June 21, 2026
IMG-20260621-WA0002

ಪಾವಗಡ, ಜೂನ್ 20: ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಮಹತ್ತರ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಹಾಗೂ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಪಾವಗಡ, ಕಳೆದ 34 ವರ್ಷಗಳಿಂದ ಕುಷ್ಠರೋಗ, ಕ್ಷಯರೋಗ ನಿರ್ಮೂಲನೆ ಮತ್ತು ಅಂಧತ್ವ ನಿಯಂತ್ರಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿದೆ.

1992ರಿಂದ ಪಾವಗಡ ಹಾಗೂ ಗಡಿ ಭಾಗದ ಪ್ರದೇಶಗಳಲ್ಲಿ ಕುಷ್ಠರೋಗದ ಪ್ರಮಾಣ ಹೆಚ್ಚಿದ್ದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮನವಿಯ ಮೇರೆಗೆ ಸಂಸ್ಥೆಯು ಕುಷ್ಠರೋಗ ನಿರ್ಮೂಲನಾ ಯೋಜನೆ, ಕ್ಷಯರೋಗ ಹಾಗೂ ಅಂಧತ್ವ ನಿಯಂತ್ರಣ ಕಾರ್ಯಕ್ರಮಗಳನ್ನು ಆರಂಭಿಸಿತು. ಬೆಲ್ಜಿಯಂನ ಡೇಮಿಯನ್ ಫೌಂಡೇಷನ್‌ನ ಸಹಕಾರದೊಂದಿಗೆ ಈ ಯೋಜನೆಗಳನ್ನು ಸಂಪೂರ್ಣ ಉಚಿತವಾಗಿ ಜಾರಿಗೊಳಿಸಲಾಗುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಾದರಿ ಯೋಜನೆಗಳಾಗಿ ಗುರುತಿಸಿಕೊಂಡಿವೆ.
ಇಲ್ಲಿಯವರೆಗೆ 3,922ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಔಷಧೋಪಚಾರ, ಆಹಾರ ಸಾಮಗ್ರಿ, ವಸ್ತ್ರ ವಿತರಣೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳನ್ನು ಒದಗಿಸಲಾಗಿದೆ. ಗಾಂಧಿ ಜಯಂತಿ, ಯುಗಾದಿ, ಸಂಕ್ರಾಂತಿ ಹಾಗೂ ದಸರಾ ಹಬ್ಬಗಳ ಸಂದರ್ಭಗಳಲ್ಲಿ ರೋಗಿಗಳಿಗೆ ಹೊಸ ಬಟ್ಟೆ, ಹೊದಿಕೆ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ.
ಇದರ ಜೊತೆಗೆ ಹೊಲಿಗೆ ಯಂತ್ರ, ಆಡು-ಮೇಕೆ ವಿತರಣೆ, ಪೆಟ್ಟಿಗೆ ಅಂಗಡಿ ಸ್ಥಾಪನೆಗೆ ನೆರವು, ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯಧನ ಹಾಗೂ ಮನೆಗಳ ದುರಸ್ತಿ ಸೇರಿದಂತೆ ಪುನರ್ವಸತಿ ಕಾರ್ಯಕ್ರಮಗಳನ್ನೂ ಸಂಸ್ಥೆ ಯಶಸ್ವಿಯಾಗಿ ನಡೆಸುತ್ತಿದೆ. ತೀವ್ರ ಸಂಕಷ್ಟದಲ್ಲಿರುವ ರೋಗಿಗಳಿಗೆ ಉಚಿತ ಮನೆಗಳನ್ನು ನಿರ್ಮಿಸಿ ನೀಡಿರುವುದು ಗಮನಾರ್ಹವಾಗಿದೆ.
ಅಂಗವಿಕಲತೆಯಿಂದ ಬಳಲುತ್ತಿದ್ದ ಸುಮಾರು 671ಕ್ಕೂ ಹೆಚ್ಚು ರೋಗಿಗಳಿಗೆ ಪುನರ್‌ಜೋಡಣಾ ಶಸ್ತ್ರಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ನಡೆಸಲಾಗಿದೆ. ಬೆಂಗಳೂರು ಮತ್ತು ಚೆನ್ನೈ ನಗರಗಳಿಂದ ಆಗಮಿಸುವ ತಜ್ಞ ವೈದ್ಯರು ಪ್ರತಿ ಎರಡು ತಿಂಗಳಿಗೊಮ್ಮೆ ಈ ಸೂಕ್ಷ್ಮ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಹಾಗೂ ಫಿಜಿಯೋಥೆರಪಿ ನೀಡಲಾಗುತ್ತಿದ್ದು, ಅವರು ಸಮಾಜದ ಮುಖ್ಯವಾಹಿನಿಗೆ ಮರಳಲು ನೆರವಾಗುತ್ತಿದೆ.
ಇದಕ್ಕೆ ಉದಾಹರಣೆಯಾಗಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಚೌಡಮ್ಮ ಅವರು ಜುಲೈ 2025ರಲ್ಲಿ ಪುನರ್‌ಜೋಡಣಾ ಶಸ್ತ್ರಚಿಕಿತ್ಸೆಗೆ ಒಳಗಾಗಿ ತಮ್ಮ ಬಲಗೈಯನ್ನು ಮರಳಿ ಕಾರ್ಯಕ್ಷಮಗೊಳಿಸಿಕೊಂಡರು. ಬಳಿಕ ಅವರಿಗೆ ಕೊಪ್ಪಳದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ದೊರೆತು, ತಮ್ಮ ಸಂತೋಷವನ್ನು ಸಂಸ್ಥೆಯ ರೂವಾರಿ ಪೂಜ್ಯ ಸ್ವಾಮಿ ಜಪಾನಂದಜೀ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಸಂಸ್ಥೆಯ ಸೇವೆಗಳಿಂದ ಅನೇಕ ಯುವಕರು, ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದ ಜನರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಿದೆ. ತಳ್ಳುವ ಬಂಡಿ, ಪೆಟ್ಟಿಗೆ ಅಂಗಡಿ, ಟೈಲರಿಂಗ್ ಸೇರಿದಂತೆ ವಿವಿಧ ಸ್ವಯಂ ಉದ್ಯೋಗ ಚಟುವಟಿಕೆಗಳ ಮೂಲಕ ಜೀವನ ರೂಪಿಸಿಕೊಳ್ಳಲು ಸಂಸ್ಥೆ ನೆರವಾಗಿದೆ.
ಅಂತರರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಅನೇಕ ಪ್ರಶಸ್ತಿಗಳು ಲಭಿಸಿದ್ದರೂ, “ಜೀವನಲ್ಲಿ ಶಿವನನ್ನು ಕಾಣುವ” ಎಂಬ ಸ್ವಾಮಿ ವಿವೇಕಾನಂದರ ಆದರ್ಶವನ್ನು ಅನುಸರಿಸಿ ಸೇವೆಯನ್ನೇ ಧ್ಯೇಯವನ್ನಾಗಿ ಮಾಡಿಕೊಂಡು ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಮುಂದೆಯೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಸಂಕಲ್ಪ ಹೊಂದಿರುವುದಾಗಿ ಸಂಸ್ಥೆಯ ರೂವಾರಿ ಪೂಜ್ಯ ಸ್ವಾಮಿ ಜಪಾನಂದಜೀ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ತಜ್ಞರು ಹಾಗೂ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಚಂದ್ರಕಲಾ ಜಿ.ಆರ್., ಡಾ. ಅಭಿಷೇಕ್, ಡಾ. ಕೀರ್ತಿ ಅಭಿಷೇಕ್, ಡಾ. ಸ್ವಾತಿ, ಡಾ. ಲಾವಣ್ಯ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರ ಸೇವೆಯನ್ನು ಪೂಜ್ಯರು ಶ್ಲಾಘಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading