June 6, 2026
IMG-20260606-WA0198.jpg

ಚಳ್ಳಕೆರೆ, ಜೂನ್ 5: ಪರಿಸರ ಸಂರಕ್ಷಣೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಚಳ್ಳಕೆರೆ ತಾಲೂಕಿನ ಆದರ್ಶ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ಪ್ರಯೋಗಾಲಯಗಳನ್ನು ಶಾಸಕ ಟಿ. ರಘುಮೂರ್ತಿ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ರಘುಮೂರ್ತಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪರಿಸರದ ಸಮತೋಲನ ಕಾಪಾಡಲು ಗಿಡಮರಗಳ ಬೆಳವಣಿಗೆ ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳು ಪರಿಸರದ ಬಗ್ಗೆ ಜಾಗೃತಿ ಹೊಂದಿ ಪ್ರಕೃತಿಯನ್ನು ಉಳಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಜ್ಞಾನ ಶಿಕ್ಷಣವು ಕೇವಲ ಪಠ್ಯ ಜ್ಞಾನಕ್ಕೆ ಸೀಮಿತವಾಗದೆ ಪ್ರಾಯೋಗಿಕ ಅನುಭವದೊಂದಿಗೆ ಬೆಸೆದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಆದರ್ಶ ಕಾಲೇಜಿನ ಪ್ರಾಂಶುಪಾಲ ಪಾಪಣ್ಣ ಮಾತನಾಡಿ, ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದನ್ನು ಮರವಾಗಿ ಬೆಳೆಸುವ ಜವಾಬ್ದಾರಿ ವಹಿಸಬೇಕು. ಪ್ರಕೃತಿಯ ಸಂಪನ್ಮೂಲಗಳನ್ನು ಮಿತವಾಗಿ ಬಳಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರದ ಬಗ್ಗೆ ಕಾಳಜಿ ವಹಿಸುವ ಮನೋಭಾವ ಶಾಲಾ ಹಂತದಲ್ಲಿಯೇ ಬೆಳೆಸಬೇಕಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಸಂಶೋಧನಾ ಮನೋಭಾವ ಬೆಳೆಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ಪ್ರಯೋಗಾಲಯಗಳು ಕಲಿಕೆಯ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲಿವೆ. ಈ ಪ್ರಯೋಗಾಲಯಗಳ ಮೂಲಕ ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನವನ್ನು ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬರದ ನಾಡು ಎಂದು ಖ್ಯಾತಿ ಪಡೆದಿದ್ದ ಚಳ್ಳಕೆರೆ ತಾಲೂಕು ಇಂದು ವಿಜ್ಞಾನ ನಗರಿಯಾಗಿ ಪ್ರಖ್ಯಾತಿ ಪಡೆದಿದ್ದು, ಇದಕ್ಕೆ ಶಾಸಕರ ಶಿಕ್ಷಣ ಕ್ಷೇತ್ರದ ಮೇಲಿನ ಕಾಳಜಿ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೆಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್. ಮಂಜುನಾಥ್, ಶಾಲೆಯ ಮುಖ್ಯ ಶಿಕ್ಷಕ ಅಶೋಕ್ ರೆಡ್ಡಿ, ಎಸ್‌ಡಿಎಂಸಿ ಸಮಿತಿಯ ಕುಮಾರಸ್ವಾಮಿ, ದ್ಯಾಮಣ್ಣ, ಮಾಜಿ ನಗರಸಭೆ ಸದಸ್ಯ ರಮೇಶ್ ಗೌಡ, ಪೌರಾಯುಕ್ತೆ ಡಾ. ನಾಗವೇಣಿ, ಆರ್‌ಎಫ್‌ಒ ಈಶ್ವರ್, ಗಿರೀಶ್ ಕುಮಾರ್ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading