August 6, 2026
IMG-20260805-WA0460

ವರದಿ:ನಾಗತಿಹಳ್ಳಿಮಂಜುನಾಥ್

ಹೊಸದುರ್ಗ: ಪಟ್ಟಣದಲ್ಲಿರುವ ಎಸ್ಸಿ-ಎಸ್ಟಿ ವಿದ್ಯಾರ್ಥಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಸೋಮವಾರ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯಾರ್ಥಿಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿದ ಅವರು, ನಿಲಯಗಳಲ್ಲಿ ಸಮರ್ಪಕ ಶೌಚಾಲಯಗಳಿಲ್ಲದೆ ವಿದ್ಯಾರ್ಥಿಗಳು ಪ್ರತಿದಿನ ಸಮಸ್ಯೆ ಎದುರಿಸುತ್ತಿರುವುದು, ಕುಡಿಯುವ ನೀರು ಹಾಗೂ ಸ್ವಚ್ಛತೆಯ ವ್ಯವಸ್ಥೆ ತೀರಾ ಕಳಪೆಯಾಗಿರುವುದು, ಸರ್ಕಾರದಿಂದ ದೊರೆಯಬೇಕಾದ ಹಲವು ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಅಂಶಗಳನ್ನು ಗಮನಿಸಿದರು.
ಪರಿಶೀಲನೆ ವೇಳೆ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡು, ಸರ್ಕಾರದಿಂದ ನೀಡುವ ಕಿಟ್ ಹೊರತುಪಡಿಸಿ, ಅಗತ್ಯ ವಸ್ತುಗಳನ್ನು ನೀಡುತ್ತಿಲ್ಲ. ಕಂಪ್ಯೂಟರ್‌ಗಳನ್ನು ಅಳವಡಿಸಿದ್ದರೂ ಅವು ವರ್ಷಗಳಿಂದ ಬಳಕೆಯಾಗದೆ ಧೂಳು ಹಿಡಿದಿವೆ. ಡಿಜಿಟಲ್ ಶಿಕ್ಷಣಕ್ಕೆ ಅವಕಾಶವೇ ಇಲ್ಲದಂತಾಗಿದೆ ಎಂದು ದೂರಿದರು.
ಇದೇ ವೇಳೆ ಅಡುಗೆಮನೆಯ ಸ್ವಚ್ಛತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕೆ.ಎಸ್.ನವೀನ್ ಅವರು, ಅಡುಗೆಗೆ ಬಳಸುವ ನೀರಿನ ಟ್ಯಾಂಕ್‌ಗಳನ್ನು ಸುರಕ್ಷಿತವಾಗಿ ಮುಚ್ಚದೆ ಇರುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಅದೇ ನೀರನ್ನು ಅಡುಗೆಗೆ ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಅಲ್ಲದೆ, ಅಡುಗೆಯವರು ನೆಲದ ಮೇಲೆಯೇ ಚಪಾತಿ ತಯಾರಿಸುತ್ತಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿ, ಆಹಾರ ತಯಾರಿಕೆಯಲ್ಲಿ ಸ್ವಚ್ಛತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ವಿದ್ಯಾರ್ಥಿಗಳಿಗೆ ನೀಡುವುದಾಗಿ ಹೇಳಲಾಗಿರುವ ಸೊಳ್ಳೆ ಪರದೆಗಳನ್ನು ವಿತರಿಸದೆ, ಪಡೆದಿರುವಂತೆ ಸಹಿ ಮಾಡಿಸಿಕೊಂಡಿರುವ ಆರೋಪವೂ ಕೇಳಿಬಂದಿತು. ಈಗಾಗಲೇ ನಿಲಯ ತೊರೆದ ವಿದ್ಯಾರ್ಥಿಗಳ ಹೆಸರನ್ನೂ ದಾಖಲೆಗಳಲ್ಲಿ ಮುಂದುವರಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯಾರ್ಥಿಗಳೊಂದಿಗೆ ಕೆಲ ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಿರುವ ಆರೋಪಗಳೂ ಕೇಳಿಬಂದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳೊಂದಿಗೆ ಮಾನವೀಯತೆ ಹಾಗೂ ಗೌರವದಿಂದ ನಡೆದುಕೊಳ್ಳಬೇಕು ಎಂದು ಹಾಸ್ಟೆಲ್ ಮೇಲ್ವಿಚಾರಕರಿಗೆ ತಾಕೀತು ಮಾಡಿದರು.
ನಂತರ ಮಾತನಾಡಿದ ಕೆ.ಎಸ್. ನವೀನ್, “ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಕಲ್ಯಾಣಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ, ಆ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ತಲುಪದೇ ಇದ್ದರೆ ಅದರ ಉದ್ದೇಶವೇ ಹಾಳಾಗುತ್ತದೆ. ವಿದ್ಯಾರ್ಥಿಗಳ ಆರೋಗ್ಯ, ಶಿಕ್ಷಣ ಹಾಗೂ ಸುರಕ್ಷತೆಯ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ವಾರದೊಳಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ಸಂಬAಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು,” ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಮುಖಂಡರು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿದ್ದರು.”

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading