
ಹಿರಿಯೂರು:
ನಗರದ ನಗರಸಭೆಯಲ್ಲಿ ಇ-ಸ್ವತ್ತು ನೀಡಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದ್ದು, ಇದಕ್ಕೆ ಅನುಕಂಪದ ಆಧಾರದ ಮೇಲೆ ನೇಮಕಗೊಂಡ ಹಾಗೂ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರೇ ಕಾರಣ ಎಂಬುದಾಗಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾದ ಆಲೂರುಸಿದ್ಧರಾಮಣ್ಣ ಅವರು ಆರೋಪಿಸಿದ್ದಾರೆ.
ಅಧ್ಯಕ್ಷರು, ನಗರಸಭೆಯಲ್ಲಿ ಅರ್ಹತೆ ಇಲ್ಲದ ದಿನಗೂಲಿ ನೌಕರರಿಗೆ ಮಹತ್ವದ ವಿಭಾಗಗಳನ್ನು ನೀಡಿದ್ದಾರೆ. ಸೇವಾಭದ್ರತೆ ಇಲ್ಲದ, ಸೇವಾ ಪುಸ್ತಕದಲ್ಲಿ ದಾಖಲಾಗದ ನೌಕರರನ್ನು ನಿಯಂತ್ರಿಸಲು ಪೌರಾಯುಕ್ತರು ವಿಫಲರಾಗಿದ್ದಾರೆ ಎಂಬುದಾಗಿ ಅವರು ಬೇಸರ ವ್ಯಕ್ತಪಡಿಸಿದರು.
ನನ್ನದೇ ಪ್ರಕರಣದಲ್ಲಿ ಇ-ಸ್ವತ್ತು ಹತ್ತಾರು ಬಾರಿ ಅಲೆದಾಡಿಸಿದ್ದರು.ಕೊನೆಗೆ ಬೇಸೆತ್ತು ಪೌರಾಯುಕ್ತರಿಗೆ ದೂರು ನೀಡಿದಾಗ ಅವರು ಸಂಬಂಧಿಸಿದ ನೌಕರರನ್ನು ಕರೆದು ಇ-ಸ್ವತ್ತು ಕೊಡಿಸಿದರು. ನನ್ನಂತಹ ಹಿರಿಯ ನಾಗರೀಕನ ಪಾಡು ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿಯೇನು ಎಂಬುದಾಗಿ ಅವರು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಅನುಕಂಪದ ಆಧಾರದ ಮೇಲೆ ನೇಮಕಗೊಂಡಿರುವ ಕೆಲವರು ಕೆಲಸಕ್ಕೆ ಬಂದಾಗಿನಿಂದಲೂ ವರ್ಗಾವಣೆಗೊಂಡಿಲ್ಲ. ನಗರಸಭೆಯ ಒಳ-ಹೊರಗುಗಳನ್ನೆಲ್ಲಾ ಕರಗತ ಮಾಡಿಕೊಂಡಿರುವ ಇವರಲ್ಲಿ ಕೆಲವರು ಸಾರ್ವಜನಿಕರ ಅರ್ಜಿಗಳನ್ನು ಕಣ್ಮರೆ ಮಾಡುವುದರಲ್ಲಿ ಸಹ ನಿಸ್ಸೀಮರು.
ಯಾರೇ ಅರ್ಜಿದಾರರು ತಮ್ಮ ಕೆಲಸ ಆಗದಿರಲು ಕಾರಣ ಕೇಳಿದರೆ, “ನಿಮ್ಮ ಅರ್ಜಿ ಕಳೆದಿದೆ. ಮತ್ತೊಮ್ಮೆ ಕೊಡಿ” ಎಂಬ ಸಿದ್ಧ ಉತ್ತರ ನೀಡುತ್ತಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇವರುಗಳಿಗೆ ನಗರಸಭೆ ನೋಟೀಸ್ ನೀಡಿದ್ದರೆ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆ ತಪ್ಪುತ್ತಿತ್ತು ಎಂಬುದಾಗಿ ಅವರು ಹೇಳಿದರು.
ನಗರಸಭೆಯಲ್ಲಿ ದಿಕ್ಕು ತಪ್ಪಿರುವ ಆಡಳಿತವನ್ನು ಸರಿದಾರಿಗೆ ತರಲು ಹಲವು ವರ್ಷಗಳಿಂದ ಇಲ್ಲೇ ತಳ ಊರಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು. ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರಿಗೆ ಮಹತ್ವದ ಜವಬ್ದಾರಿಯನ್ನು ಕೊಡಬಾರದು. ಪ್ರತಿ ನೌಕರರ ಕೆಲಸದ ಪ್ರಗತಿಯ ವರದಿಯನ್ನು ವಾರಕ್ಕೆ ಒಮ್ಮೆಯಾದರೂ ಪರಿಶೀಲಿಸಬೇಕು ಎಂಬುದಾಗಿ ಅವರು ಒತ್ತಾಯಿಸಿದ್ದಾರೆ.