September 10, 2026
IMG-20260910-WA0141

ನಾಯಕನಹಟ್ಟಿ: ಶ್ರಾವಣ ಮಾಸದ ಕೊನೆಯ ಗುರುವಾರದ ಅಂಗವಾಗಿ ಪಟ್ಟಣದಲ್ಲಿ ಸಾಂಪ್ರದಾಯಿಕ ಕೆರೆ ಗಂಗಮ್ಮ ಉತ್ಸವವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.

ಕೃಷಿ ಪ್ರಧಾನವಾದ ಈ ಆಚರಣೆಯ ಅಂಗವಾಗಿ ಹಿರೇಕೆರೆಯ ನೀರಿನಿಂದ ಕೆರೆ ಏರಿ ಮೇಲಿರುವ ಬಸವಣ್ಣನ ವಿಗ್ರಹಗಳಿಗೆ 101 ಬಿಂದಿಗೆ ನೀರಿನಿಂದ ಅಭಿಷೇಕ ನೆರವೇರಿಸಲಾಯಿತು. ಕೆರೆಯ ಉತ್ತರ ಮತ್ತು ದಕ್ಷಿಣ ದಿಕ್ಕಿನ ಕೋಡಿ ಸ್ಥಳಗಳಲ್ಲಿ ಎಡೆ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು.

ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠದಿಂದ ಮಠದ ಗೂಳಿಯನ್ನು (ಬಸವಣ್ಣ) ಪಟ್ಟ ಪೀತಾಂಬರದಿಂದ ಅಲಂಕರಿಸಿ, ಕುಂಭ ಹೊತ್ತ ಮಹಿಳೆಯರು ಹಾಗೂ ನೂರಾರು ಭಕ್ತರು ವಿವಿಧ ವಾದ್ಯಗಳೊಂದಿಗೆ ಸುಮಾರು 6 ಕಿ.ಮೀ. ದೂರದಲ್ಲಿರುವ ಹಿರೇಕೆರೆಯತ್ತ ಮೆರವಣಿಗೆಯಲ್ಲಿ ಸಾಗಿದರು. ಡೋಲು, ಡಮರುಗ, ಶಹನಾಯಿ ಹಾಗೂ ನಂದಿಕೋಲು ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಹಿರೇಕೆರೆಯಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಬಸವಣ್ಣನ ವಿಗ್ರಹಗಳಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಿ, ಕೆರೆಯ ನೀರಿನಿಂದ ಅಭಿಷೇಕ ಮಾಡಲಾಯಿತು. ನಂತರ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಕೆ.ಎನ್. ತಿಪ್ಪೇರುದ್ರಪ್ಪ, “ಶ್ರಾವಣ ಮಾಸದ ಕೊನೆಯ ಗುರುವಾರದಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳ ಆಶೀರ್ವಾದದೊಂದಿಗೆ ಕೆರೆ ಗಂಗಮ್ಮ ಪೂಜೆ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಮಳೆ ಬಾರದ ಸಂದರ್ಭದಲ್ಲಿ ಈ ಪೂಜೆ ನೆರವೇರಿಸುವುದರಿಂದ ನಾಡಿನಲ್ಲಿ ಉತ್ತಮ ಮಳೆ, ಸಮೃದ್ಧ ಬೆಳೆ, ಸುಖ, ಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಅದೇ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದೇವೆ” ಎಂದರು.

ಕೆರೆಯಲ್ಲಿ ನೀರು ಸಂಗ್ರಹವಾಗಿದ್ದರೆ ಕೆರೆ ಗಂಗಮ್ಮ ಉತ್ಸವದ ಸಂಭ್ರಮ ಮತ್ತಷ್ಟು ಹೆಚ್ಚುತ್ತದೆ. ನಾಡಿನಲ್ಲಿ ಉತ್ತಮ ಮಳೆ ಸುರಿದು ಕೃಷಿ ಚಟುವಟಿಕೆಗಳು ಸಮೃದ್ಧಿಯಾಗಲಿ ಎಂದು ಗ್ರಾಮಸ್ಥರು ಹಾಗೂ ಭಕ್ತರು ದೇವರಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಹಾಂತೇಶ್ ದಿವಾಕರ್, ಬಸೆಟ್ಲರ್ ರಾಜಣ್ಣ, ದಾಸರ ಗಿರಿಯಪ್ಪ, ಗೌಡ್ರು ರುದ್ರೇಶ್, ಗೊಂಚಿಗಾರ್ ಜಿ.ಟಿ. ತಿಪ್ಪೇಶ್, ಪಿ.ಎಂ. ರಾಜಶೇಖರಪ್ಪ, ದಳವಾಯಿ ರುದ್ರಮಣಿ, ಎನ್.ಬಿ. ತಿಪ್ಪೇಸ್ವಾಮಿ, ಎನ್.ಸಿ. ತಿಪ್ಪೇಸ್ವಾಮಿ, ಓಂ ಪ್ರಕಾಶ್, ಜಂಗಮ ಜ್ಯೋತಿ ತಿಪ್ಪೇಸ್ವಾಮಿ, ಓಂ ಮಹಾಂತೇಶ್, ಕೋಟೆ ಚಂದ್ರಣ್ಣ, ಸುಧಾಕರ್, ಕಡ್ಡಿಪುಡಿ ತಿಪ್ಪೇಶ್, ರಾಜೇಂದ್ರ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading