ಹೊಸದುರ್ಗ: ಶಾಸಕ ಬಿ.ಜಿ.ಗೋವಿಂದಪ್ಪ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ತಾಲೂಕು ಕುರುಬ ಸಮಾಜದಿಂದ ಸುದ್ದಿಗೋಷ್ಠಿ ನಡೆಸಿ ಕ್ಷಮೆ ಕೇಳುವಂತೆ ಒತ್ತಾಯಿಸಿದ ಹಿನ್ನೆಲೆ ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡ ಶಿವರಾಜ್ ಕುಮಾರ್ (ಶಿವು ಮಠ) ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾಜದ ಹಿರಿಯರು ಹಾಗೂ ಬಂಧುಗಳಿಗೆ ನನ್ನ ಜನ್ಮದಿನದಂದು ಮಾತನಾಡಿದ ಮಾತುಗಳಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಸಮಾಜಕ್ಕೆ ತಲೆಬಾಗುತ್ತೇನೆಯೇ ಹೊರತು ಯಾವುದೇ ವ್ಯಕ್ತಿಗೆ ತಲೆಬಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. 2018ರಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಪಟ್ಟಂತೆ ಗೋವಿಂದಪ್ಪನವರ ಸಾಮಾನ್ಯ ಕಾರ್ಯಕರ್ತನಾಗಿ ದುಡಿದಿದ್ದೆ. ಅವರು ಸೋತಿದ್ದ ಸಮಯದಲ್ಲೂ ನಾನು ಬ್ಯಾನರ್ ಕಟ್ಟಿಸಿ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಗೋವಿಂದಪ್ಪನವರ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿದ್ದೆ. ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಆದರೆ ನನ್ನ ಜಾತಿ ಕುರಿತು ಅವಹೇಳನಕಾರಿ ಮಾತುಗಳು ಕೇಳಿಬಂದ ಕಾರಣ ಬೇಸರದಿಂದ ಮಾತಿನ ಭರದಲ್ಲಿ ಪ್ರತಿಕ್ರಿಯಿಸಿದ್ದೇನೆ ಎಂದು ಹೇಳಿದರು.
ಕುರುಬ ಸಮಾಜದೊಂದಿಗೆ ಎಂಟು ವರ್ಷಗಳಿಂದ ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ. ಸಮಾಜದ ಅಧ್ಯಕ್ಷರು ಕಾಲಲ್ಲಿ ತೋರಿಸಿದ ಕೆಲಸಗಳನ್ನು ತಲೆ ಮೇಲೆ ಹೊತ್ತು ಮಾಡಿದ್ದೇನೆ. ಸಮಾಜದ ವಿರುದ್ಧ ಯಾವ ಪದವನ್ನೂ ಮಾತನಾಡಿಲ್ಲ. ನೋವಿನಿಂದ ಮಾತನಾಡಿದ್ದೇ ಹೊರತು ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿಲ್ಲ ಎಂದು ತಿಳಿಸಿದರು.
ಶಾಸಕರು ನನ್ನ ಜಾತಿಯ ಕುರಿತು ಮಾತನಾಡುತ್ತಿರುವ ಬಗ್ಗೆ ಸಮಾಜದ ಅಧ್ಯಕ್ಷರ ಬಳಿ ಹೋಗಿ ಅಳಲು ತೋಡಿಕೊಂಡಿದ್ದೇನೆ. ಶಾಸಕರ ಅಳಿಯ ರವಿಕುಮಾರ್ ಎದುರು ಕೂಡ ಒಂದು ಗಂಟೆ ಕೂತು ಕಣ್ಣೀರು ಹಾಕಿದ್ದೇನೆ. ಗೋವಿಂದಪ್ಪನವರನ್ನು ತಂದೆಯ ಸ್ಥಾನದಲ್ಲಿ ಇಟ್ಟುಕೊಂಡು ಚುನಾವಣೆಯಲ್ಲಿ ಕೆಲಸ ಮಾಡಿದ್ದೆ ಎಂದು ಹೇಳಿದರು.
ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಶಾಸಕರಿಗೆ ನೇರವಾಗಿ ಹೇಳಿ ಪಕ್ಷದಿಂದ ದೂರ ಬಂದಿದ್ದೇನೆ. ನನ್ನ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬಂದರೂ ಸಹ ನಾನು ಅವನ್ನು ಸಹಿಸಿಕೊಂಡು ಬಂದಿದ್ದೇನೆ. ಒಬ್ಬ ವ್ಯಕ್ತಿಯ ಕುರಿತು ಮಾತನಾಡಿದ್ದನ್ನು ಸಮಾಜದ ವಿಷಯವನ್ನಾಗಿ ಮಾಡಿರುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಾನು ಸಹ ಸಮಾಜದ ವ್ಯಕ್ತಿಯೇ ಆಗಿದ್ದು ಸಮಾಜ ಒಡೆಯುವ ಕೆಲಸ ಎಂದಿಗೂ ಮಾಡುವುದಿಲ್ಲ ಎಂದು ಹೇಳಿದರು.
ತಾಲೂಕು ಕುರುಬರ ಯುವಕ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಗೌರವಾಧ್ಯಕ್ಷ ವಿನಯ್ ಕುಮಾರ್ ಮಳಲಿ ಅವರು ನನ್ನ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ. ಸಣ್ಣ ಕುರುಬರು, ದೊಡ್ಡ ಕುರುಬರು ಎಂಬ ಭೇದ ಎಲ್ಲಿದೆ ಎಂದು ಪ್ರಶ್ನಿಸಿದರು.
ಚಿತ್ರದುರ್ಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ಪಕ್ಷದಿಂದಲೇ ಸಕ್ರಿಯ ಸದಸ್ಯತ್ವ ಪಡೆದಿದ್ದು ಗುರುತಿನ ಚೀಟಿ ಕೂಡ ಇದೆ. 1309 ಜನರನ್ನು ಪಕ್ಷದ ಸದಸ್ಯರನ್ನಾಗಿ ಮಾಡಿದ್ದೇನೆ. ನೀವು ಎಷ್ಟು ಜನರನ್ನು ಸದಸ್ಯರನ್ನಾಗಿ ಮಾಡಿದ್ದೀರಿ ಎಂಬುದನ್ನು ಮೊದಲು ತಿಳಿಸಿ ಎಂದು ಪ್ರಶ್ನಿಸಿದರು.
ಶಾಸಕರು ರಾಜಕೀಯವಾಗಿ ಟೀಕೆ ಮಾಡಿದರೆ ಉತ್ತರ ನೀಡಲು ಸಿದ್ಧನಿದ್ದೇನೆ. ಆದರೆ ವೈಯಕ್ತಿಕ ಅವಹೇಳನ ಮಾಡುವುದು ಸರಿಯಲ್ಲ. ನಿಮ್ಮ ಹಿರಿತನಕ್ಕೆ ನಾನು ಸದಾ ಗೌರವ ಕೊಡುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹೋ.ಮ.ರಾಜಣ್ಣ, ವಿ.ಗಂಗಾಧರ್, ಡಿ.ಎಲ್.ರಾಜಣ್ಣ, ಆಂಜಿನಪ್ಪ, ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.