March 16, 2026
1761922895834.jpg

ಚಿತ್ರದುರ್ಗ ಅ. 31
ಸರ್ಕಾರಿ ಅಧಿಕಾರಿಗಳು, ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ದೃಢ ನಿರ್ಧಾರ ಮಾಡಿದರೆ ಯಾವುದೇ ಭ್ರಷ್ಟಾಚಾರ ನಿಯಂತ್ರಣ ಕಾನೂನು ಹಾಗೂ ಮೇಲ್ವಿಚಾರಣೆಯ ಅಗತ್ಯ ಇರುವುದಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ರೋಣ ವಾಸುದೇವ್ ಹೇಳಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ “ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-2025” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ವ್ಯಕ್ತಿ ತನ್ನ ನ್ಯಾಯಬದ್ಧವಾದ ಕೆಲಸಕ್ಕಾಗಿ, ತನಗೆ ಸಿಗಬೇಕಾದ ಸೌಲಭ್ಯಕ್ಕಾಗಿ ಹಣ ನೀಡಿ, ಸರ್ಕಾರ ನಿಗಧಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಹಣ ನೀಡಿ ಸೇವೆ ಪಡೆದುಕೊಳ್ಳಬೇಕಾದರೆ ಆ ವ್ಯಕ್ತಿಯು ಶಾಪ ಹಾಕಿ ಹಣ ನೀಡುತ್ತಾರೆ. ನೊಂದ, ಬಡ ವ್ಯಕ್ತಿಯ ಶಾಪ ಮಾತ್ರ ನಮ್ಮನ್ನು ಹಾಗೂ ನಮ್ಮ ನಂತರದ ಕುಲವನ್ನೂ ಜರೂರಾಗಿ ಬಾಧಿಸಲಿದೆ. ಮಕ್ಕಳಿಗಾಗಿ ಆಸ್ತಿ, ಹಣ ಮಾಡಲು ಭ್ರಷ್ಟಾಚಾರದ ಮಾರ್ಗ ಹಿಡಿಯುವುದು ತರವಲ್ಲ. ದುರ್ಮಾರ್ಗದಿಂದ ಗಳಿಸಿದ್ದು ಯಾವುದೂ ಶಾಶ್ವತವಲ್ಲ. ಹಾಗಾಗಿ ಇದರ ಬಗ್ಗೆ ಜಾಗೃತಿ ಇದ್ದರೆ ಭ್ರಷ್ಟಾಚಾರದ ತಡೆ ಕಾಯ್ದೆ ಹಾಗೂ, ನ್ಯಾಯಾಲಯ, ನ್ಯಾಯಾಧೀಶರು ಬೇಕಾಗುವುದಿಲ್ಲ ಎಂದು ತಿಳಿಸಿದ ಅವರು, ಆದರೆ ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ವಿಚಾರಕ್ಕೂ ಕಾನೂನು ಹಾಗೂ ನ್ಯಾಯಾಲಯಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಸಣ್ಣ ಸಣ್ಣ ದೇಶಗಳು, ಸಂಪನ್ಮೂಲದ ಕೊರತೆ ಇರುವ ದೇಶಗಳು ಕೂಡ ಅಭಿವೃದ್ಧಿ ಹೊಂದಿರುವ ದೇಶಗಳಾಗಿವೆ. ಆದರೆ ನಮ್ಮ ದೇಶ ಇಷ್ಟೊಂದು ಸಂಪನ್ಮೂಲ ಭರಿತ ದೇಶವಾಗಿದ್ದರೂ ಕೂಡ ಈಗಲೂ ನಾವು ಅಭಿವೃದ್ಧಿಶೀಲ ದೇಶವಾಗಿದೆಯೇ ಹೊರತು, ಅಭಿವೃದ್ಧಿ ಹೊಂದಿರುವ ದೇಶ ಎನ್ನಲಾಗುತ್ತಿಲ್ಲ, ಇದಕ್ಕೆ ಕಾರಣ ನಮ್ಮಲ್ಲಿ ಹೆಚ್ಚಿರುವ ಭ್ರಷ್ಟಾಚಾರ ಎಂದು ಹೇಳಿದರು. ಅಧಿಕಾರಿಗಳು, ಸಿಬ್ಬಂದಿಗಳು ಪ್ರಾಮಾಣಿಕವಾಗಿ ಬದುಕುತ್ತೇನೆ ಎಂಬ ದೃಢ ನಿರ್ಧಾರ ಮಾಡಿದರೆ ಯಾವುದೇ ಕಾನೂನು ಹಾಗೂ ಮೇಲ್ವಿಚಾರಣೆಯೂ ಬೇಕಾಗುವುದಿಲ್ಲ. ಅಂತಹ ದಿನಗಳು ಬರಲಿ ಎಂದು ಆಶಯ ವ್ಯಕ್ತಪಡಿಸಿದ ಅವರು, ನಮ್ಮ ಮುಂದಿನ ಜನಾಂಗಕ್ಕೆ ಒಳ್ಳೆಯ ದೇಶ, ಸಂಸ್ಕೃತಿ, ಪರಿಸರವನ್ನು ಉಳಿಸಿ, ಬೆಳೆಸುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.
ಕಾನೂನುಗಳಲ್ಲಿನ ನ್ಯೂನತೆಗಳನ್ನು ಹುಡುಕಿ ಆರೋಪಿತರನ್ನು ಉಳಿಸಿಕೊಳ್ಳುವುದಾದರೆ ಕಾನೂನು ಮಾಡುವ ಪ್ರಯೋಜನ ಇಲ್ಲ. ನಮ್ಮ ಮನಸ್ಥಿತಿ ಬದಲಾಗದ ಹೊರತು ಎಷ್ಟೇ ಗುರುತರವಾದ, ಕಠಿಣ ಕಾನೂನುಗಳನ್ನು ಶಾಸಕಾಂಗ ನೀಡಿದರೂ, ಅವುಗಳಿಂದ ನುಸುಳಿಕೊಳ್ಳುವುದನ್ನು ಕಂಡುಕೊAಡಾಗ ಯಾವ ವ್ಯವಸ್ಥೆಯೂ ಸುಧಾರಣೆಯಾಗಲು ಸಾಧ್ಯವಿಲ್ಲ. ದೇಶ ಮುಖ್ಯ ಎಂಬುದನ್ನು ಅರಿತು ನಾವು ಸೇವೆ ಸಲ್ಲಿಸಬೇಕು. ನಮ್ಮಲ್ಲಿ ನೈಸರ್ಗಿಕ ಸಂಪನ್ಮೂಲ ಆಗಾಧವಾಗಿದ್ದು, ಈ ಸಂಪನ್ಮೂಲವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯಲು ಸಾಧ್ಯವಾಗಲಿದೆ. ಹಾಗಾಗಿ ನನ್ನಿಂದ ಬದಲಾವಣೆ ಸಾಧ್ಯವಿಲ್ಲ ಎಂಬ ನಕರಾತ್ಮಕ ಚಿಂತೆನೆ ತೊಡೆದು ಹಾಕಿ ಎಂದು ತಿಳಿಸಿದರು.
ನಮ್ಮ ಹಿರಿಯರು ಸ್ವಾತಂತ್ರö್ಯಕ್ಕಾಗಿ ಹೋರಾಡುವ ಸಂದರ್ಭದಲ್ಲಿ ಸಾಕಷ್ಟು ಮಂದಿ ಜೈಲಿಗೆ ಹೋಗಿದ್ದಾರೆ. ಆಗಿನ ಪರಿಸ್ಥಿತಿಯೇ ಬೇರೆ. ಇಂದಿನ ಪರಿಸ್ಥಿತಿಯೇ ಬೇರೆ ಇದೆ. ಇಂದಿನ ದಿನಮಾನಗಳಲ್ಲಿ ವ್ಯಕ್ತಿ ಜೈಲಿನಿಂದ ಹೊರಗಡೆ ಬಂದಾಗ ಆತನ ಹೆಸರಿನಲ್ಲಿ ಉಘೇ ಉಘೇ ಎಂದು ಭುಜದ ಮೇಲೆ ಕೂರಿಸಿಕೊಂಡು ಪಟಾಕಿ ಸಿಡಿಸಿ ಸಂಭ್ರಮಿಸುವ ಮನಸ್ಥಿತಿಯನ್ನು ಜನರು ಬೆಳೆಸಿಕೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಮಾತನಾಡಿ, ಅಧಿಕಾರಿಗಳು, ನೌಕರರು ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಾಗ ಅಂತಹ ಅಧಿಕಾರಿಗಳು, ನೌಕರರ ವಿರುದ್ಧ ಕ್ರಿಮಿನಲ್ ಪ್ರಕರಣ, ಲೋಕಾಯುಕ್ತ ವಿಚಾರಣೆ ಸೇರಿದಂತೆ ಅನೇಕ ಬಗೆಯ ತೊಂದರೆಗಳನ್ನು ಅನುಭವಿಸುತ್ತಾರೆ. ಪ್ರಕಕಣಗಳ ವಿಚಾರಣೆ ಮುಕ್ತಾಯವಾಗದೇ ಮುಂಬಡ್ತಿಯಿAದಲೂ ವಂಚಿತರಾಗುತ್ತಾರೆ. ಇದರಿಂದ ಅವರ ಕುಟುಂಬವು ಕೂಡ ಮುಜುಗರ ಹಾಗೂ ಅವಮಾನ ಎದುರಿಸಬೇಕಾಗಿ ಬರುತ್ತದೆ. ಹಾಗಾಗಿ ನೌಕರರು ಕಾನೂನುಬದ್ಧವಾಗಿ ಕೆಲಸ ಮಾಡಿ, ಯಾರಿಗೂ ಹೆದರಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್.ಆಕಾಶ್ ಮಾತನಾಡಿ, ಒಂದು ಬಾರಿ ಏನಾದರೂ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡರೆ ಮಾನಸಿಕ ತುಮುಲತೆ ಜತೆಗೆ ಇಡೀ ಜೀವನವೇ ನಾಶವಾಗುವ ಸಾಧ್ಯತೆ ಇದೆ. ಹಾಗಾಗಿ ಇದನ್ನು ಸರ್ಕಾರಿ ಅಧಿಕಾರಿಗಳು, ನೌಕರರು ಗಮನದಲ್ಲಿಟ್ಟುಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ ಮಾತನಾಡಿ, ಭ್ರಷ್ಟಾಚಾರ ಕೇವಲ ಲಂಚ ತೆಗೆದುಕೊಳ್ಳುವುದು ಮಾತ್ರವಲ್ಲ, ನಮ್ಮ ಕರ್ತವ್ಯವನ್ನು ಕಡೆಗಾಣಿಸುವುದು ಕೂಡ ಭ್ರಷ್ಟಾಚಾರವಾಗಿದೆ. ಸರ್ಕಾರಿ ಅಧಿಕಾರಿ, ನೌಕರರಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಪ್ರಾಮಾಣಿಕವಾಗಿ, ಬಹಳ ಯಶಸ್ವಿಯಾಗಿ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ಡಿವೈಎಸ್‌ಪಿ ಮೃತ್ಯುಂಜಯ ಅವರು ಭ್ರಷ್ಟಾಚಾರ ವಿರೋಧಿ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ, ವಿಶೇಷ ಉಪನ್ಯಾಸ ನೀಡಿದರು. ವಿಶೇಷ ಸಾರ್ವಜನಿಕ ಅಭಿಯೋಜಕ ಮಲ್ಲೇಶಪ್ಪ, ಚಿತ್ರದುರ್ಗ ಪೊಲೀಸ್ ಉಪಾಧೀಕ್ಷಕ ಪಿ.ಕೆ. ದಿನಕರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

===========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading