
ಚಿತ್ರದುರ್ಗಜುಲೈ28:
ಪ್ರಸಕ್ತ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 26,643 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ವಿತರಣೆಯ ಗುರಿಯನ್ನು ಕೃಷಿ ಇಲಾಖೆಯಿಂದ ನಿಗದಿಪಡಿಸಿಕೊಳ್ಳಾಗಿತ್ತು. ಈಗಾಗಲೇ 21,581 ಮೆಟ್ರಿಕ್ ಟನ್ ಯೂರಿಯಾ ವಿತರಣೆ ಮಾಡಲಾಗಿದ್ದು, 1485 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು ಲಭ್ಯವಿದೆ. ಎರಡು ಮೂರು ದಿನದಲ್ಲಿ 300 ಮೆಟ್ರಿಕ್ ಟನ್ ಯೂರಿಯಾ ಜಿಲ್ಲೆಗೆ ಸರಬರಾಜು ಆಗಲಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ.ಬಿ ಮಾಹಿತಿ ನೀಡಿದ್ದಾರೆ.
ಯೂರಿಯಾ ದಾಸ್ತಾನು ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜುಲೈ 25 ರಂದು ಕಾಪು ದಾಸ್ತಾನಿನಿಂದ ಜಿಲ್ಲೆಗೆ 500 ಟನ್ ಯೂರಿಯಾ ಪಡೆದುಕೊಂಡು ಎಲ್ಲಾ ತಾಲ್ಲೂಕುಗಳ ಖಾಸಗಿ ಹಾಗೂ ಸಹಕಾರ ಸಂಘಗಳ ಮೂಲಕ ವಿತರಣೆ ಮಾಡಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 2231 ಮೆಟ್ರಿಕ್ ಟನ್ ಡಿ.ಎ.ಪಿ, 948 ಮೆಟ್ರಿಕ್ ಟನ್ ಎಂ.ಒ.ಪಿ, 9416 ಮೆಟ್ರಿಕ್ ಟನ್ ಕಾಂಪ್ಲೆಕ್ಸ್, 316 ಮೆಟ್ರಿಕ್ ಟನ್ ಎಸ್.ಎಸ್.ಪಿ ರಸಗೊಬ್ಬರ ದಾಸ್ತಾನು ಇದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ.ಬಿ ತಿಳಿಸಿದ್ದಾರೆ.
ನ್ಯಾನೋ ರಸಗೊಬ್ಬರ ಬಳಸಲು ಸಲಹೆ:
ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಮತ್ತು ಚಳ್ಳಕೆರೆ ತಾಲ್ಲೂಕಿನಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳ 30 ರಿಂದ 45 ದಿನಗಳ ಬೆಳವಣಿಗೆ ಹಂತದಲ್ಲಿದ್ದು, ಮೇಲು ಗೊಬ್ಬರವಾಗಿ ಯೂರಿಯಾವನ್ನು ನೀಡುವುದ ಅವಶ್ಯಕವಾಗಿದೆ. ರೈತರು ನೇರ ಯೂರಿಯಾ ಬದಲು ನ್ಯಾನೋ ಯೂರಿಯಾ ಅಥವಾ ಡಿಎಪಿ ಗೊಬ್ಬರಗಳನ್ನು ಸಹ ಮೆಕ್ಕೆಜೋಳ ಬೆಳೆಗೆ ನೀಡಬಹುದು. 500 ಮಿ.ಲಿ. ನ್ಯಾನೋ ಯೂರಿಯಾದಲ್ಲಿ ಶೇ.20 ರಷ್ಟು ಸಾರಜನಕ ಅಂಶವಿದೆ. 500 ಮಿ.ಲೀ. ನ್ಯಾನೋ ಡಿಎಪಿಯಲ್ಲಿ ಶೇ.8 ರಷ್ಟು ಸಾರಜನಕ, ಶೇ.16 ರಷ್ಟು ರಂಜಕ ಇರುತ್ತದೆ. ಸದ್ಯ ಜಿಲ್ಲೆಯಲ್ಲಿ 15,000 ಲೀಟರ್ ನ್ಯಾನೋ ಯೂರಿಯಾ, 3500 ಲೀಟರ್ ನ್ಯಾನೋ ಡಿಎಪಿ ಲಭ್ಯವಿದೆ. ನ್ಯಾನೋ ಯೂರಿಯಾ ದರ ರೂ.225, ನ್ಯಾನೋ ಡಿಎಪಿ ದರ ರೂ.600 ಇದೆ.
ಈ ನ್ಯಾನೋ ಗೊಬ್ಬರಗಳನ್ನು ಪ್ರತಿ ಲೀಟರ್‌ಗೆ 3 ರಿಂದ 5 ಮಿ.ಲಿ. ಬೆರಿಸಿ, ಮೆಕ್ಕೆಜೋಳ ಬೆಳೆಗೆ 30 ರಿಂದ 35 ದಿನಗಳಲ್ಲಿ ಮೊದಲ ಹಂತದಲ್ಲಿ, 50 ರಿಂದ 60 ದಿನಗಳಲ್ಲಿ ಎರಡನೇ ಹಂತದಲ್ಲಿ ಸಿಂಪಡಿಸಿದರೆ, ಉತ್ತಮ ಇಳುವರಿ ಪಡೆಯಬಹುದು. ಇದರ ಹೊರತಾಗಿಯೂ ನ್ಯಾನೋ ಗೊಬ್ಬರಗಳನ್ನು ಕೀಟನಾಶಕ, ಶಿಲೀಂದ್ರ ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರಗಳೊಂದಿಗೆ ಸೇರಿಸಿ ಸಿಂಪಡಿಸಬಹುದು. ಕೂಲಿ ಕಾರ್ಮಿಕರ ಕೊರತೆ ಇದ್ದರೆ ಸಿಂಪಡಣೆಗೆ ಡ್ರೋನ್ ಬಳಸಬಹುದು. ಇದರಿಂದ ಮೇಲು ಗೊಬ್ಬರವಾಗಿ ನೀಡುವ ಯೂರಿಯಾದಲ್ಲಿ ಶೇ.50 ರಷ್ಟು ಕಡಿಮೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಇಪ್ಕೋ ಪ್ರತಿನಿಧಿ ಚಿದಂಬರ ಮೂರ್ತಿ ಕುಣಕರ್ಣಿ ಮೊಬೈಲ್ ಸಂಖ್ಯೆ 9448090427 ಕರೆ ಮಾಡಬಹುದು.
ದಾಸ್ತಾನು ವಿವರ ಪ್ರದರ್ಶಿಸಲು ಸೂಚನೆ:
ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಮಾರಟ ಬೆಲೆಗಳನ್ನು ರಸಗೊಬ್ಬರ ಮಾರಾಟಗಾರರು ಅಂಗಡಿಗಳ ಮುಂದಿನ ನಾಮ ಫಲಕಗಳಲ್ಲಿ ಸಾರ್ವಜನಿಕರಿಗೆ ಗೋಚರವಾಗುವಂತೆ ಪ್ರಕಟ ಮಾಡುವುದು ಕಡ್ಡಾಯವಾಗಿದೆ. ಇದರೊಂದಿಗೆ ದೈನಂದಿನ ಬಿತ್ತನೆ ಹಾಗೂ ಬೀಜ ರಸಗೊಬ್ಬರಗಳ ದಾಸ್ತಾನು ವಿವರವನ್ನು ನಾಮ ಫಲಕದಲ್ಲಿ ಕಡ್ಡಾಯವಾಗಿ ನಮೂದು ಮಾಡಬೇಕು. ಯಾವುದೇ ಕಾರಣಕ್ಕೂ ರಸಗೊಬ್ಬರಗಳ ಚೀಲದ ಮೇಲೆ ಮುದ್ರಿತವಾದ ಗರಿಷ್ಠ ಬೆಲೆಗಿಂತ ಹೆಚ್ಚಿನ ದರ ಪಡೆಯಬಾರದು. ರಸಗೊಬ್ಬರ ಮಾರಾಟಗಾರರು ರಸಗೊಬ್ಬರಗಳ ಕೃತಕ ಅಭಾವ ಸೃಷ್ಠಿ ಮಾಡುವುದು, ಹೆಚ್ಚಿನ ದರ ಪಡೆಯುವುದು ಕಂಡುಬಂದರೆ ನಿಯಮಾನುಸಾರ ಪರವಾನಿಗೆ ರದ್ದು ಪಡಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಜಂಟಿ ಕೃಷಿ ನಿರ್ದೇಶಕ ಮಂಜುನಾಥ.ಬಿ ಎಚ್ಚರಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.