ಚಿತ್ರದುರ್ಗ ಸೆ.16:
ರಾಜ್ಯದಲ್ಲಿ ಮದ್ಯಪಾನ ಹಾಗೂ ಮಾದಕ ದ್ರವ್ಯಗಳ ಹಾವಳಿ ಹೆಚ್ಚುತ್ತಿದ್ದು, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಪ್ರಾಥಮಿಕ ಶಾಲಾ ಹಂತದಿಂದಲೇ ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಶಿಕ್ಷಣ ತರುವುದು ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ತಿಳಿಸಿದರು.
ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ವಿರುದ್ಧ ಜನಜಾಗೃತಿ ಮೂಡಿಸಲು ದುಂಡು ಮೇಜಿನ ಸಭೆ ಆಯೋಜಿಸುವ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಇಲಾಖಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳು ಬಾಲ್ಯದಲ್ಲಿದ್ದಾಗಲೇ ಅವರಲ್ಲಿ ನೈತಿಕ ಮೌಲ್ಯಗಳನ್ನು ಮತ್ತು ಮಾದಕ ವಸ್ತುಗಳ ವಿಜ್ಞಾನ ಹಾಗೂ ದುಷ್ಪರಿಣಾಮಗಳ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಪ್ರಾಥಮಿಕ ಹಂತದಿಂದಲೇ ನೈತಿಕ ಶಿಕ್ಷಣ ಮತ್ತು ಮದ್ಯಪಾನ ನಿಷೇಧ ಕುರಿತ ಅರಿವಿನ ಪಾಠಗಳನ್ನು ಪಠ್ಯಕ್ರಮದಲ್ಲಿ ಸೇರಿಸಲು ಮನವಿ ಮಾಡಲಾಗಿದೆ. ಬೆಳೆಯುವ ಹಂತದಲ್ಲೇ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡದಿದ್ದರೆ, ಅವರು ಹಿರಿಯರಾದ ಮೇಲೆ ಬದಲಾವಣೆ ತರುವುದು ಕಷ್ಟಸಾಧ್ಯ ಎಂದರು.
ಅಧಿಕಾರಿಗಳು ತಮ್ಮ ಮನೆಯ ಹೆಣ್ಣುಮಕ್ಕಳಿಗೆ ವಿವಾಹ ಮಾಡುವಾಗ ವರನಿಗೆ ಯಾವುದೇ ದುರಭ್ಯಾಸಗಳಿಲ್ಲವೇ, ಆತ ಉತ್ತಮ ವ್ಯಕ್ತಿತ್ವ ಉಳ್ಳವನೇ ಎಂದು ಹತ್ತಾರು ಬಾರಿ ವಿಚಾರಿಸುತ್ತೀರಿ. ಅದೇ ರೀತಿಯ ಸಾಮಾಜಿಕ ಜವಾಬ್ದಾರಿಯನ್ನು ನಿಮ್ಮ ಉದ್ಯೋಗ ಮತ್ತು ಕರ್ತವ್ಯದಲ್ಲೂ ತೋರಿಸಬೇಕಿದೆ. ಆದರೆ, ಈ ನಿಟ್ಟಿನಲ್ಲಿ ನಾವೆಲ್ಲರೂ ಗಂಭೀರವಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ವಿಷಾದಕರ ಸಂಗತಿ ಹೇಳಿದರು.
ಮಹಾತ್ಮ ಗಾಂಧೀಜಿಯವರ ಕನಸಿನಂತೆ ನಮಗೆ ಕೇವಲ ಸ್ವಾತಂತ್ರ್ಯ ಸಿಕ್ಕರೆ ಸಾಲದು. ದೇಶವು ಆರೋಗ್ಯಪೂರ್ಣವಾಗಿರಬೇಕು. ಇಂದಿನ ಯುವಜನತೆ ಮತ್ತು ಜನರು ಮದ್ಯಪಾನ ಹಾಗೂ ಮಾದಕ ದ್ರವ್ಯಗಳಿಗೆ ದಾಸರಾಗುತ್ತಿರುವುದು ದುರಂತ. ಈ ವಿಚಾರದಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ಅತ್ಯಂತ ಗಂಭೀರವಾದ ಹೆಜ್ಜೆಗಳನ್ನು ಇಡಬೇಕಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಯಶಸ್ವಿಯಾಗಿ ಜಾಗೃತಿ ಕಾರ್ಯಕ್ರಮ ನಡೆಸಲಾಗಿತ್ತು. ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಿದ್ದ ಹಟ್ಟಿ ಗ್ರಾಮಕ್ಕೆ ಮಂಡಳಿಯಿಂದ ಗೌರವ ಸಲ್ಲಿಸಲಾಗಿತ್ತು. ಇದರಿಂದ ಪ್ರೇರೇಪಿತರಾದ ಅನೇಕ ಗ್ರಾಮಸ್ಥರು ಹಾಗೂ ಜಿಲ್ಲಾಡಳಿತ ಮದ್ಯಪಾನ ನಿಷೇಧಕ್ಕೆ ಬೆಂಬಲ ಸೂಚಿಸಿದ್ದರು. ಅದೇ ಮಾದರಿಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲೂ ಬೃಹತ್ ಮಟ್ಟದ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದರು.
ಭಾರತದಲ್ಲಿ ದುಡಿಯುವ ವಯಸ್ಸಿನ ಯುವಜನರ ಸಂಖ್ಯೆ ಹೆಚ್ಚಿದ್ದು, ಸುಮಾರು ಶೇ 50ರಷ್ಟು ಯುವಕರು ಯಾವುದೋ ಒಂದು ರೀತಿಯ ದುರಭ್ಯಾಸ ಅಥವಾ ಮದ್ಯಪಾನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ವಿಷಯ. ಸಮಾಜದ ಭವಿಷ್ಯವಾಗಿರುವ ಮಕ್ಕಳನ್ನು ಹಾಗೂ ಯುವಜನತೆಯನ್ನು ಈ ಕೆಟ್ಟ ಅಭ್ಯಾಸಗಳಿಂದ ದೂರವಿಡಲು ಇಡೀ ಸಮಾಜ ಹಾಗೂ ಅಧಿಕಾರಿ ವರ್ಗ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಮಾಜದಲ್ಲಿ ಸತ್ ಚಿಂತನೆ ಮತ್ತು ಆಚಾರ-ವಿಚಾರಗಳನ್ನು ಪಸರಿಸಿದ ಡಿ.ಆರ್.ಪಾಟೀಲ, ಬಿ.ಆರ್. ಪಾಟೀಲ ಅವರಂತಹ ಮಹನೀಯರ ತತ್ವಾದರ್ಶಗಳನ್ನು ಯುವ ಪೀಳಿಗೆಗೆ ತಲುಪಿಸುವ ಅಗತ್ಯವಿದೆ. ಇಂತಹ ಮಹನೀಯರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಮಾರ್ಗದರ್ಶನ ನೀಡಿದಾಗ ಮಾತ್ರ ಸನ್ಮಾರ್ಗದ ಸಮಾಜ ನಿರ್ಮಾಣ ಸಾಧ್ಯ. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ರಾಜ್ಯಾದ್ಯಂತ ಶಾಲಾ-ಕಾಲೇಜುಗಳು, ಮಠ-ಮಾನ್ಯಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯವರ್ಜನ ಮತ್ತು ದುಷ್ಪರಿಣಾಮಗಳ ಕುರಿತು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದೆ ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಜಯಲಕ್ಷ್ಮಮ್ಮ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ಸುನೀಲ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ರೂಪಾ, ಸಲಹೆಗಾರರಾದ ಎಂ.ಎಸ್.ನಂದೀಶ್, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.