February 13, 2026
FB_IMG_1770900592868.jpg

ಚಿತ್ರದುರ್ಗಫೆ.12:
ರೈತರು ಕೇವಲ ಒಂದು ಬೆಳೆಯ ಮೇಲೆ ಅವಲಂಬಿತರಾಗದೆ, ದೈನಂದಿನಿಂದ ವಾರ್ಷಿಕ ಆದಾಯ ತಂದುಕೊಡುವ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಾಗ ಮಾತ್ರ ಸುಸ್ಥಿರ ಲಾಭ ಪಡೆಯಲು ಸಾಧ್ಯ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್. ರಜನೀಕಾಂತ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ವಿಜಾಪುರ ಗ್ರಾಮದಲ್ಲಿ ಗುರುವಾರ ಬಬ್ಬೂರು ಕೃಷಿ ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ತುಂತುರು ಮತ್ತು ಹನಿ ನೀರಾವರಿ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಲಾಭದಾಯಕ ಸುಸ್ಥಿರ ಸಮಗ್ರ ಕೃಷಿ ಪದ್ಧತಿಯಲ್ಲಿ ಹೈನುಗಾರಿಕೆಯಿಂದ ಪ್ರತಿ ದಿನ ಆದಾಯ, ಸೊಪ್ಪುಗಳನ್ನು ಬೆಳೆಯುವುದರಿಂದ ತಿಂಗಳಿಗೊಮ್ಮೆ ಆದಾಯ, ಹೆಸರು, ಉದ್ದು, ಅಲಸಂದಿ, ಸೌತೆಕಾಯಿ, ಕಲ್ಲಂಗಡಿ, ಟಮೊಟೊ ಮತ್ತು ಇತರೆ ತರಕಾರಿಗಳಿಂದ, ರೇಷ್ಮೇ ಮತ್ತು ಕೋಳಿ ಸಾಕಾಣಿಕೆಯಿಂದ 3 ತಿಂಗಳಿಗೊಮ್ಮೆ ಆದಾಯ, ಕುರಿ ಮೇಕೆ ಸಾಕಾಣಿಕೆಯಿಂದ ಆರು ತಿಂಗಳಿಗೊಮ್ಮೆ ಆದಾಯ, ಪಪ್ಪಾಯ ಬಾಳೆ ಬೆಳೆಯಿಂದ 9 ತಿಂಗಳಿಗೊಮ್ಮೆ ಆದಾಯ, ಅಡಿಕೆ, ತೆಂಗು, ಮಾವುಗಳಿಂದ ವರ್ಷಕ್ಕೊಮ್ಮೆ ಆದಾಯ, ಸಾಗವಾನಿ, ಶ್ರೀಗಂಧ, ಹೆಬ್ಬೇವು, ಸಿಲ್ವರ್ ಓಕ್ ಮತ್ತು ಇತರೆ ಮರಗಳಿಂದ 15 ರಿಂದ 20 ವರ್ಷಕ್ಕೊಮ್ಮೆ ಆದಾಯ ಪಡೆಯಬಹುದು ಎಂದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರವು ವಾಟ್ಸಾಪ್, ಫೇಸ್‍ಬುಕ್ ಮತ್ತು ಪತ್ರಿಕೆಗಳ ಮೂಲಕ ನಿರಂತರವಾಗಿ ಕೃಷಿ ಮಾಹಿತಿ ನೀಡುತ್ತಿದೆ. ರೈತರು ಗೂಗಲ್ ಮೀಟ್ ಮೂಲಕ ಆನ್‍ಲೈನ್ ತರಬೇತಿ ಮತ್ತು ಗ್ರಾಮ ಮಟ್ಟದ ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ನವೀಕರಿಸಿಕೊಳ್ಳಬೇಕು ಎಂದು ಹೇಳಿದರು.
ಜೈನ್ ಇರಿಗೇಷ್‍ನ್ ಸಂಸ್ಥೆಯ ದೇವರಾಜು ಮಾತನಾಡಿ, ಆಧುನಿಕ ನೀರಾವರಿ ಪದ್ಧತಿ ಅಳವಡಿಕೆಯಿಂದ ಶೇ. 30-40 ರಷ್ಟು ನೀರಿನ ಉಳಿತಾಯದ ಜೊತೆಗೆ ಕೂಲಿ ಆಳುಗಳ ಸಮಸ್ಯೆ ನಿವಾರಿಸಬಹುದು ಮತ್ತು ರಸಗೊಬ್ಬರವನ್ನು ನೇರವಾಗಿ ಗಿಡದ ಬೇರುಗಳಿಗೆ ತಲುಪಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುನೀಲ್ ಕುಮಾರ್, ಕೆನರಾ ಬ್ಯಾಂಕಿನ ಹಣಕಾಸು ಸಾಕ್ಷರತಾ ಕೇಂದ್ರದ ವ್ಯವಸ್ಥಾಪಕ ವಿ.ತಿಪ್ಪೇಸ್ವಾಮಿ, ಆಶಾ ಕಾರ್ಯಕರ್ತೆ ಮಮತಾ ಹಾಗೂ ಗ್ರಾಮದ ರೈತ ಬಾಂಧವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading