ಹಿರಿಯೂರು:
ತಾಲೂಕಿನ ವಾಣಿವಿಲಾಸಪುರದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭಿಸಲಾಗುತ್ತಿದ್ದು, ಭರಮಗಿರಿ, ಕಕ್ಕಯ್ಯನಹಟ್ಟಿ ಸೇರಿದಂತೆ ಸುತ್ತ 5 ಹಳ್ಳಿಯ ಸರ್ಕಾರಿ ಶಾಲೆಗಳನ್ನು ಮುಚ್ಚಿ ವಿದ್ಯಾರ್ಥಿಗಳನ್ನು ಕೆಪಿಎಸ್ ಶಾಲೆಗೆ ಸೇರಿಸಲಾಗುತ್ತಿದೆ. ಸರ್ಕಾರದ ಈ ಕ್ರಮವನ್ನು ಖಂಡಿಸಿ ಇಂದು ಉಭಯ ಗ್ರಾಮದ ಜನರು ಎ.ಐ.ಡಿ.ಎಸ್.ಓ ನೇತೃತ್ವದಲ್ಲಿ ಊರಿನ ಶಾಲೆ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎ.ಐ.ಡಿ.ಎಸ್.ಓ ಚಿತ್ರದುರ್ಗ ಜಿಲ್ಲಾ ಸಂಘಟನಾಕಾರರಾದ ಮಹಾಂತೇಶ ಬಿಳೂರ್ ಮಾತನಾಡಿ, “ಪ್ರತಿ ಹಳ್ಳಿಗೂ ಶಾಲೆ ಅವಶ್ಯಕ. ಶಾಲೆಯಲ್ಲಿ ಒಂದೇ ಮಗುವಿದ್ದರೂ ಶಾಲೆ ನಡೆಸುತ್ತೇವೆ ಎಂದು ಶಿಕ್ಷಣ ಸಚಿವರು ಹೇಳುತ್ತಿದ್ದಾರೆ. ಆದರೆ 5 ಕಿ.ಮೀ ವ್ಯಾಪ್ತಿಯ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗೆ ಸೇರಿಸಬೇಕೆಂದು ಆದೇಶ ಹೊರಡಿಸಿದ್ದಾರೆ. ಇದು ರಾಜ್ಯದ ಜನತೆಗೆ ಮಾಡಿರುವ ವಿಶ್ವಾಸದ್ರೋಹ” ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ,
“ಕೆಪಿಎಸ್ ಮ್ಯಾಗ್ನೆಟ್ ಹೆಸರಲ್ಲಿ ರಾಜ್ಯದ 40ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಕೆಪಿಎಸ್ ಶಾಲೆಗಳನ್ನು ಹೊರ ಗುತ್ತಿಗೆ ಕೊಡಲಾಗುವುದು ಮತ್ತು ಪ್ರತಿ ಶಾಲೆಯು ಆದಾಯ ಸಂಗ್ರಹಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಪ್ರಕಾರ, ಹಳ್ಳಿಯ ಬಡವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುವ ಸುಳ್ಳು ಹೇಳಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಮತ್ತು ಕೆಪಿಎಸ್ ಶಾಲೆಗಳನ್ನು ಖಾಸಗೀಯವರಿಗೆ ನೀಡಿ ಇಡೀ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡುವ ಹುನ್ನಾರ” ಇದು ಎಂದು ಸರ್ಕಾರದ ನೀತಿಯನ್ನು ಖಂಡಿಸಿದರು.
“ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ಈಶ್ವರಚಂದ್ರ ವಿದ್ಯಾಸಾಗರ್ ಸೇರಿದಂತೆ ಅನೇಕ ಮಹನೀಯರ ಹೋರಾಟದ ಪರಿಣಾಮ ಇಂದು ಎಲ್ಲೆಡೆ ಶಾಲೆಗಳು ತೆರೆದಿದೆ. ಈ ಶಾಲೆಗಳನ್ನು ಮುಚ್ಚಿ ಬಡಮಕ್ಕಳ ಭವಿಷ್ಯವನ್ನು ಬೀದಿಪಾಲು ಮಾಡುವ ಸರ್ಕಾರದ ನಿರ್ಧಾರದ ವಿರುದ್ಧ ಜನರೆಲ್ಲ ಒಂದಾಗಿ ಹೋರಾಡಲು ಮುಂದಾಗಬೇಕು” ಎಂಬುದಾಗಿ ಕರೆ ನೀಡಿದರು.
ವಿವಿಪುರ ಪಂಚಾಯಿತಿಯ ಸದಸ್ಯರಾದ ಕಣುಮಪ್ಪ ಮಾತನಾಡಿ, “ನಾವು ಪ್ರಾಣಬೇಕಾದರೂ ಕೊಡುತ್ತೇವೆ, ಆದರೆ ಯಾವುದೇ ಕಾರಣಕ್ಕೂ ನಮ್ಮೂರ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ” ನಮ್ಮ ಮಕ್ಕಳಿಗೆ ಅನ್ಯಾಯವಾಗಲು ಬಿಡುವುದಿಲ್ಲ, ಎಂಬುದಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಕ್ಕಯನಹಟ್ಟಿಯ ಕೆಂಚಪ್ಪ ಮಾತನಾಡಿ, ಸರ್ಕಾರಕ್ಕೆ ಕಾಳಜಿ ಇದ್ದರೆ ಎಲ್ಲ ಸೌಲಭ್ಯಗಳನ್ನು ನಮ್ಮೂರ ಶಾಲೆಯಲ್ಲೇ ಒದಗಿಸಲಿ. ಅದನ್ನು ಬಿಟ್ಟು ಶಾಲೆ ಮುಚ್ಚುವುದರಿಂದ ಬಡ ಕೂಲಿಕಾರರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಬಸ್ಸು ಹಿಡಿಯಲು 2 ಕಿಮೀ ನಡೆದುಕೊಂಡೇ ಹೋಗುವ ಪರಿಸ್ಥಿತಿಯಿದೆ.
ಹೀಗಿರುವಾಗ ಮಕ್ಕಳ ಫರಿಸ್ಥಿತಿ ಅದೋಗತಿಯಾಗುತ್ತದೆ. ಆದ್ದರಿಂದ, ಹಳ್ಳಿಯ ಶಾಲೆಗಳನ್ನು ಮುಚ್ಚುವ ಈ ಯೋಜನೆಯನ್ನು ಸರ್ಕಾರವು ಹಿಂಪಡೆಯಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ, ಈ ನಿಟ್ಟಿನಲ್ಲಿ ಹೋರಾಡಲು ಊರಿನಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯನ್ನು ರಚಿಸಲಾಗುತ್ತಿದೆ ಎಂಬುದಾಗಿ ಹೇಳಿದರು.
ಸರ್ಕಾರವು ತನ್ನ ನಿರ್ಧಾರ ಹಿಂಪಡೆಯುವವರೆಗೂ ಹೋರಾಟ ನಡೆಸಲು ಹಾಗೂ ಹೋಬಳಿ, ತಾಲೂಕು ಸೇರಿದಂತೆ ಹಂತ-ಹಂತವಾಗಿ ಹೋರಾಟವನ್ನು ಬೆಳೆಸಲು ಊರಿನಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು.
ಭರಮಗಿರಿ ಸಮಿತಿಯ ಅಧ್ಯಕ್ಷರಾಗಿ ಲೋಕೇಶ್, ಕಾರ್ಯದರ್ಶಿಯಾಗಿ ಕಣುಮಪ್ಪ, ಉಪಾಧ್ಯಕ್ಷರಾಗಿ ಶಿವರಾಜ್ ಇವರನ್ನು ಆಯ್ಕೆ ಮಾಡಲಾಯಿತು. ಕಕ್ಕಯನಹಟ್ಟಿ ಸಮಿತಿಯ ಅಧ್ಯಕ್ಷರಾಗಿ ರಾಜಪ್ಪ, ಕಾರ್ಯದರ್ಶಿಯಾಗಿ ಕೆಂಚಪ್ಪ , ಉಪಾಧ್ಯಕ್ಷರಾಗಿ ರಂಗನಾಥ ಮತ್ತು ಮಹಾಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಈ ಪ್ರತಿಭಟನೆಯಲ್ಲಿ ಉಭಯ ಗ್ರಾಮಗಳ ಪಾಲಕರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ರದ್ದಾಗುವವರೆಗೂ ಹೋರಾಟ ನಡೆಸಬೇಕೆಂದು ಸಂಕಲ್ಪ ಮಾಡಿದರು.
About The Author
Discover more from JANADHWANI NEWS
Subscribe to get the latest posts sent to your email.