ನಾಯಕನಹಟ್ಟಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೊಸೆದೇವರಹಟ್ಟಿ ಗ್ರಾಮದ ಸಮೀಪದ ಶಿಡ್ಲಹಳ್ಳದಿಂದ ನಾಯಕನಹಟ್ಟಿ ದೊಡ್ಡಕೆರೆಗೆ ನೀರು ಹರಿಸುವ ಉದ್ದೇಶದಿಂದ ಕೈಗೊಳ್ಳಲಾಗಿರುವ ಚೆಕ್‌ಡ್ಯಾಂ ಹಾಗೂ ಕಾಲುವೆ ನಿರ್ಮಾಣ ಕಾಮಗಾರಿಯ ಗುಣಮಟ್ಟದ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಅನುಮಾನ ವ್ಯಕ್ತಪಡಿಸಿದೆ. ಅಂದಾಜು ₹2 ಕೋಟಿ ವೆಚ್ಚದ ಕಾಮಗಾರಿಯ ಸಮಗ್ರ ತನಿಖೆ ನಡೆಸಿ, ಗುಣಮಟ್ಟ ಖಚಿತಪಡಿಸುವವರೆಗೆ ಬಿಲ್ ಪಾವತಿಸದಂತೆ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಪಕ್ಷದ ಮುಖಂಡರು ಮನವಿ ಸಲ್ಲಿಸಿದ್ದಾರೆ.
ಕಾಮಗಾರಿಯ ವಿನ್ಯಾಸ, ಮಣ್ಣಿನ ಸಂಕುಚನ ಹಾಗೂ ಕಾಂಕ್ರೀಟ್ ಗುಣಮಟ್ಟ ಸೇರಿದಂತೆ ಹಲವು ತಾಂತ್ರಿಕ ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪಕ್ಷ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವಾಸ್ತವಾಂಶಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದೆ.
ಅಕ್ವೆಡಕ್ಟ್ ಅಥವಾ ಎತ್ತರಿಸಿದ ಕಾಲುವೆಯ ವಿನ್ಯಾಸ ಸಮರ್ಪಕವಾಗಿದೆಯೇ, ನೀರಿನ ಹರಿವಿಗೆ ಅನುಕೂಲವಾಗುವಂತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆಯೇ ಎಂಬುದನ್ನು ತಜ್ಞರಿಂದ ಪರಿಶೀಲಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಮಣ್ಣಿನ ಸಂಕುಚನ, ಕಾಂಕ್ರೀಟ್‌ನ ದಪ್ಪ ಮತ್ತು ಏಕರೂಪತೆ ಹಾಗೂ ಎಂ-ಸ್ಯಾಂಡ್ ಸೇರಿದಂತೆ ನಿರ್ಮಾಣ ಸಾಮಗ್ರಿಗಳ ಗುಣಮಟ್ಟವನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು ಎಂದು ಆಗ್ರಹಿಸಲಾಗಿದೆ.
ಸ್ವತಂತ್ರ ತಾಂತ್ರಿಕ ತಜ್ಞರ ತಂಡದಿಂದ ಕಾಮಗಾರಿಯ ಪರಿಶೀಲನೆ ನಡೆಸಿ, ಅಂದಾಜು ಪಟ್ಟಿ, ಕಾಮಗಾರಿಯ ಅಳತೆಗಳು, ಸಾಮಗ್ರಿಗಳ ಬಳಕೆ ಹಾಗೂ ಗುಣಮಟ್ಟ ಪರೀಕ್ಷಾ ವರದಿಗಳನ್ನು ಪರಿಶೀಲಿಸಬೇಕು. ಅಂತಿಮ ಬಿಲ್ ಪಾವತಿಗೂ ಮುನ್ನ ಕಾಮಗಾರಿಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು. ಲೋಪಗಳು ದೃಢಪಟ್ಟಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಹೊಣೆಗಾರ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂಬುದು ಪಕ್ಷದ ಪ್ರಮುಖ ಬೇಡಿಕೆಯಾಗಿದೆ.
ಸಾರ್ವಜನಿಕರ ಹಣದಿಂದ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಮತ್ತು ಪಾರದರ್ಶಕತೆ ಕಾಪಾಡುವುದು ಅಗತ್ಯ. ಹೀಗಾಗಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ತಾಂತ್ರಿಕ ಇಲಾಖೆ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಬಹಿರಂಗಪಡಿಸಬೇಕು ಎಂದು ಕೆ.ಆರ್.ಎಸ್. ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕೆ.ಆರ್.ಎಸ್. ಪಕ್ಷದ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಮಹೇಶ್ ಸಿ. ನಗರಂಗೆರೆ, ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಬಾಲರಾಜ್ ಯಾದವ್, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಕೃಷ್ಣಪ್ಪ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಮುಸ್ತಾಕ್ ಅಹಮದ್, ಚಳ್ಳಕೆರೆ ತಾಲ್ಲೂಕು ಉಪಾಧ್ಯಕ್ಷ ಜಬಿವುಲ್ಲಾ, ರೈತ ಘಟಕದ ಜಿಲ್ಲಾ ಕಾರ್ಯದರ್ಶಿ ರಾಮಚಂದ್ರಪ್ಪ, ಮುಖಂಡರಾದ ಕೆ. ಮುರಳಿ ಮತ್ತು ರಾಘವೇಂದ್ರ ಸೇರಿದಂತೆ ಬೋಸದೇವರಹಟ್ಟಿ ಗ್ರಾಮದ ಗ್ರಾಮಸ್ಥರು ಹಾಗೂ ಸೈನಿಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.