
ಚಿತ್ರದುರ್ಗಏ.17:
ಆಹಾರ ಪೌಷ್ಠಿಕತೆ ನೈರ್ಮಲ್ಯ ಜ್ಞಾನ ತಿಳಿದು ಸ್ವಾಸ್ಥ್ಯ ಸಮಾಜ ಕಟ್ಟಿಕೊಳ್ಳಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ವಿಜಾಪುರ ಗ್ರಾಮದ ಅಂಗನವಾಡಿ ಕೇಂದ್ರದ ಬಳಿ ಇರುವ ಹನುಮಂತ ದೇವಸ್ಥಾನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಮತ್ತು ಚಿಕ್ಕಬೆನ್ನೂರು ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಗ್ರಾಮ ಆರೋಗ್ಯ ಪೌಷ್ಟಿಕ ನೈರ್ಮಲ್ಯ ಸಭೆಯಲ್ಲಿ ಅವರು ಮಾತನಾಡಿದರು.
ಗರ್ಭಿಣಿ, ಬಾಣಂತಿ, ಮಕ್ಕಳು ಮತ್ತು ವಯೋವೃದ್ಧರಲ್ಲಿ ಕಂಡು ಬರುವ ರಕ್ತ ಹೀನತೆ ಸರಿದೂಗಿಸಲು ನುಗ್ಗೆ ಸೊಪ್ಪು, ಬಸಲೆ, ಗೋಣಿ ದಂಟಿನ ಸೊಪ್ಪು, ಪಾಲಕ ಸೊಪ್ಪು ಹೇರಳವಾಗಿ ಬಳಸಿ ಮನೆಗಳ ಮುಂದೆ ಕೈ ತೋಟ ಮಾಡಿಕೊಂಡು ನಿಮ್ಮ ಮನೆಗೆ ಅಗತ್ಯವಿರುವ ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿ ಕುಟುಂಬದ ಆರ್ಥಿಕ ಹೊರೆ ಕಡಿಮೆ ಮಾಡಿ ಎಂದರು.
ಆಹಾರ ವರ್ಗೀಕರಣ, ಶಕ್ತಿ ವರ್ಧಕ ಆಹಾರ, ದೇಹದ ಬೆಳವಣಿಗೆಗೆ ಅಗತ್ಯವಾದ ಆಹಾರ ಮತ್ತು ದೇಹದ ರಕ್ಷಣೆಗೆ ಬೇಕಾದ ಆಹಾರಗಳು, ಧಾನ್ಯಗಳು, ದ್ವಿದಳ ದಾನ್ಯಗಳು, ಸೊಪ್ಪು ತರಕಾರಿ ಮೀನು, ಹಾಲು- ತುಪ್ಪ, ಬೇಳೆಕಾಳುಗಳು, ಅನ್ನಾಂಗಗಳ ಉಪಯೋಗ ದೊರೆಯುವ ಮೂಲ ಬಳಸುವ ವಿಧಾನದ ಬಗ್ಗೆ ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಅವರು ಕೈ ತೊಳೆಯುವ ವಿಧಾನದ ಬಗ್ಗೆ ಹಾಗೂ ಕುಟುಂಬ ಯೋಜನೆಯಲ್ಲಿ ಪುರುಷರ ಭಾಗವಹಿಸುವಿಕೆ ಬಗ್ಗೆ ತಿಳಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಕ್ಷಯರೋಗ ನಿಯಂತ್ರಣದ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಲಸಿಕಾ ಅಧಿವೇಶನ ನಡೆಸಿ 10 ಮಕ್ಕಳಿಗೆ ವಿವಿಧ ಹಂತದ ಲಸಿಕೆ ನೀಡಲಾಯಿತು. ಪೌಷ್ಟಿಕಾಹಾರ ಪ್ರಾತ್ಯಕ್ಷಿಕೆ ನೀಡಲಾಯಿತು
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಶೋಭಾ, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ ಆಶಾ, ಆಶಾ ಕಾರ್ಯಕರ್ತೆ ಮಮತ, ಗ್ರಾಮದ ಮುಖಂಡರಾದ ಕೆ.ದ್ಯಾಮಪ್ಪ, ತಿಪ್ಪೇಸ್ವಾಮಿ, ನಾಗರಾಜು, ಕಿಶೋರಿಯರು, ಗರ್ಭಿಣಿಯರು, ಮಕ್ಕಳು ಉಪಸ್ಥಿತರಿದ್ದರು.

