March 16, 2026
images-1.jpeg

ಚಳ್ಳಕೆರೆ:
ಬಯಲುಸೀಮೆಯ ಮಧ್ಯ ಕರ್ನಾಟಕದ ಮಧ್ಯಾಹ್ನ ಮಾರಮ್ಮ ಎಂದೇ ಖ್ಯಾತಿ ಪಡೆದ ಗೌರಸಮುದ್ರ ಮಾರಮ್ಮ ದೇವಾಲಯಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ನಾಪತ್ತೆಯಾಗಿರುವ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ದೇವಾಲಯದ ಪೂಜಾರಿಯೊಬ್ಬರು “ದೇವಾಲಯಕ್ಕೆ ಸಂಬಂಧಿಸಿದ ಹಳೆಗನ್ನಡದ ದಾಖಲೆಗಳು ನನ್ನ ಬಳಿ ಇವೆ” ಎಂದು ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಕ್ತರಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಗೌರಸಮುದ್ರ ಮಾರಮ್ಮ ದೇವಾಲಯದ ಪ್ರಕರಣದ ಕಡತ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಸಂಬಂಧಿಸಿದ ಕಡತಗಳನ್ನು ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸದೇ ಕರ್ತವ್ಯ ಲೋಪ ಎಸಗಿದ ಆರೋಪದಡಿ ಜಿಲ್ಲಾಧಿಕಾರಿಗಳ ಕಚೇರಿ ಮುಜರಾಯಿ ಶಾಖೆಯ ಧಾರ್ಮಿಕ ದತ್ತಿ ತಹಶೀಲ್ದಾರ್ ಬಿ.ಎಸ್. ವೆಂಕಟೇಶ್ ಮತ್ತು ದ್ವಿತೀಯ ದರ್ಜೆ ಸಹಾಯಕ ವೀರಭದ್ರಪ್ಪ ವಿರುದ್ಧ ಸುಮಾರು ಎರಡು ವರ್ಷಗಳ ಹಿಂದೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಜಿಲ್ಲಾಧಿಕಾರಿಗಳ ಕಚೇರಿಯ ಪತ್ರಾಂಕಿತ ಸಹಾಯಕ ಸಂತೋಷ್ ಕುಮಾರ್ ಜಿ. ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು, 2023ರ ಸೆಪ್ಟೆಂಬರ್ 8 ಮತ್ತು 27ರಂದು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಕಡತಗಳನ್ನು ಹಾಜರುಪಡಿಸಲಾಗಿರಲಿಲ್ಲ. ಇದರಿಂದಾಗಿ ಸೆಪ್ಟೆಂಬರ್ 30ರಂದು ಜಿಲ್ಲಾಧಿಕಾರಿಗಳು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು. ಮುಂದಿನ ವಿಚಾರಣೆಯಲ್ಲಿ ಕಡತ ಹಾಜರುಪಡಿಸುವುದಾಗಿ ಅಧಿಕಾರಿಗಳು ತಿಳಿಸಿದರೂ, ಅಕ್ಟೋಬರ್ 11ರಂದು ನಿಗದಿಯಾದ ವಿಚಾರಣೆಯಲ್ಲಿಯೂ ಕಡತ ಸಲ್ಲಿಸಲಿಲ್ಲ.ನ್ಯಾಯಾಲಯದ ಮುಂದೆ ವಿಚಾರಣೆ ವೇಳೆ ಕಡತ ಕಾಣೆಯಾಗಿರುವುದಾಗಿ ಸಿಬ್ಬಂದಿ ತಿಳಿಸಿದ್ದು, ಇದನ್ನು ಗಂಭೀರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನವೆಂದು ಪರಿಗಣಿಸಿ ಎಫ್‌ಐಆರ್ ದಾಖಲಿಸಲಾಗಿತ್ತು.ಈ ಪ್ರಕರಣದ ಹಿನ್ನೆಲೆಯಲ್ಲೇ, ಇತ್ತೀಚೆಗೆ ದೇವಾಲಯದ ಪೂಜಾರಿ ಬಾಲಚಂದ್ರಪ್ಪ ಅವರು ದೇವಿಗೆ ಪೂಜೆ ಸಲ್ಲಿಸುವ ವೇಳೆ ಸಾಮಾಜಿಕ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ, “ದೇವಾಲಯಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇವೆ” ಎಂದು ಹೇಳಿರುವ ವೀಡಿಯೋ ವೈರಲ್ ಆಗಿದೆ. ಇದರಿಂದ ದೇವಸ್ಥಾನದ ದಾಖಲೆಗಳು ನಿಜವಾಗಿಯೂ ಕಳೆದುಹೋಗಿವೆಯೋ ಅಥವಾ ಪೂಜಾರಿಯ ಬಳಿಯೇ ಇರುವವೆಯೋ ಎಂಬ ಪ್ರಶ್ನೆ ಮೂಡಿದೆ.ವೀಡಿಯೋ ವೈರಲ್ ಆದ ತಕ್ಷಣ ಪೂಜಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ದೇವಸ್ಥಾನಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂಬ ಗುಸು ಗುಸು ಮಾತುಗಳು ಕೇಳಿಬರುತ್ತಿವೆ. ದಾಖಲೆಗಳ ನಿಜಾಂಶ ತನಿಖೆಯಿಂದಲೇ ಬಯಲಾಗಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading