ಚಿತ್ರದುರ್ಗ:
ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ನಾಡುನುಡಿ ಬಳಗ ಚಿತ್ರದುರ್ಗ ಇವರ ಸಹಯೋಗದಲ್ಲಿ ನಗರದ ಕ್ರೀಡಾಭವನದಲ್ಲಿ ನಿರ್ದಿಗಂತ ಮೈಸೂರು ರಂಗತಂಡದವರಿಂದ ‘ಕೊಡಲ್ಲ ಅಂದ್ರ ಕೊಡಲ್ಲ…’ ನಾಟಕವನ್ನು ಪ್ರದರ್ಶಿಸಲಾಯಿತು.
ಇಟಾಲಿಯನ್ ಖ್ಯಾತ ನಾಟಕಕಾರ ಹಾಗೂ ನೋಬೆಲ್ ಪ್ರಶಸ್ತಿ ವಿಜೇತ ದಾರಿಯೋ ಫೋ ಅವರ ‘ಕಾಂಟ್ ಪೇ, ವೋಂಟ್ ಪೇ’ ನಾಟಕವನ್ನು ಆಧರಿಸಿ ರೂಪಿಸಲಾದ ಈ ನಾಟಕ, ಆಡಳಿತ ವ್ಯವಸ್ಥೆ ಜನರಿಂದ ತೆರಿಗೆಯನ್ನು ಹೇಗೆ ವಸೂಲಿ ಮಾಡುತ್ತದೆ ಎಂಬುದನ್ನು ಕೇಂದ್ರಬಿಂದು ಮಾಡಿಕೊಂಡಿತ್ತು. ತೆರಿಗೆ ಭಾರ ಮಾತ್ರವಲ್ಲದೆ, ಸಾಮಾಜಿಕ ಅಸಮಾನತೆ, ಜನಸಾಮಾನ್ಯರ ಸಂಕಷ್ಟ, ಅವರ ಬದುಕಿನ ತಲ್ಲಣ ಹಾಗೂ ಸಂವೇದನೆಗಳನ್ನು ನಾಟಕವು ಪರಿಣಾಮಕಾರಿಯಾಗಿ ಮೂಡಿಸಿತು.
ದೇಶ–ಕಾಲದ ಮಿತಿಯನ್ನು ಮೀರಿ ಜನರು ಎದುರಿಸುವ ಸಮಸ್ಯೆಗಳು ಎಲ್ಲೆಡೆ ಒಂದೇ ಎಂಬುದನ್ನು ನಾಟಕ ಸ್ಪಷ್ಟವಾಗಿ ಬಿಂಬಿಸಿತು. ಒಂದೆಡೆ ಹೆಚ್ಚುತ್ತಿರುವ ಬೆಲೆ ಏರಿಕೆ, ಮತ್ತೊಂದೆಡೆ ಕಾರ್ಪೊರೇಟ್ ಪರ ನೀತಿಗಳಿಂದ ತೆರಿಗೆ ವಸೂಲಿಗೆ ಒತ್ತು ನೀಡುತ್ತಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಜನರಲ್ಲಿ ಪ್ರಶ್ನಿಸುವ ಮನೋಭಾವ ಕಡಿಮೆಯಾಗುತ್ತಿರುವುದನ್ನೂ ನಾಟಕ ಎತ್ತಿಹಿಡಿದಿತು.
ಮಂಗಳೂರು ಹಾಗೂ ಹಾವೇರಿ ಮಿಶ್ರಿತ ಕನ್ನಡದಲ್ಲಿ ರೂಪುಗೊಂಡ ನಾಟಕ ಪ್ರೇಕ್ಷಕರನ್ನು ಸೆಳೆಯಿತು. ರಾಷ್ಟ್ರೀಯ ನಾಟಕ ಶಾಲೆಯ ಕಲಾವಿದೆ ಸಲ್ಮಾ ದಂಡಿನ್ ಅವರ ಹಳ್ಳಿಯ ಮಹಿಳೆಯ ಪಾತ್ರದ ಅಭಿನಯ ಮನಮುಟ್ಟುವಂತಿತ್ತು. ಪೊಲೀಸ್ ಪೇದೆ ಪಾತ್ರದಲ್ಲಿ ದಿನೇಶ್ ನಾಯ್ಕ್ ಅವರ ಅಭಿನಯ ಹಾಗೂ “ಕ್ರಾಂತಿಯ ಚಕ್ರ ತಿರುಗುತ್ತಲೇ ಇರಬೇಕು” ಎಂಬ ಸಂದೇಶ ಪ್ರೇಕ್ಷಕರಲ್ಲಿ ಚಿಂತನೆ ಹುಟ್ಟಿಸಿತು. ಬಸುರಿ ವೇಷದ ಪಾತ್ರದಲ್ಲಿ ಚರಿತ್ ಸುವರ್ಣ ಅವರ ನಟನೆ ನಗೆಪಾಟಲಿಗೇರಿಸಿತು. ನಾಟಕದ ಅಂತ್ಯದಲ್ಲಿ ತೆರಿಗೆದಾರರಾಗಿ ಮಾತ್ರ ಜನರನ್ನು ನೋಡುವ ಸರ್ಕಾರದ ನಿಲುವಿನ ವಿರುದ್ಧ ಹಾಡಿದ ಒಕ್ಕೊರಳಿನ ಹಾಡು ಪ್ರೇಕ್ಷಕರ ಮೆಚ್ಚುಗೆ ಪಡೆದಿತು.
ಮಾಧ್ಯಮ ಅಕಾಡೆಮಿ ಸದಸ್ಯ ಅಹೋಬಲಪತಿ ನಾಟಕದ ಕುರಿತು ಪ್ರತಿಕ್ರಿಯಿಸಿದರು. ಚಳ್ಳಕೆರೆ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ನಟರಾಜ್, ನಿವೃತ್ತ ಪ್ರಾಧ್ಯಾಪಕ ಡಾ. ವಿ. ಬಸವರಾಜ ಹಾಗೂ ವಕೀಲ ರಮೇಶ್ ಸಂವಾದದಲ್ಲಿ ಭಾಗವಹಿಸಿದರು. ಯಾದಲಗಟ್ಟೆ ಪ್ರಕಾಶ್ ಸ್ವಾಗತಿಸಿ ವಂದಿಸಿದರು. ವಕೀಲ ವಿಶ್ವಾನಂದ (ಕೆವಿಕೆ) ನಿರೂಪಿಸಿದರು.




ಶ್ರೀನಿವಾಸರಾಜು, ಶಿವಶಂಕರ ಸೀಗೆಹಟ್ಟಿ, ವೇದಾಂತ ಏಳಂಜಿ, ಸಿದ್ದೇಶ್ ಕೆ., ಹನುಮಂತಪ್ಪ, ಪ್ರದೀಪ್, ಮಂಜುನಾಥ ಆರ್., ಸಿದ್ದಪ್ಪ, ಕುಮಾರ್ ಹೆಚ್., ಮೋದೂರು ತೇಜ, ಟಿ. ರಾಮು ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.