March 8, 2026
IMG-20260308-WA0004.jpg

.. ಹೆಣ್ಣು ಅಬಲೆಯಲ್ಲ, ಮಹಾಶಕ್ತಿ.

” ನನ್ನ ದೃಷ್ಟಿಯಲ್ಲಿ ಹೆಣ್ಣು
ಕೇವಲ ಮಾನುಷಿಯಲ್ಲ,
ಅಬಲೆಯೂ ಅಲ್ಲ,
ಅವಳೊಂದು ಮಹಾಶಕ್ತಿ ”
ಎಂಬ ಕುವೆಂಪು ಅವರ ಮಾತನ್ನು ಸಾಕ್ಷೀಕರಿಸುತ್ತ ಮಹಿಳಾ ಸಬಲೀಕರಣವನ್ನು ಹಲವಾರು ವಿಧಗಳಲ್ಲಿ ವ್ಯಾಖ್ಯಾನಿಸಬಹುದು. ಅವುಗಳಲ್ಲಿ ಮಹಿಳೆಯರ ದೃಷ್ಟಿಕೋನಗಳನ್ನು ಸ್ವೀಕರಿಸುವುದು ಮತ್ತು ಅವರನ್ನು ಹುಡುಕುವ ಪ್ರಯತ್ನ ಮಾಡುವುದು ಹಾಗೂ ಶಿಕ್ಷಣ, ಅರಿವು ಸಾಕ್ಷರತೆ, ಸಮಾಜದಲ್ಲಿ ಸಮಾನ ಸ್ಥಾನಮಾನ, ಉತ್ತಮ ಜೀವನೋಪಾಯ ಮತ್ತು ಮಹಿಳಾ ತರಬೇತಿಯ ಮೂಲಕ ಮಹಿಳೆಯರ ಸ್ಥಾನಮಾನ ಹೆಚ್ಚಿಸುವುದಾಗಿದೆ. ಮಹಿಳಾ ಸಬಲೀಕರಣವು ವಿಭಿನ್ನ ಸಾಮಾಜಿಕ ಸಮಸ್ಯೆಗಳ ಮೂಲಕ ಜೀವನವನ್ನು ನಿರ್ಧರಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತದೆ ಮತ್ತು ಸಜ್ಜುಗೊಳಿಸುತ್ತದೆ.

ನ್ಯಾಯ ವ್ಯವಸ್ಥೆಗಳ ಒತ್ತಡದಲ್ಲಿರುವ ಇಂದಿನ ಸಮಯದಲ್ಲಿ 2026 ರ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಅರ್ಥಪೂರ್ಣ ದಿನವನ್ನಾಗಿ ಮಾಡುವ ಸಂಭ್ರಮದಲ್ಲಿದ್ದೇವೆ.

ಸಂಘರ್ಷ, ದಮನ ಮತ್ತು ರಾಜಕೀಯ ಉದ್ವಿಗ್ನತೆಗಳು ಕಾನೂನಿನ ನಿಯಮವನ್ನು ದುರ್ಬಲಗೊಳಿಸುತ್ತಿರುವ ಪರಿಣಾಮವಾಗಿ ಮಹಿಳೆಯರು ಮತ್ತು ಹುಡುಗಿಯರು ಪುರುಷರಿಗಿಂತ ಕೇವಲ 64% ರಷ್ಟು ಕಾನೂನು ಬದ್ಧ ಹಕ್ಕುಗಳನ್ನು ಹೊಂದಿದ್ದಾರೆ.

ಮಹಿಳೆಯರಿಗೆ ಸಿಗಬೇಕಾಗಿರುವ ಘನತೆಯ ಬದುಕನ್ನು ಕಟ್ಟಿಕೊಡಬೇಕಾದರೆ ಮಹಿಳಾ ಶಕ್ತಿಯನ್ನು ದಾಖಲೀಕರಣ ಗೊಳಿಸಬೇಕು. ಸಂಘಟನಾತ್ಮಕವಾಗಿ, ಸಾಂಸ್ಕೃತಿಕವಾಗಿ, ಅಸ್ಮಿತೆಯ ಜಾಗೃತಿಯೊಂದಿಗೆ ಮಹಿಳಾ ದಿನಾಚರಣೆ ಸಚೇತನವನ್ನು ಕಲ್ಪಿಸಿ ಕೊಡಬೇಕಾಗಿರುವುದು ಇಂದಿನ ತುರ್ತಾಗಿದೆ.

ಜಾಗತೀಕರಣದ ಅಬ್ಬರದಲ್ಲಿ ನಾವು ನಮ್ಮ ಇತಿಹಾಸದೊಳಗೆ ಮೌನವಾಗಿ ಮರೆಯಾಗಿರುವ ಎಷ್ಟೋ ಹೆಣ್ಣು ಸಂಕುಲಗಳನ್ನು ಅಡಗಿಸಿ ಬಿಟ್ಟಿದೆ ಈ ವ್ಯವಸ್ಥೆಗಳು. ಆಧುನಿಕ ಜಗತ್ತಿನೊಳಗಿನ ನಾವೀನ್ಯತೆ ಮತ್ತು ಕೌಶಲ್ಯಾಧಾರಿತ ಮಹಿಳೆ ಇಂದು ತಾಂತ್ರಿಕ ಜಗತ್ತಿನೊಳಗಿನ ವೇಗ ಮತ್ತು ಬೌದ್ಧಿಕ ಚುರುಕುತನದೊಂದಿಗೆ ತನ್ನ ಅಸ್ಥಿತ್ವ ಮತ್ತು ಅಸ್ಮಿತತೆಗೆ ತನ್ನ ಆತ್ಮ ನಿವೇದನೆಯೊಂದಿಗೆ ಹೊಸ ಇತಿಹಾಸ ಸೃಷ್ಟಿಸುತ್ತಾ ದಾಖಲೀಕರಣಗೊಂಡಿದ್ದಾಳೆ.

ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಉದ್ಯೋಗ, ಮೀಸಲಾತಿ ಮೊದಲಾದವು ಹೆಣ್ಣಿನ ಅವಕಾಶಗಳ ಪರಿಧಿಯನ್ನು ವಿಸ್ತರಿಸಿರುವುದು ನಿಜ. ಆದರೆ ಸ್ವಾವಲಂಬನೆ ಸಾಧಿಸಲು ಪೂರಕವಾದ ಎಲ್ಲಾ ಕ್ರಮಗಳ ಹೊರತಾಗಿಯೂ ಮಹಿಳೆ ಸ್ವಾಯತ್ತ ಬದುಕನ್ನು ಪಡೆಯಲಾಗಿಲ್ಲ.

ಮಹಿಳೆಯನ್ನು ಹೇರುವ, ಹೊರುವ, ಪೊರೆಯುವ ಜವಾಬ್ದಾರಿಗಳಿಗಷ್ಟೇ ಮೀಸಲಾಗಿಟ್ಟಿದ್ದರೆ ಇಂದಿನ ಮಹಿಳಾ ದಿನಾಚರಣೆಯ ಮಹತ್ವದ ಗುರಿಗಳೇನು? ಮಹಿಳಾ ವಾದದ ಗುರಿಗಳೇನು? ಸ್ತ್ರೀವಾದಿಗಳ ಹೋರಾಟದ ಸ್ಪರ್ಶವೇನು? ಎಂಬುದರ ಬಗ್ಗೆ ಪ್ರಸ್ತುತ ಗಂಭೀರವಾದ ಚರ್ಚೆಯಾಗಬೇಕಿದೆ.

ಯಾವುದೇ ದೇಶ -ಕಾಲಮಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಪುರುಷ ಲೋಕದ ಲಕ್ಷ್ಮಣ ರೇಖೆಯನ್ನು ದಾಟಿ ಇಟ್ಟ ಏಳುಬೀಳಿನ ಪ್ರಯತ್ನದ ಸ್ಪಷ್ಟ ಹಾದಿಯಲ್ಲಿ ಸಿಗುವ ಕೆಲವು ಹೆಣ್ಣು ಹೆಜ್ಜೆಗಳೂ ಕೂಡ ಈ ಮಹಿಳಾ ಚರಿತ್ರೆಯಲ್ಲಿ ಮಾದರಿಯಾಗಿ, ಸ್ಫೂರ್ತಿಯಾಗಿ ನಿಲ್ಲಬಲ್ಲ ನಿದರ್ಶನಗಳು ಹಲವಾರು.

ಈ ಬಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ” Give to Gain ” ಕ್ಯಾಂಪೇನ್ ಆಯೋಜಿಸಲಾಗಿದೆ. ಇದು ಉದಾರತೆ ಮತ್ತು ಸಹಭಾಗಿತ್ವವನ್ನು ಸೂಚಿಸುತ್ತದೆ. ಲಿಂಗ ಸಮಾನತೆ, ಔದಾರ್ಯ ಮತ್ತು ಸಹಯೋಗದ ಮನಸ್ಥಿತಿಯೊಂದಿಗೆ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದರ ಅಡಿಯಲ್ಲಿ ಮಹಿಳೆಯರ ಪ್ರಗತಿಗಾಗಿ ಇರುವ ರಚನಾತ್ಮಕ ಅಡೆತಡೆಗಳನ್ನು ತೆಗೆದು ಹಾಕುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಪ್ರಾಯೋಗಿಕ ಕ್ರಿಯೆಯನ್ನು ಪ್ರೋತ್ಸಾಹಿಸುತ್ತದೆ. ವ್ಯಕ್ತಿಗಳು, ಸಂಸ್ಥೆಗಳು, ಮತ್ತು ಸರ್ಕಾರಗಳಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಬೆಂಬಲಿಸುತ್ತದೆ. ಇದರ ಮೂಲಕ ಸಮೃದ್ಧಿ, ಅಭಿವೃದ್ಧಿ ಹಂಚಿಕೆಯಾಗುವುದರ ಮೂಲಕ ಮಹಿಳೆಯರನ್ನು ಸಬಲೀಕರಣ ಗೊಳಿಸುವುದು ಇಂದಿನ ” ಮಹಿಳಾ ದಿನ ” ಆಚರಣೆಯ ಸಂಭ್ರಮದ ಆದ್ಯತೆಯಾಗಿದೆ.

ಗೀತಾ ಭರಮಸಾಗರ
ಲೇಖಕರು, ಶಿಕ್ಷಕರು
ಮೊ ನಂ =9113694200

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading