ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ನಡೆದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಬ್ರಹ್ಮರಥೋತ್ಸವವು ಶುಕ್ರವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮಧ್ಯ ಕರ್ನಾಟಕದ ಬುಡಕಟ್ಟು ಸಮುದಾಯಗಳ ಆರಾಧ್ಯ ದೈವವಾಗಿರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿಗೆ ಭಕ್ತರು ಅಪಾರ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಥೋತ್ಸವದಲ್ಲಿ ಭಾಗವಹಿಸಿ ರಥಕ್ಕೆ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆಯಲಾಯಿತು. ನಾಡಿನ ಸಮೃದ್ಧಿ, ಶಾಂತಿ ಹಾಗೂ ಜನರ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗಿದ್ದು, ಈ ವರ್ಷ ಉತ್ತಮ ಮಳೆಯಾಗಿ ರೈತರಿಗೆ ಸಮೃದ್ಧ ಬೆಳೆ ಬರಲಿ ಎಂದು ಪ್ರಾರ್ಥಿಸಲಾಯಿತು.







ಉರಿ ಬಿಸಿಲು, ಗಾಳಿ ಹಾಗೂ ದೂಳನ್ನೂ ಲೆಕ್ಕಿಸದೇ ಬೆಳಗ್ಗೆಯಿಂದಲೇ ಭಕ್ತರ ಜನಸಾಗರ ನಾಯಕನಹಟ್ಟಿಗೆ ಹರಿದುಬಂದಿತು. ಐತಿಹಾಸಿಕ ಹಿನ್ನೆಲೆ ಹೊಂದಿರುವ ತಿಪ್ಪೇರುದ್ರಸ್ವಾಮಿ, ನಾಯಕನಹಟ್ಟಿಯ ದೊಡ್ಡ ಕೆರೆಯನ್ನು ಕಟ್ಟಿಸಿದ ಮಹಿಮೆ ಹೊಂದಿದವರು ಎಂಬ ನಂಬಿಕೆ ಭಕ್ತರಲ್ಲಿ ಇದೆ.
ಹೊರಮಠ ಹಾಗೂ ಒಳಮಠಗಳಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಪೂಜೆಗಳು ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ತಮ್ಮ ಭಕ್ತಿಭಾವ ವ್ಯಕ್ತಪಡಿಸಿದರು.
ಮಧ್ಯಾಹ್ನ 3.45ರ ಸುಮಾರಿಗೆ ಚಿತ್ತಾ ನಕ್ಷತ್ರದಲ್ಲಿ ರಥವನ್ನು ರಥಬೀದಿಯಿಂದ ಹೊರಮಠದವರೆಗೆ ಎಳೆಯಲಾಯಿತು. ಸಾವಿರಾರು ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿಭಾವದ ಸಮರ್ಪಣೆ ಸಲ್ಲಿಸಿದರು.
ಜಾತ್ರೆಯ ವಿಶೇಷವಾಗಿರುವ ಮುಕ್ತಿ ಬಾವುಟದ ಹರಾಜಿನಲ್ಲಿ ಅಂಜಲಗೆರೆ ಗ್ರಾಮದ ಶ್ರೀನಾಥ್ ಅವರು 32 ಲಕ್ಷ ರೂಪಾಯಿಗೆ ಬಾವುಟವನ್ನು ಪಡೆದುಕೊಂಡರು.
ಈ ಜಾತ್ರೆಯಲ್ಲಿ ಜಿಲ್ಲಾ ಉಸ್ತುವರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳ, ಶಾಸಕ ಟಿ.ರಘುಮೂರ್ತಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ದೇವರ ದರ್ಶನ ಪಡೆದರು. ರೈತರಿಗೆ ಉತ್ತಮ ಬೆಳೆ ಬರಲಿ ಹಾಗೂ ನಾಡು ಸಮೃದ್ಧಿಯಾಗಲಿ ಎಂದು ಅವರು ಪ್ರಾರ್ಥಿಸಿದರು.
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರ ಅಪಾರ ಭಕ್ತಿ ಹಾಗೂ ಉತ್ಸಾಹ ಗಮನಾರ್ಹವಾಗಿತ್ತು. ಜಿಲ್ಲಾಡಳಿತವು ಅಗತ್ಯ ಸೌಲಭ್ಯಗಳನ್ನು ಒದಗಿಸಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಬಂದೋಬಸ್ತು ವ್ಯವಸ್ಥೆ ಮಾಡಿತ್ತು.
About The Author
Discover more from JANADHWANI NEWS
Subscribe to get the latest posts sent to your email.