡವಳಿಕೆ ಹಾಗೂ ಸಂಘಟನಾ ಬದ್ಧತೆಯೊಂದಿಗೆ ಮುನ್ನಡೆಸುವ ಅಗತ್ಯವಿದೆ ಎಂದರು.
ಎಸ್ಟಿ ಕೋಟಾದಡಿ ಸಚಿವ ಸ್ಥಾನ ಪಡೆದಿರುವ ರಘುಮೂರ್ತಿಯವರಿಗೆ ಶುಭಾಶಯಗಳನ್ನು ತಿಳಿಸಿದ ಅವರು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನೀಡಲಿ ಎಂದು ಹಾರೈಸಿದ ಅವರು ಸಚಿವರ ಅಭಿವೃದ್ದಿ ಕೆಲಸಗಳಲ್ಲಿ ನಾನೂ ಸಹಾ ಸಂಪೂರ್ಣ ಸಹಕಾರ ನೀಡಿ ಕೈಜೋಡಿಸುವೆ ಎಂಬ ಆತ್ಮವಿಶ್ವಾಸದ ಮಾತುಗಳನ್ನ ಆಡಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading