June 30, 2026

ಅಧಿಕಾರ ಸ್ವೀಕರಿಸಿದ ದಿನವೇ ನಿವೃತ್ತಿ..! ಚಳ್ಳಕೆರೆಯಲ್ಲಿ ಅಪರೂಪದ ಘಟನೆ | ಶಿರಸ್ತೆದಾರ್ ಶರಣಬಸಪ್ಪ

ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಅಧಿಕಾರ ಸ್ವೀಕರಿಸಿದ ದಿನವೇ ಸರ್ಕಾರಿ ಸೇವೆಗೆ ವಿದಾಯ ಹೇಳಿದ ಪ್ರಸಂಗ ಎಲ್ಲರ ಗಮನ ಸೆಳೆದಿದೆ.

ಚಿತ್ರದುರ್ಗ ತಾಲೂಕು ಕಚೇರಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶರಣಬಸಪ್ಪ ಅವರಿಗೆ, ಚಳ್ಳಕೆರೆ ತಾಲೂಕು ಕಚೇರಿಯ ಚುನಾವಣೆ ಶಾಖೆಯ ಶಿರಸ್ತೆದಾರ್ ಹುದ್ದೆಗೆ ಮುಂಬಡ್ತಿ ನೀಡಲಾಗಿತ್ತು. ಸುಮಾರು ಮೂರು ತಿಂಗಳಿನಿಂದ ಈ ಹುದ್ದೆ ಖಾಲಿ ಇದ್ದ ಹಿನ್ನೆಲೆ ಅವರನ್ನು ಈ ಸ್ಥಾನಕ್ಕೆ ನಿಯೋಜಿಸಲಾಗಿತ್ತು.

ಇಂದು ಬೆಳಿಗ್ಗೆ ಚಳ್ಳಕೆರೆ ತಾಲೂಕು ಕಚೇರಿಯ ಚುನಾವಣೆ ಶಾಖೆಯ ಶಿರಸ್ತೆದಾರ್ ಆಗಿ ಅಧಿಕಾರ ಸ್ವೀಕರಿಸಿದ ಶರಣಬಸಪ್ಪ, ಅದೇ ದಿನ ಸಂಜೆ ಸರ್ಕಾರಿ ಸೇವೆಯಿಂದ ಗೌರವಯುತವಾಗಿ ನಿವೃತ್ತಿ ಹೊಂದಲಿದ್ದಾರೆ.

ಬಡ್ತಿ ಹೊಂದಿದ ದಿನವೇ, ಅಥವಾ ಕೆಲವೇ ಗಂಟೆಗಳ ಅಂತರದಲ್ಲಿ ನಿವೃತ್ತಿ ಪಡೆಯುವುದು ಸರ್ಕಾರಿ ಸೇವೆಯಲ್ಲಿ ಅತ್ಯಂತ ಅಪರೂಪದ ಘಟನೆ. ಇದೇ ಕಾರಣಕ್ಕೆ ಈ ಬೆಳವಣಿಗೆ ತಾಲೂಕು ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲೂ ವಿಶೇಷ ಚರ್ಚೆಗೆ ಗ್ರಾಸವಾಗಿದೆ.

ಈ ಹಿಂದೆ ಚಳ್ಳಕೆರೆ ನಗರದಲ್ಲಿಯೇ ಕಂದಾಯ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಅವರು, ಇದೀಗ ಶಿರಸ್ತೆದಾರ್ ಹುದ್ದೆಯನ್ನು ಅಲಂಕರಿಸಿ ಸೇವಾ ನಿವೃತ್ತಿ ಹೊಂದಿರುವುದು ವಿಶೇಷವಾಗಿದೆ.

ಸುಮಾರು ಮೂರು ದಶಕಗಳ ಸರ್ಕಾರಿ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಶರಣಬಸಪ್ಪ ಅವರಿಗೆ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಶುಭ ಹಾರೈಸಿದ್ದು, ಅವರ ನಿವೃತ್ತಿ ಜೀವನ ಸುಖ, ಶಾಂತಿ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ಹಾರೈಸಿದ್ದಾರೆ.