ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ, ಜೂನ್ 3: ಪ್ರಾಮಾಣಿಕ ಹಾಗೂ ನಿಷ್ಠಾವಂತ ಸರ್ಕಾರಿ ಸೇವಕನಿಗೆ ಸರ್ಕಾರಗಳು ನೀಡುವ ಪದಕಗಳಿಗಿಂತ ಜನಸಾಮಾನ್ಯರು ನೀಡುವ ಗೌರವವೇ ಶ್ರೇಷ್ಠವಾದದ್ದು. ಸೇವಾ ಅವಧಿಯಲ್ಲಿ ಜನರಿಂದ ದೊರೆತಿರುವ ಪ್ರೀತಿ, ವಿಶ್ವಾಸ ಮತ್ತು ಗೌರವ ನನ್ನ ಜೀವನದ ಅಮೂಲ್ಯ ಸಂಪತ್ತಾಗಿದೆ ಎಂದು ನಿವೃತ್ತ ಸರ್ಕಲ್ ಇನ್ಸ್ಪೆಕ್ಟರ್ ಎನ್. ತಿಮ್ಮಣ್ಣ ಹೇಳಿದರು.
ತಾಲೂಕಿನ ಮಧುರೆ ಗ್ರಾಮದ ಕಲ್ಪವನದಲ್ಲಿ ಆಯೋಜಿಸಲಾಗಿದ್ದ ತಮ್ಮ ವಯೋನಿವೃತ್ತಿ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಭಗವಂತನ ಆಶೀರ್ವಾದದಿಂದ ಸರ್ಕಾರಿ ಸೇವೆಗೆ ಸೇರುವ ಅವಕಾಶ ದೊರೆಯಿತು. ಪೊಲೀಸ್ ಪೇದೆಯಾಗಿ ಆರಂಭವಾದ ನನ್ನ ಸೇವಾ ಪಯಣ ವಿವಿಧ ಹಂತಗಳನ್ನು ದಾಟಿ ಸರ್ಕಲ್ ಇನ್ಸ್ಪೆಕ್ಟರ್ ಹುದ್ದೆಯವರೆಗೆ ತಲುಪಿದೆ. ಈ ಅವಧಿಯಲ್ಲಿ ಕರ್ತವ್ಯವನ್ನು ಕಾಯ-ವಾಚ-ಮಾನಸ ಆತ್ಮತೃಪ್ತಿ ತರುವ ರೀತಿಯಲ್ಲಿ ನಿರ್ವಹಿಸಿರುವ ಹೆಮ್ಮೆ ನನಗಿದೆ ಎಂದರು.
ಸಮಯ ಶಿಸ್ತು ಮತ್ತು ಪ್ರಾಮಾಣಿಕತೆ ನನ್ನ ಸೇವಾ ಜೀವನದ ಪ್ರಮುಖ ಆಧಾರಸ್ತಂಭಗಳಾಗಿದ್ದವು. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಣೆ ಕೇವಲ ಉದ್ಯೋಗವಲ್ಲ, ಅದು ಸಮಾಜದ ಸ್ವಾಸ್ಥ್ಯ ಮತ್ತು ಶಾಂತಿ ಕಾಪಾಡುವ ಮಹತ್ತರ ಜವಾಬ್ದಾರಿಯಾಗಿದೆ. ಹೊಸದುರ್ಗದಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ಒತ್ತಡಕ್ಕೂ ಮಣಿಯದೆ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸುವುದನ್ನೇ ಧ್ಯೇಯವಾಗಿಸಿಕೊಂಡಿದ್ದೆ. ಸರ್ಕಾರಿ ಸೇವೆಯನ್ನು ಭಗವಂತನ ಸೇವೆಯೆಂದು ನಂಬಿ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ತಿರುಪತಿ ಪಾಟೀಲ್, ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯದ ಜೊತೆಗೆ ಕುಟುಂಬದಲ್ಲಿಯೂ ಸಮಯ ಪ್ರಜ್ಞೆ ಮತ್ತು ಶಿಸ್ತಿನ ಮೌಲ್ಯಗಳನ್ನು ಬೆಳೆಸುತ್ತಾರೆ. ತಿಮ್ಮಣ್ಣ ಅವರು ತಮ್ಮ ಕುಟುಂಬದ ಸದಸ್ಯರಲ್ಲಿಯೂ ಶಿಸ್ತು ಮತ್ತು ಮೌಲ್ಯಗಳ ಪಾಲನೆಯನ್ನು ರೂಢಿಸಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಸದುರ್ಗ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಗೌಡ, ಪಿಎಸ್‌ಐಗಳಾದ ಭೀಮನಗೌಡ ಪಾಟೀಲ್, ಮಹೇಶ್ ಕುಮಾರ್, ಶ್ರೀಶೈಲ, ಮುಖಂಡರಾದ ಕಾರೇಹಳ್ಳಿ ಬಸವರಾಜ್, ಆಗ್ರೋ ಶಿವಣ್ಣ, ಸದ್ಗುರು ಪ್ರದೀಪ್, ತುಂಬಿನಕೆರೆ ಬಸವರಾಜ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶಾಂತಪ್ಪ, ಉಪಾಧ್ಯಕ್ಷ ನಾಗತಿಹಳ್ಳಿ ಮಂಜುನಾಥ್ ಸೇರಿದಂತೆ ನೂರಾರು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.