ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಪಟ್ಟಣದ ಶ್ರೀ ಸೀತಾರಾಘವ ಸೌಹಾರ್ದ ಸಹಕಾರಿ ಬ್ಯಾಂಕ್ 2025–26ನೇ ಸಾಲಿನಲ್ಲಿ ₹1.48 ಕೋಟಿ ನಿವ್ವಳ ಲಾಭ ಗಳಿಸಿದ್ದು, ಈ ಲಾಭಾಂಶವನ್ನು ಸಂಘದ ಸದಸ್ಯರಿಗೆ ಹಂಚಿಕೆ ಮಾಡಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಹಂಜಿ ಶಿವಸ್ವಾಮಿ ತಿಳಿಸಿದರು.
ಪಟ್ಟಣದ ಗಣೇಶ ಸದನದಲ್ಲಿ ನಡೆದ ಬ್ಯಾಂಕಿನ 28ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರಿ ಮಿತ್ರರ ಶ್ರಮದಿಂದ 1914ರಲ್ಲಿ ಸ್ಥಾಪನೆಯಾದ ಬ್ಯಾಂಕ್ ಹಂತಹಂತವಾಗಿ ಅಭಿವೃದ್ಧಿ ಹೊಂದಿ ಇಂದು ಆರ್ಥಿಕವಾಗಿ ಸದೃಢ ಸಂಸ್ಥೆಯಾಗಿ ಬೆಳೆದಿದೆ ಎಂದರು.
2025–26ನೇ ಸಾಲಿನಲ್ಲಿ ಬ್ಯಾಂಕ್ ₹191.81 ಕೋಟಿ ಠೇವಣಿ, ₹120.31 ಕೋಟಿ ಸಾಲ ವಿತರಣೆ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಬ್ಯಾಂಕ್‌ಗೆ 2,350 ಸದಸ್ಯರಿದ್ದು, ಸದಸ್ಯರ ಉಳಿತಾಯ ಹಾಗೂ ವಿವಿಧ ಠೇವಣಿ ಯೋಜನೆಗಳಿಗೆ ಉತ್ತಮ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು.
ಕೃಷಿ, ವ್ಯಾಪಾರ, ವಾಹನ, ಗೃಹ ಹಾಗೂ ವೈಯಕ್ತಿಕ ಸಾಲಗಳ ಮೂಲಕ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕ್ ನಿರಂತರ ಬೆಂಬಲ ನೀಡುತ್ತಿದೆ. ಬ್ಯಾಂಕ್‌ನ ಷೇರು ಬಂಡವಾಳ ₹6.80 ಕೋಟಿ, ದುಡಿಯುವ ಬಂಡವಾಳ ₹211.81 ಕೋಟಿ ಇದ್ದು, ಕಳೆದ ಸಾಲಿನ ಹೋಲಿಕೆಯಲ್ಲಿ ಶೇ.11.46ರಷ್ಟು ಪ್ರಗತಿ ದಾಖಲಿಸಿದೆ ಎಂದು ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಣದಡಿ ಜನಸಾಮಾನ್ಯರ ಹಿತದೃಷ್ಟಿಯಿಂದ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕಿನ ಯಶಸ್ಸಿಗೆ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮರ್ಪಿತ ಸೇವೆಯೇ ಪ್ರಮುಖ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಡಿ. ಅದಿರಾಜಯ್ಯ, ನಿರ್ದೇಶಕರಾದ ನಾಗಲಾಂಬಿಕ ಕಲ್ಮಠ್, ಟಿ.ಸಿ. ಪಾರ್ವತಮ್ಮ, ಟಿ.ಎಸ್. ಶ್ರೀನಾಥ್, ಎನ್. ಪ್ರತಾಪ್, ಜಿ. ಪಾಪಯ್ಯ, ಜಿ.ಎನ್. ತಿಪ್ಪೇಸ್ವಾಮಿ, ಡಿ.ಎನ್. ಕೃಷ್ಣಮೂರ್ತಿ, ಆರ್. ಲಕ್ಷ್ಮೀರಂಗನಾಥ, ಶ್ರೀಮತಿ ವೀಣಾ ಉಮೇಶ್, ಎನ್. ಕಲ್ಲೇಶ್, ಎ.ಜಿ. ಗಿರೀಶ, ವೃತ್ತಿಪರ ನಿರ್ದೇಶಕರಾದ ಎಸ್. ಮೋಹನ್ ಹಾಗೂ ನಾಗರಾಜ ಶಾಸ್ತ್ರಿ ಕುರ್ತಕೋಟಿ, ಕಾರ್ಯನಿರ್ವಹಣಾ ಸಮಿತಿ ಸದಸ್ಯ ಪಿ.ವಿ. ರಮೇಶ್, ಪ್ರಧಾನ ವ್ಯವಸ್ಥಾಪಕ ಎನ್. ಮಂಜುನಾಥ್ ಸೇರಿದಂತೆ ಹೊಸದುರ್ಗ, ಕಡೂರು, ಭದ್ರಾವತಿ ಹಾಗೂ ಬೆಂಗಳೂರು ಶಾಖೆಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.