ಸಾಣೇಹಳ್ಳಿ, ಏಪ್ರಿಲ್ 30: ಇಲ್ಲಿನ ಶ್ರೀಮಠದ ಆವರಣದಲ್ಲಿ ಕಳೆದ ಹದಿನೆಂಟು ದಿನಗಳಿಂದ ನಡೆದ ಮಕ್ಕಳ ಹಬ್ಬ ಬೇಸಿಗೆ ಶಿಬಿರವು ಸಮಾರೋಪಗೊಂಡಿತು.






ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಕ್ಕಳಿಗೆ ಬಾಲ್ಯದಲ್ಲಿಯೇ ಸಾಹಿತ್ಯ, ಸಂಗೀತ, ಕಲೆ ಹಾಗೂ ಸಂಸ್ಕೃತಿಯ ಅರಿವು ಮೂಡಿಸಿದಾಗ ಮಾತ್ರ ಅವರು ಉತ್ತಮ ಪ್ರಜೆಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೇವಲ ಪುಸ್ತಕಾಧಾರಿತ ಶಿಕ್ಷಣಕ್ಕಿಂತ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಮುಖ್ಯ. ಇಂದಿನ ಪೋಷಕರು ಮಕ್ಕಳಿಗೆ ಅತಿಯಾದ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರನ್ನು ಮೃದುಸ್ವಭಾವದವರನ್ನಾಗಿ ಮಾಡುತ್ತಿದ್ದಾರೆ. ಆದರೆ ನಿಜವಾದ ಶಿಕ್ಷಣವು ಯಾವುದೇ ಪರಿಸ್ಥಿತಿಯಲ್ಲೂ ಬದುಕುವ ಧೈರ್ಯ ಹಾಗೂ ಸಂಸ್ಕಾರವನ್ನು ಕಲಿಸಬೇಕು ಎಂದು ಅಭಿಪ್ರಾಯಪಟ್ಟರು.
ಸೌಲಭ್ಯಕ್ಕಿಂತ ಸಂಸ್ಕಾರ ಮುಖ್ಯವಾಗಬೇಕು. ಮಕ್ಕಳು ಸಿಕ್ಕ ಆಹಾರವನ್ನು ಸ್ವೀಕರಿಸುವುದು, ಸಿಕ್ಕ ಪರಿಸ್ಥಿತಿಯಲ್ಲಿ ಬದುಕುವ ಹದವನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಅವರು ಬದುಕಿನ ಮೌಲ್ಯಗಳನ್ನು ಅರಿತುಕೊಳ್ಳುತ್ತಾರೆ ಎಂದರು.
ಶಿಕ್ಷಣವು ಕೇವಲ ಹಣ ಸಂಪಾದನೆಗೆ ಸೀಮಿತವಾಗದೆ, ತಂದೆ-ತಾಯಿಯನ್ನು ಗೌರವಿಸುವ ಗುಣವನ್ನೂ ಬೆಳೆಸಬೇಕು. ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಲ್ಲಿರುವ ನಿಷ್ಠೆ ಮತ್ತು ಪ್ರೀತಿ ಮನುಷ್ಯರಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಶಿಬಿರದಲ್ಲಿ ಮಕ್ಕಳು ‘ಯುದ್ಧ ಮತ್ತು ಶಾಂತಿ’, ‘ಹಕ್ಕಿಯ ಹಾಡು’ ಸೇರಿದಂತೆ ಹಲವು ನಾಟಕಗಳನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದರು. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತೆಗೆದಲು ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದು ಶ್ರೀಗಳು ಹೇಳಿದರು.
ಖ್ಯಾತ ನಟ Rajinikanth ಅವರ ಜೀವನವನ್ನು ಉದಾಹರಿಸಿದ ಅವರು, ಸಾಮಾನ್ಯ ಕಂಡಕ್ಟರ್ ಆಗಿದ್ದ ವ್ಯಕ್ತಿ ಕಠಿಣ ಪರಿಶ್ರಮ ಮತ್ತು ಆಸಕ್ತಿಯಿಂದ ವಿಶ್ವಪ್ರಸಿದ್ಧ ನಟನಾದದ್ದು ಮಕ್ಕಳಿಗೆ ಸ್ಪೂರ್ತಿದಾಯಕ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ರಂಗ ವಿಮರ್ಶಕ ಹೆಚ್.ಎಸ್. ನವೀನ್ ಕುಮಾರ್, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಆವರಣದಲ್ಲಿ ನಡೆದ ಮಕ್ಕಳ ಶಿಬಿರವು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿದೆ ಎಂದು ಹೇಳಿದರು.
ಶಿಬಿರದಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ಪ್ರಕೃತಿ, ಕಲೆ, ವಿಜ್ಞಾನ ಹಾಗೂ ಮಾನವೀಯ ಮೌಲ್ಯಗಳ ಕುರಿತು ವಿಶೇಷ ತರಬೇತಿ ನೀಡಲಾಗಿದೆ. “ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜದಂತೆ ಎಂದಿಗೂ ನಿರರ್ಥಕವಾಗುವುದಿಲ್ಲ” ಎಂಬ ಆಶಯದೊಂದಿಗೆ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತುವ ಕಾರ್ಯ ನಡೆದಿದೆ ಎಂದು ತಿಳಿಸಿದರು.
ಶಿಬಿರದ ವೇಳೆ ವಿದ್ಯಾರ್ಥಿಗಳು ಶಿಬಿರಾರ್ಥಿಗಳೊಂದಿಗೆ ಆತ್ಮೀಯವಾಗಿ ಬೆರೆತು ಪೋಷಕರಂತೆ ಕಾಳಜಿ ವಹಿಸಿರುವ ಘಟನೆಗಳನ್ನು ಸ್ಮರಿಸಿದರು. ಮನೆಯ ನೆನಪಾಗಿ ಅಳುತ್ತಿದ್ದ ಮಗುವೊಂದನ್ನು ವಿದ್ಯಾರ್ಥಿಯೊಬ್ಬ ತನ್ನ ಜೊತೆಯಲ್ಲೇ ಮಲಗಿಸಿಕೊಂಡು ಸಮಾಧಾನಪಡಿಸಿದ ಘಟನೆ ಶಿಬಿರದ ಆತ್ಮೀಯತೆಯನ್ನು ತೋರಿಸುತ್ತದೆ ಎಂದರು.
ಶಿಕ್ಷಕ ಅಣ್ಣಿಗೆರೆ ವಿರೂಪಾಕ್ಷಪ್ಪ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತೆಗೆದಲು ಪೂರಕ ವಾತಾವರಣ ನಿರ್ಮಿಸುವುದು ಅಗತ್ಯ ಎಂದರು. ಕಳೆದ 18 ದಿನಗಳಲ್ಲಿ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದು, ಇದು ಅವರ ಭವಿಷ್ಯ ರೂಪಿಸುವ ಶಕ್ತಿಯಾಗಿದೆ ಎಂದು ಹೇಳಿದರು.
ಪೋಷಕರು ಕೇವಲ ಅಂಕಗಳು ಮತ್ತು ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡದೆ, ಮಕ್ಕಳ ಭಾವನಾತ್ಮಕ ಬೆಳವಣಿಗೆಗೂ ಬೆಂಬಲ ನೀಡಬೇಕು ಎಂದು ಸಲಹೆ ನೀಡಿದರು.
ರಂಗನಿರ್ದೇಶಕ ಕೃಷ್ಟಮೂರ್ತಿ ಮುಳಬಾಗಿಲು ಮಾತನಾಡಿ, ಬಸವಾದಿ ಶರಣರು ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದಂತೆ, ಇಂದಿನ ಕಾಲಘಟ್ಟದಲ್ಲಿ ಪಂಡಿತಾರಾಧ್ಯ ಶ್ರೀಗಳು ನಾಟಕ ಮತ್ತು ವಚನ ಸಾಹಿತ್ಯದ ಮೂಲಕ ಸಾಂಸ್ಕೃತಿಕ ಕ್ರಾಂತಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಮಕ್ಕಳ ಭಾವನಾಕೋಶ ಬೆಳೆಸುವುದು ಅಗತ್ಯ. ಅವರನ್ನು ಕೇವಲ ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡದೆ, ವಿಶ್ವಮಾನವರಾಗಿ ಬೆಳೆಸಬೇಕು. ವಚನಗಾನ, ನೃತ್ಯ ಹಾಗೂ ಸಮಾಜದೊಂದಿಗೆ ಬೆರೆಯುವ ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಗರಾಜ್ ಹೆಚ್.ಎಸ್. ಶರಣ ವಚನಗೀತೆಗಳನ್ನು ಹಾಡಿದರು. ರಂಗಶಾಲೆಯ ಪ್ರಾಂಶುಪಾಲ ರಘು ಪುರಪ್ಪಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯ ಕೆ.ಆರ್. ಬಸವರಾಜ್ ಹಾಗೂ ಪ್ರಸನ್ನ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳು ‘ಯುದ್ಧ ಮತ್ತು ಶಾಂತಿ’, ‘ಹಕ್ಕಿಯ ಹಾಡು’, ‘ಗೆಳೆಯರ ಬಳಗಕ್ಕೆ ಜೈ’, ‘ಸರಸತಿಯಾಗಲೊಲ್ಲೆ’ ನಾಟಕಗಳ ಜೊತೆಗೆ ವಚನಗೀತೆ, ವಚನ ನೃತ್ಯ ಹಾಗೂ ಯೋಗ ಪ್ರದರ್ಶನಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ನೂರಾರು ಪೋಷಕರು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.