ಚಿತ್ರದುರ್ಗ,ಅ.30
ವಿಕಲಚೇತನರು ಹಾಗೂ ಮಾನಸಿಕ ತೊಂದರೆಗೊಳಗಾದವರ ಆರೈಕೆ ಸುಲಭವಾದುದಲ್ಲ, ಇದಕ್ಕಾಗಿ ಪೋಷಕರು ಹಾಗೂ ಆರೈಕೆದಾರರು ತಮ್ಮ ವೈಯಕ್ತಿಕ ಜೀವನದ ಹೆಚ್ಚಿನ ಸಮಯವನ್ನು ಮುಡಿಪಾಗಿಸಬೇಕಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಹೆಚ್.ವಿಜಯ್ ಕುಮಾರ್ ಹೇಳಿದರು.
ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಂಯುಕ್ತ ಪ್ರಾದೇಶಿಕ ಕೇಂದ್ರ, ದಾವಣಗೆರೆ (ಸಿ.ಆರ್.ಸಿ), ಎಪಿಡಿ ಸಂಸ್ಥೆ, ವಿಕಲಚೇತನರ ಆರೈಕೆದಾರರ ಸಂಘ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸಂಘ, ಸಂಸ್ಥೆ ಒಕ್ಕೂಟಗಳು, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಆರೈಕೆದಾರರ ದಿನಾಚರಣೆ ಹಾಗೂ ಆರೈಕೆದಾರರಿಗೆ ಕೌಶಲ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಅವರು ಮಾತನಾಡಿದರು.
ಸದೃಢ ಆರೈಕೆದಾರರು ಸದೃಢ ಸಮಾಜ ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ಆರೈಕೆದಾರರ ದಿನ ಆಚರಿಸಲಾಗುತ್ತಿದೆ ವಿಕಲಚೇತನ ಮಕ್ಕಳನ್ನು ಆರೈಕೆ ಮಾಡುತ್ತಿರುವವರಿಗೆ ಆರೈಕೆದಾರರ ಭತ್ಯೆ ಯೋಜನೆಯನ್ನು ಕಳೆದ ವರ್ಷದಿಂದ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಷೇಕ್ ಯಾಸೀನ್ ಷರೀಪ್ ಮಾತನಾಡಿ, ವಿಕಲಚೇತನರನ್ನು ನೋಡಿಕೊಳ್ಳುವಾಗ ತಾಳ್ಮೆ, ಸಹನೆ, ಭರವಸೆಯನ್ನು ಆರೈಕೆದಾರರು ಹೊಂದಿರಬೇಕಾಗುತ್ತದೆ. ಅತೀ ಚಿಕ್ಕ ವಯಸ್ಸಿನಲ್ಲಿಯೇ ತೊಂದರೆಯನ್ನು ಪೋಷಕರು ಗುರುತಿಸಿದಲ್ಲಿ ಮುಂದೆ ಆಗುವ ದೊಡ್ಡ ತೊಂದರೆಯನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿ, ಆರೈಕೆದಾರರಿಗೆ ಕೆಲವು ನಿರ್ವಹಣಾ ಕೌಶಲ್ಯಗಳನ್ನು ವಿವರಿಸಿದರು.
ಬೆಂಗಳೂರು ಎಪಿಡಿ ಸಂಸ್ಥೆ ಕ್ಲಿನಿಕಲ್ ಸೈಕಾಲಜಿಸ್ಟ್ ಸುಪ್ರಜಾ ಅವರು 21 ವಿಧಧ ವಿಕಲತೆಗಳ ಬಗ್ಗೆ ಮಾಹಿತಿ ನೀಡಿದರು.ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ರಾಜೀವ್, ಎಪಿಡಿ ಸಂಸ್ಥೆಯ ನಂದಿನಿ, ಆರೈಕೆದಾರರ ಸಂಘದ ಅಧ್ಯಕ್ಷೆ ಅನ್ನಪೂರ್ಣ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಸಿಬ್ಬಂದಿಗಳು, ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.