oplus_0
Writing
ಚಳ್ಳಕೆರೆ, ಆ.3: ವಿಬಿಜಿ ರಾಮ್ ಜೀ ಯೋಜನೆಯ ಅಸಮರ್ಪಕ ಅನುಷ್ಠಾನವನ್ನು ಖಂಡಿಸಿ ಹಾಗೂ ಗ್ರಾಮೀಣ ಕೂಲಿ ಕಾರ್ಮಿಕರಿಗೆ ತಕ್ಷಣ ಉದ್ಯೋಗ ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ಸದಸ್ಯರು ಸೋಮವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಕಳೆದ 16 ವರ್ಷಗಳಿಂದ ಗ್ರಾಮೀಣ ಬಡವರಿಗೆ ಉದ್ಯೋಗ ಖಾತರಿ ನೀಡುತ್ತಿದ್ದ ನರೇಗಾ ಯೋಜನೆಯನ್ನು ಬದಲಿಸಿ ಜಾರಿಗೊಳಿಸಿರುವ ವಿಬಿಜಿ ರಾಮ್ ಜೀ ಯೋಜನೆಯಿಂದ ಕಾರ್ಮಿಕರ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಎಂದು ಆರೋಪಿಸಿದರು. ಕೆರೆ, ಗೋಕಟ್ಟೆ, ಚೆಕ್‌ಡ್ಯಾಂ ಸೇರಿದಂತೆ ಹೂಳೆತ್ತುವ ಕಾಮಗಾರಿಗಳನ್ನು ಕೈಬಿಟ್ಟ ಪರಿಣಾಮ ಸಾವಿರಾರು ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ಕಾಮಗಾರಿಗಳ ಆಯ್ಕೆ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು. ಹೂಳೆತ್ತುವ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಬೇಕು. ಕೆಲಸದ ವೇಳೆ ಮೃತಪಟ್ಟ ಕಾರ್ಮಿಕರ ಪರಿಹಾರ ಮೊತ್ತವನ್ನು ₹20 ಲಕ್ಷಕ್ಕೆ ಹೆಚ್ಚಿಸಬೇಕು. ವಿದ್ಯಾವಂತ ಯುವಕರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಬೇಕು. ವಿಬಿಜಿ ರಾಮ್ ಜೀ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಕಡಿಮೆ ಮಳೆಯ ಪ್ರದೇಶವಾಗಿರುವ ಚಳ್ಳಕೆರೆ ತಾಲೂಕಿನಲ್ಲಿ ಕೂಲಿ ಕೆಲಸವೇ ಸಾವಿರಾರು ಕುಟುಂಬಗಳ ಜೀವನಾಧಾರವಾಗಿದ್ದು, ಯೋಜನೆಯಡಿ 200 ಮಾನವ ದಿನಗಳ ಉದ್ಯೋಗ ನೀಡಬೇಕು. ಅಲ್ಲದೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಜಾನುವಾರುಗಳಿಗೆ ಮೇವು ಕೊರತೆ ಹಿನ್ನೆಲೆಯಲ್ಲಿ ತುರ್ತಾಗಿ ಗೋಶಾಲೆಗಳನ್ನು ಆರಂಭಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಗ್ರಾಮೀಣ ಜನರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ನಿರಂತರ ಉದ್ಯೋಗ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿತು.
ಈ ಬಾರಿ ಸಮರ್ಪಕ ಮಳೆಯಾಗದ ಕಾರಣ ತಾಲೂಕಿನಾದ್ಯಂತ ಬರದ ಛಾಯೆ ಆವರಿಸಿದ್ದು, ಪರಶುರಾಂಪುರ, ಸಿದ್ದೇಶ್ವರನದುರ್ಗ, ಗೌರಿಪುರ, ಪಗಲಬಂಡೆ, ಕೊರಲಕುಂಟೆ, ದೊಡ್ಡೇರಿ, ಉಪಾರಹಟ್ಟಿ, ಬೊಮ್ಮಸಮುದ್ರ, ಕೆಂಚವೀರನಹಳ್ಳಿ, ಚೌಳುರು, ಬಸವೇಶ್ವರ ಕಾಲೋನಿ, ಜುಂಜರಗುಂಟೆ, ಗೋಪನಹಳ್ಳಿ, ಚೆನ್ನಮನಗತಿ, ಮತ್ಸುಸಮುದ್ರ, ಚಟೇಕಂಬ, ತಿಮ್ಮಪ್ಪನಹಳ್ಳಿ, ಜಾಜೂರು, ದೇವರಮರಿಕುಂಟೆ, ಸಾಣಿಕೆರೆ ಹಾಗೂ ಕಾಪರಹಳ್ಳಿ ಗ್ರಾಮಗಳ ಕೂಲಿ ಕಾರ್ಮಿಕರು ಕೆಲಸಕ್ಕೆ ಸಿದ್ಧರಿದ್ದರೂ, ಕಳೆದ ಮೂರು ವರ್ಷಗಳಿಂದ ಜಾಬ್ ಕಾರ್ಡ್ ದೊರೆಯದೇ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್, “ಒಂದು ವಾರದೊಳಗೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಹೊಸ ಜಾಬ್ ಕಾರ್ಡ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಯಡಿ ಉದ್ಯೋಗ ಕಲ್ಪಿಸಲು ಬದ್ಧರಾಗಿದ್ದೇವೆ” ಎಂದು ಭರವಸೆ ನೀಡಿದರು.









About The Author
Discover more from JANADHWANI NEWS
Subscribe to get the latest posts sent to your email.