December 15, 2025
FB_IMG_1730369220020.jpg


ಹಿರಿಯೂರು:
ಕಾಲುವೆಹಳ್ಳಿಯಲ್ಲಿ ಕ್ಷೌರಿಕರೊಬ್ಬರು ಮಾದಿಗ ಸಮುದಾಯದವರಿಗೆ ಕ್ಷೌರ ಮಾಡಲು ನಿರಾಕರಿಸಿದ್ದು, ಮನುಷ್ಯರನ್ನು ಮನುಷ್ಯರಂತೆ ಕಾಣುವ ಬದಲು ಪಶುಗಳಿಗಿಂತ ಕೀಳಾಗಿ ನೋಡುವ ಪ್ರವೃತ್ತಿ ಇಂದಿಗೂ ಜೀವಂತವಾಗಿದೆ ಎಂಬುದಕ್ಕೆ ಕಾಲುವೆಹಳ್ಳಿ ಗ್ರಾಮದಲ್ಲಿ ನಡೆದಿರುವ ಘಟನೆ ಸಾಕ್ಷಿ ಎಂಬುದಾಗಿ ಹಿರಿಯೂರು ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಪಿ.ಶ್ರೀನಿವಾಸ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರದಂದು ಕಾಲುವೆಹಳ್ಳಿಯಲ್ಲಿ ಕ್ಷೌರಿಕರೊಬ್ಬರು ಮಾದಿಗ ಸಮುದಾಯದವರಿಗೆ ಕ್ಷೌರ ಮಾಡಲು ನಿರಾಕರಿಸಿರುವ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ತಾಲ್ಲೂಕು ತಹಶೀಲ್ದಾರ್ ರಾದ ರಾಜೇಶ್ ಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಈ ಘಟನೆ ಬಗ್ಗೆ ಪ್ರಶ್ನೆ ಮಾಡಿದ ಸಮುದಾಯದ ಯುವಕನಿಗೆ ಗ್ರಾಮದ ಕೆಲವರು ಪ್ರಾಣ ಬೆದರಿಕೆ ಹಾಕಿದ್ದಾರೆ. ಗ್ರಾಮ ಪಂಚಾಯಿತಿಯ ನೀರುಗಂಟಿಯೊಬ್ಬರು ಸೇರಿ ನಾಲ್ಕೈದು ಜನರು ಬೆದರಿಕೆ ಹಾಕುತ್ತಿರುವುದು ಮೊಬೈಲ್ ಆಡಿಯೋದಲ್ಲಿ ದಾಖಲಾಗಿದೆ ಎಂಬುದಾಗಿ ಅವರು ಆರೋಪಿಸಿದರು.
ಮಾದಿಗ ಸಮುದಾಯದವರು ಇಂದಿಗೂ ಹಳ್ಳಿಗಳಲ್ಲಿ ಪ್ರಬಲ ಜಾತಿಯವರಿಂದ ಅಂತರ ಕಾಪಾಡಿಕೊಂಡು ಜೀವಿಸುತ್ತಿದ್ದಾರೆ. ಜಾತಿ ನಿಂದನೆ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿದಲ್ಲಿ ಮಾತ್ರ ಇಂತಹ ಅನಿಷ್ಟಗಳ ಆಚರಣೆಯಲ್ಲಿ ತೊಡಗಿರುವವರಿಗೆ ಭಯ ಮೂಡುತ್ತದೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬೋರನಕುಂಟೆ ಜೀವೇಶ್, ಮಂಜುನಾಥ್ ಹೆಗ್ಗೆರೆ, ಕೆ.ಆರ್.ಹಳ್ಳಿರಘುನಾಥ್, ಕೂನಿಕೆರೆಮಾರುತೇಶ್, ಮಸ್ಕಲ್ ಮಟ್ಟಿ ಓಂಕಾರ್, ಖಂಡೇನಹಳ್ಳಿ ಶಿವು, ಬೋರನಕುಂಟೆಕರಿಯಪ್ಪ, ಘಾಟ್ ರವಿ, ರಾಘವೇಂದ್ರ, ಪಿಟ್ಲಾಲಿತಿಪ್ಪೇಸ್ವಾಮಿ, ಲಕ್ಷ್ಮಣರಾವ್, ಬೆಳ್ಳಿಯಪ್ಪ, ಸೋಮೇರಹಳ್ಳಿರಂಗಸ್ವಾಮಿ, ಸೂರಗೊಂಡನಹಳ್ಳಿಲಿಂಗರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading