ಚಳ್ಳಕೆರೆ, ಸೆ.09: ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಬೆಂಗಳೂರು ಇದರ ಆಡಳಿತ ಅಧ್ಯಕ್ಷರಾದ ಶ್ರೀ ನಾಗರದ ಮಹದೇವಪ್ಪ ಅವರು ಬುಧವಾರ ಚಳ್ಳಕೆರೆ ತಾಲೂಕಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯಿಂದ ಹಾನಿಗೊಳಗಾಗಿರುವ ಬೆಳೆಗಳನ್ನು ಪರಿಶೀಲಿಸಿ ರೈತರ ಸಮಸ್ಯೆಗಳನ್ನು ಆಲಿಸಿದರು.
ತಾಲೂಕಿನ ದೊಡ್ಡೇರಿ ಗ್ರಾಮದ ರೈತ ರಾಜಣ್ಣ ಅವರ ಶೇಂಗಾ ತಾಕು ಹಾಗೂ ರಂಗಸ್ವಾಮಿ ಅವರ ತೊಗರಿ ಬೆಳೆಯ ಜಮೀನಿಗೆ ಭೇಟಿ ನೀಡಿದ ಅವರು, ಬೆಳೆಗಳ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಿದರು. ತೀವ್ರ ಮಳೆ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿರುವುದನ್ನು ಗಮನಿಸಿದರು.
ಚಳ್ಳಕೆರೆ ತಾಲೂಕಿನಲ್ಲಿ ಮಳೆ ಕೊರತೆಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದ ಅವರು, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಂಡರೆ ತಾಲೂಕಿನಲ್ಲಿ ನೀರಿನ ಕೊರತೆ ನೀಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ವಿಷಯವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಚಳ್ಳಕೆರೆ ತಾಲೂಕಿನಲ್ಲಿ ತೀವ್ರ ಬರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಫಸಲ್ ಬಿಮಾ ಯೋಜನೆಯಡಿ ವಿಮಾ ಪರಿಹಾರ ಪಡೆಯುವ ಕುರಿತು ರೈತರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹೇಶ್ವರಪ್ಪ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಎಸ್. ನವೀನ್, ಜಿಲ್ಲಾ ಪ್ರತಿನಿಧಿ ಕೇಶವ, ತಾಲೂಕು ಕೃಷಿಕ ಸಮಾಜದ ನಿರ್ದೇಶಕರಾದ ಬೀಮಾರೆಡ್ಡಿ, ವಂಶಿಕೃಷ್ಣ, ಗಿರೀಶ್, ಶ್ರೀನಿವಾಸರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೊಡ್ಡೇರಿ ಗ್ರಾಮದ ರೈತರಾದ ಕರುಣಾನಿಧಿ, ಜಯಣ್ಣ, ಚಂದ್ರಪ್ಪ, ಕೃಷಿ ಅಧಿಕಾರಿ ಎಂ. ತಿಪ್ಪೇಸ್ವಾಮಿ ಹಾಗೂ ತಾಂತ್ರಿಕ ಅಧಿಕಾರಿ ಮೇಘನ್. ಎಚ್. ಅವರು ಉಪಸ್ಥಿತರಿದ್ದರು.

About The Author
Discover more from JANADHWANI NEWS
Subscribe to get the latest posts sent to your email.