ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ, ಜೂನ್ 1: ತಾಲೂಕಿನ ಬೆಲಗೂರಿನ ಶ್ರೀ ಕ್ಷೇತ್ರ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಶಾಸಕ ಬಿ.ಜಿ. ಗೋವಿಂದಪ್ಪ ಅವರು ಬೆಲಗೂರಿನಿಂದ ನೇರವಾಗಿ ಶೃಂಗೇರಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗೋವಿಂದಪ್ಪ, ಹೊಸದುರ್ಗ ತಾಲೂಕಿನ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಈ ಬಸ್ ಸೇವೆ ಬಹಳ ಅನುಕೂಲಕರವಾಗಲಿದೆ ಎಂದರು. ತಾಲೂಕಿನಿಂದ ಶೃಂಗೇರಿ ಹಾಗೂ ಸುತ್ತಮುತ್ತಲಿನ ಬೋರ್ಡಿಂಗ್ ಶಾಲೆಗಳು, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ನೂರಾರು ವಿದ್ಯಾರ್ಥಿಗಳು ಈ ಬಸ್ ಸೇವೆಯಿಂದ ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಿದರು.
ಶೃಂಗೇರಿ ಶ್ರೀ ಶಾರದಾಂಬೆ ದರ್ಶನಕ್ಕಾಗಿ ಹಾಗೂ ಇತರ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಭಕ್ತರಿಗೆ ಸಹ ಈ ನೇರ ಬಸ್ ವ್ಯವಸ್ಥೆ ಸಹಕಾರಿಯಾಗಲಿದೆ. ಬಹುದಿನಗಳ ಸಾರ್ವಜನಿಕ ಬೇಡಿಕೆಯನ್ನು ಪರಿಗಣಿಸಿ ಹೊಸದುರ್ಗ ಡಿಪೋ ವತಿಯಿಂದ ಹೊಸದುರ್ಗ–ಶೃಂಗೇರಿ ಮಾರ್ಗದ ಬಸ್ ಸೇವೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗ ಕೆಎಸ್‌ಆರ್‌ಟಿಸಿ ವಿಭಾಗೀಯ ಹಿರಿಯ ನಿಯಂತ್ರಣಾಧಿಕಾರಿಗಳ ಸಹಕಾರದಿಂದ ಬಸ್ ಮಂಜೂರಾಗಿದ್ದು, ಇಂದಿನಿಂದ ನಿಯಮಿತ ಸಂಚಾರ ಆರಂಭಗೊಂಡಿದೆ. 50 ಆಸನಗಳ ಸಾಮರ್ಥ್ಯ ಹೊಂದಿರುವ ಈ ಬಸ್‌ನಲ್ಲಿ ನಾಲ್ಕು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವೂ ಲಭ್ಯವಿದೆ ಎಂದು ಮಾಹಿತಿ ನೀಡಿದರು.
ಬೆಲಗೂರು ಶ್ರೀ ಕ್ಷೇತ್ರದ ಶ್ರೀ ವಿಜಯ ಬಿಂದು ಮಾಧವ ಶರ್ಮಾ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿ ಬಸ್ ಸೇವೆಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು, ಮುಖಂಡರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ: ಬೆಲಗೂರಿನ ಶ್ರೀ ಕ್ಷೇತ್ರ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಶಾಸಕ ಬಿ.ಜಿ. ಗೋವಿಂದಪ್ಪ ಅವರು ಬೆಲಗೂರಿನಿಂದ ನೇರವಾಗಿ ಶೃಂಗೇರಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಬೆಲಗೂರು–ಶೃಂಗೇರಿ ಬಸ್ ವೇಳಾಪಟ್ಟಿ
ಬೆಲಗೂರು ಗ್ರಾಮದಿಂದ ಪ್ರತಿದಿನ ಬೆಳಿಗ್ಗೆ 7.15ಕ್ಕೆ ಹೊರಡುವ ಬಸ್ ಹೊಸದುರ್ಗ, ಅಜ್ಜಂಪುರ, ತರೀಕೆರೆ ಹಾಗೂ ಎನ್.ಆರ್.ಪುರ ಮಾರ್ಗವಾಗಿ ಮಧ್ಯಾಹ್ನ 1.15ಕ್ಕೆ ಶೃಂಗೇರಿ ಬಸ್ ನಿಲ್ದಾಣ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 1.30ಕ್ಕೆ ಹೊರಟು ಇದೇ ಮಾರ್ಗದಲ್ಲಿ ಸಂಚರಿಸಿ ಬೆಲಗೂರು ಬಸ್ ನಿಲ್ದಾಣ ತಲುಪಲಿದೆ.
ಬೆಲಗೂರಿನಿಂದ ಶೃಂಗೇರಿಗೆ ಪ್ರಯಾಣ ದರ ₹244 ಹಾಗೂ ಹೊಸದುರ್ಗದಿಂದ ಶೃಂಗೇರಿಗೆ ₹214 ನಿಗದಿಪಡಿಸಲಾಗಿದೆ. ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಸೌಲಭ್ಯ ದೊರೆಯಲಿದೆ.
About The Author
Discover more from JANADHWANI NEWS
Subscribe to get the latest posts sent to your email.