ವರದಿ ಎಂ ಶಿವಮೂರ್ತಿ ನಾಯಕನಹಟ್ಟಿ.
ನಾಯಕನಹಟ್ಟಿ: ಪಟ್ಟಣದ ದೊರೆಗಳ ಮಟ್ಟಿ ಸ್ಥಳದಲ್ಲಿ ದಸರಾ ದರ್ಬಾರ್ ಕಾರ್ಯಕ್ರಮ ಆಯೋಜಿಸುವ ಕುರಿತು ಪೂರ್ವಭಾವಿ ಸಭೆ ಭಾನುವಾರ ನಡೆಯಿತು. ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ, ಐತಿಹಾಸಿಕ ಪರಂಪರೆಯ ಸಂರಕ್ಷಣೆ ಹಾಗೂ ಯುವಜನರ ಭಾಗವಹಿಸುವಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮುಖಂಡರು ಚರ್ಚಿಸಿದರು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮುಖಂಡ ಬೋರಸ್ವಾಮಿ, ದೊರೆಗಳ ಮಟ್ಟಿ ಸ್ಥಳದ ಐತಿಹಾಸಿಕ ಮಹತ್ವವನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ದಸರಾ ದರ್ಬಾರ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಹಿಂದಿನಿಂದಲೂ ದಸರಾ ಸಂದರ್ಭದಲ್ಲಿ ಪೂರ್ವಜರು ಈ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು ಎಂಬ ನಂಬಿಕೆಯಿದೆ. ಈ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ದೊರೆಗಳ ಸಮಾಧಿಗೆ ಎಲ್ಲ ವರ್ಗದ ಜನರು ಭೇಟಿ ನೀಡಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಕಳೆದ ವರ್ಷ ಮೊದಲ ಬಾರಿಗೆ ಆಯೋಜಿಸಿದ್ದ ದಸರಾ ದರ್ಬಾರ್ ಕಾರ್ಯಕ್ರಮ ಯಶಸ್ವಿಯಾಗಿತ್ತು. ಈ ಬಾರಿ ಎರಡು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಹಟ್ಟಿ ಮಲ್ಲಪ್ಪ ನಾಯಕರು ಏಳು ಕೆರೆಗಳನ್ನು ನಿರ್ಮಿಸಿ ಎಲ್ಲ ವರ್ಗದ ಜನರಿಗೂ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಜನರ ಬದುಕು ಹಸನಾಗಿಸಲು ಶ್ರಮಿಸಿದ್ದರು ಎಂಬ ಐತಿಹಾಸಿಕ ನೆನಪುಗಳನ್ನು ಯುವಜನರಿಗೆ ಪರಿಚಯಿಸಬೇಕು. ಮುಂದಿನ ದಿನಗಳಲ್ಲಿ ಮೈಸೂರು ದಸರಾ ಮಾದರಿಯಲ್ಲಿ ನಾಯಕನಹಟ್ಟಿಯ ದಸರಾ ದರ್ಬಾರ್‌ಗೂ ಹೆಚ್ಚಿನ ಮಹತ್ವ ದೊರೆಯುವಂತೆ ರೂಪಿಸಬೇಕು ಎಂದು ಹೇಳಿದರು.
ಮುಖಂಡ ಅಣಜಿ ತಿಪ್ಪೇಸ್ವಾಮಿ ಮಾತನಾಡಿ, ಹಟ್ಟಿ ಮಲ್ಲಪ್ಪ ನಾಯಕರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಎಲ್ಲ ಸಮುದಾಯಗಳ ಜನರ ಹಿತಕ್ಕಾಗಿ ಶ್ರಮಿಸಿದವರು. ಅವರು ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಗಳಿಗೆ ತಮ್ಮ ಕಿರೀಟವನ್ನು ಸಮರ್ಪಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂಬ ಐತಿಹಾಸಿಕ ಪರಂಪರೆಯನ್ನು ಸ್ಮರಿಸಬೇಕು. ಹಿಂದಿನ ಕಾಲದಲ್ಲಿ ಸಮಾಜದ ಸ್ಥಿತಿ ಹೇಗಿತ್ತು ಮತ್ತು ಇಂದು ಯುವಜನರು ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಮೇಘ ಹೋಟೆಲ್ ಬಸವರಾಜ್ ಮಾತನಾಡಿ, ದಸರಾ ದರ್ಬಾರ್ ಕಾರ್ಯಕ್ರಮವನ್ನು ಯಾವುದೇ ಅನಾಹುತಗಳಿಗೆ ಆಸ್ಪದ ನೀಡದಂತೆ ಅಚ್ಚುಕಟ್ಟಾಗಿ ಆಯೋಜಿಸಬೇಕು. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗುವಂತೆ ರೂಪಿಸಬೇಕು. ಸಮಾಜದ ಅಧಿಕಾರಿಗಳು, ಹಿರಿಯರು, ಮುಖಂಡರು ಹಾಗೂ ಯುವಜನರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಿಗೆ ಆಹ್ವಾನ ನೀಡಲು ಮನವಿ
ಪಟ್ಟಣ ಪಂಚಾಯಿತಿ ಸದಸ್ಯ ಓಬಯ್ಯ ದಾಸ್ ಮಾತನಾಡಿ, ವಾಲ್ಮೀಕಿ ಜಯಂತಿ ಸೇರಿದಂತೆ ಸಮುದಾಯದ ಕಾರ್ಯಕ್ರಮಗಳ ಆಯೋಜನೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪಟ್ಟಣ ಪಂಚಾಯಿತಿಯಲ್ಲಿ ನಮ್ಮ ಸಮುದಾಯದ ಹತ್ತು ಸದಸ್ಯರಿದ್ದರೂ ಸ್ಥಳೀಯರಾದ ನಮಗೆ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಯಂತಿ ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಮನವಿ ಮಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಂಪಾದಕ ದಿನೇಶ್ ಗೌಡಗೆರೆ ಮಾತನಾಡಿ, ಪಾಳೇಗಾರರ ಇತಿಹಾಸಕ್ಕೆ ಮಹತ್ವದ ಹಿನ್ನೆಲೆಯಿದೆ. ಮದಕರಿ ನಾಯಕರು ಮತ್ತು ಹಟ್ಟಿ ಮಲ್ಲಪ್ಪ ನಾಯಕರು ಕೆರೆಗಳನ್ನು ನಿರ್ಮಿಸುವ ಮೂಲಕ ಜನರಿಗೆ ಅನುಕೂಲವಾಗುವ ಕೆಲಸಗಳನ್ನು ಮಾಡಿದ್ದಾರೆ. ಇಂತಹ ಐತಿಹಾಸಿಕ ಪರಂಪರೆಯನ್ನು ಸ್ಮರಿಸುವ ದಸರಾ ದರ್ಬಾರ್ ಕಾರ್ಯಕ್ರಮಕ್ಕೆ ಹೆಚ್ಚಿನ ಜನರ ಸಹಕಾರ ಅಗತ್ಯವಿದೆ. ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಇಂತಹ ಸಾಂಪ್ರದಾಯಿಕ ಉತ್ಸವಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ನಾಯಕ ಸಮಾಜದ ಮೃತ ವಕೀಲ ಜಗದೀಶ್ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಬಕಾರಿ ತಿಪ್ಪೇಸ್ವಾಮಿ, ಶಿಕ್ಷಕ ಜಿ.ಎಂ. ಜಯಣ್ಣ, ಶಿಕ್ಷಕ ಕೆ.ಓ. ರಾಜಯ್ಯ, ಮುಖಂಡ ಮುದಿಯಪ್ಪ ಸೇರಿದಂತೆ ಹಲವರು ಮಾತನಾಡಿದರು.
ಸಭೆಯಲ್ಲಿ ಬಗರ್ ಹುಕುಂ ಸದಸ್ಯ ಬೋರನಾಯಕ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಪ್ಪ ಗೌಡಗೆರೆ, ಮಂಜಣ್ಣ, ಕಾಮರಾಜ್, ದೊರೆ ತಿಪ್ಪೇಸ್ವಾಮಿ, ಪಟ್ಟಣ ಪಂಚಾಯತಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ, ಮುಖಂಡ ಧನಂಜಯ ಬೋಸೆದೇವರಹಟ್ಟಿ, ವಿಷ್ಣು, ಕಾಟಯ್ಯ ಮಲ್ಲೂರಹಳ್ಳಿ, ಅಶೋಕ್ ರೇಖಲಗೆರೆ, ನಾಗರಾಜ್ ಮಲ್ಲೂರಹಳ್ಳಿ, ಯಜಮಾನ ಬೋರಯ್ಯ, ಬೋಸೆ ರಂಗಪ್ಪ, ಪಾಲಯ್ಯ, ವಕೀಲ ನಾಗರಾಜ್, ವಕೀಲ ನಾಗೇಂದ್ರಪ್ಪ, ನಾಟಕ ಕಲಾವಿದ ಸೂರಯ್ಯ , ವರುವು ಕಾಟಯ್ಯ, ಮಲ್ಲಿಕಾರ್ಜುನ ಮಲ್ಲೂರಹಳ್ಳಿ, ವಕೀಲ ಮಲ್ಲೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.