ನಾಯಕನಹಟ್ಟಿ : ಫೆ.17ರಂದು ಚಿತ್ರದುರ್ಗ ನಗರದಲ್ಲಿ ಹಮ್ಮಿಕೊಂಡಿರುವ ಚಿಂತನ ಮಂಥನ ಶಿಬಿರದಲ್ಲಿ ವಾಲ್ಮೀಕಿ ಸಮುದಾಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಿಂದ ನಾಯಕನಹಟ್ಟಿ ಹೋಬಳಿಯ ಎಲ್ಲಾ ವಾಲ್ಮೀಕಿ ಜನಾಂಗದವರು ಪಕ್ಷಾತೀತವಾಗಿ ಭಾಗವಹಿಸಿ ಎಂದು ಪಟೇಲ್ ಜಿಎಂ ತಿಪ್ಪೇಸ್ವಾಮಿ ಕರೆ ನೀಡಿದರು.

ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಕಚೇರಿಯಲ್ಲಿ ಚಿಂತನ ಮಂಥನ ಶಿಬಿರದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮೀಸಲಾತಿ ವಿಚಾರದಲ್ಲಿ ಎಲ್ಲ ಮುಖಂಡರು ರಾಜಕೀಯವನ್ನು ದೂರವಿಡಬೇಕು. ದೂರವಿಟ್ಟಷ್ಟು ನಮ್ಮ ವಾಲ್ಮೀಕಿ ಸಮಾಜ ಮುಂದೆ ಬರಲು ಸಾಧ್ಯ. ನಾವುಗಳು ರಾಜಕೀಯವನ್ನು ಮಾಡಿದ್ದೇವೆ, ಹೋರಾಟಗಳನ್ನು ಮಾಡಿದ್ದೇವೆ. 1966 ರಿಂದಲೂ ಹೋರಾಟಗಳನ್ನು ಮಾಡಿಕೊಂಡು ಬಂದಿರುತ್ತೇವೆ. ನಮ್ಮ ಹೋರಾಟದ ಬಗ್ಗೆ ತಿಳಿಸಿದರೆ ಆಶ್ಚರ್ಯವಾಗುತ್ತದೆ. ಆಗಿನ ಕಾಲದಲ್ಲಿ ನಮ್ಮ ಸಮಾಜ ಯಾವ ಮಟ್ಟಕ್ಕೆ ಇತ್ತು ಎಂಬುದು ನಮಗೆ ಮಾತ್ರ ಗೊತ್ತು. ವಾಲ್ಮೀಕಿ ಸಮಾಜ ಬೆಳೆಯಬೇಕು, ಶಕ್ತಿವಂತರಾಗಬೇಕು, ಶಿಕ್ಷಣದಿಂದ ನಮ್ಮ ಮಕ್ಕಳು ಬುದ್ಧಿವಂತರಾಗಬೇಕು ಎಂದರೆ ನಾವೆಲ್ಲ ಪ್ರಜ್ಞಾವಂತರಾಗಬೇಕು ಎಂದರು.
ರಾಜಕೀಯ ಪ್ರೇರಣೆ ಇಟ್ಟುಕೊಂಡರೆ ಯಾವ ಶಾಸಕರಾಗಲಿ, ಮಾಜಿ ಶಾಸಕರಾಗಲಿ, ಸಚಿವರಾಗಲಿ, ಸಂಸದರಾಗಲಿ ದೊಡ್ಡವರನ್ನಾಗಿ ಮಾಡುವುದಿಲ್ಲ. ನಮ್ಮ ದುಡಿಮೆ ಪರಿಶ್ರಮದಿಂದ ಮೇಲೆ ಬರಲು ಸಾಧ್ಯ ನಮ್ಮಲ್ಲಿ ಆ ಸಾಮರ್ಥ್ಯವಿಲ್ಲವೆಂದರೆ ಯಾರು ನಮ್ಮನ್ನು ಕರೆಯುವುದಿಲ್ಲ. ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ಅದರ ವಿರುದ್ಧ ಎಲ್ಲರೂ ಒಂದಾಗಿ ಹೋರಾಟ ಮಾಡಬೇಕಾಗಿದೆ. ಸರ್ಕಾರ 7% ಮೀಸಲಾತಿ ಘೋಷಣೆ ಮಾಡಿದೆ ಆದರೆ ಅನುಮೋದನೆಯಾಗಿಲ್ಲ ಈಗಲೂ ನಾವುಗಳು 3% ಮೀಸಲಾತಿಯಲ್ಲಿದ್ದೇವೆ. ಇದರ ವಿರುದ್ಧ ನಮ್ಮ ಸಮಾಜ ಎಚ್ಚೆತ್ತುಕೊಂಡು ಹೋರಾಟ ಮಾಡಿದಾಗ ಮಾತ್ರ ನಮ್ಮ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜಣ್ಣಲಕ್ಷೀಸಾಗರ , ಟಿ.ಬಸಪ್ಪ ನಾಯಕ, ನಾಗರಾಜ್, ಪಟ್ಟಣ ಪಂಚಾಯತಿ ಸದಸ್ಯ ಡಿ. ಓಬಯ್ಯ ದಾಸ್, ಶಿವಲಿಂಗಪ್ಪ, ನಲಗೇತನಹಟ್ಟಿ ಜಿ.ವೈ .ತಿಪ್ಪೇಸ್ವಾಮಿ, ರಾಮಸಾಗರ ಮಂಜಣ್ಣ, ಜಾಗನೂರಹಟ್ಟಿ ಪಾಲಯ್ಯ, ಗುಂತಕೋಲಮ್ಮನಹಳ್ಳಿ ಗ್ರಾ.ಪಂ. ಸದಸ್ಯ ಗುಂಡಪ್ಪ, ಎಸ್. ಶಿವತಿಪ್ಪೇಸ್ವಾಮಿ, ಬುಟ್ ತಿಪ್ಪೇಸ್ವಾಮಿ, ವಕೀಲ ಮಲ್ಲೇಶ್, ಕರವೇ ಕನ್ನಡ ಸೇನೆ ಪಿ.ಮುತ್ತಯ್ಯ ಜಾಗನೂರಹಟ್ಟಿ, ಶಿವಣ್ಣ,ಮಲ್ಲಯ್ಯ ಮಲ್ಲೂರಹಳ್ಳಿ, ಕೆ.ಟಿ.ನಾಗರಾಜ್, ಎ.ಟಿ. ತಿಪ್ಪೇಸ್ವಾಮಿ, ಬೋಸೆರಂಗಸ್ವಾಮಿ ಕರವೇ ಕನ್ನಡ ಸೇನೆ ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ ಇನ್ನೂ ಮುಂತಾದವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.