.ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ: ಮುಸ್ಲಿಂ ಸಮುದಾಯದ ವಿಶಿಷ್ಟ ಹಬ್ಬ ರಂಜಾನ್ ಅನ್ನು ಪಟ್ಟಣದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಮುಂಜಾನೆಯೆ ಪಟ್ಟಣದ ಜಾಮಿಯಾ ಮಸೀದಿಯಿಂದ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಸಮುದಾಯದ ಧಾರ್ಮಿಕ ಮುಖಂಡರು ಸ್ನೇಹ, ಭ್ರಾತೃತ್ವ, ಸಹಬಾಳ್ವೆ ಕುರಿತು ಪ್ರವಚನ ನೀಡಿದರು. ನಂತರ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇಸ್ಲಾಂ ಕ್ಯಾಲೆಂಡರ್‌ನ 9ನೇ ತಿಂಗಳಿನಲ್ಲಿ ಉಪವಾಸದ ಹಬ್ಬವೆಂದೇ ಕರೆಸಿಕೊಳ್ಳುವ ಈ ಆಚರಣೆ ನಡೆಯುತ್ತದೆ. ಅಂತೆಯೆ ಈ ಮಾಸದಲ್ಲಿ 29 ದಿನ ಉಪವಾಸ ಆಚರಣೆ ಮಾಡಿದ ಪಟ್ಟಣದ ಮುಸ್ಲಿಂ ಸಮುದಾಯದವರು ಕಡೇ ದಿನ ‘ಈದ್ ಉಲ್ ಫಿತರ್’ ಆಚರಿಸಿದರು. ಎಲ್ಲೆಡೆ ಬಡವರು ಶ್ರೀಮಂತರೆನ್ನದೆ ಹಬ್ಬದಲ್ಲಿ ಭಾಗವಹಿಸಿ ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯ ಸಮಾನ್ಯವಾಗಿತ್ತು.
ಪ್ರಾರ್ಥನೆಗೆ ತೆರಳುವ ಮುನ್ನ ಸಮುದಾಯದ ಉಳ್ಳವರು ಬಡವರಿಗೆ ತಮ್ಮ ದುಡಿಮೆಯ ಇಂತಿಷ್ಟು ಅಂಶವನ್ನು ದಾನವಾಗಿ ನೀಡಿದರು. ಕೆಲವರು ಗೋಧಿ, ಅಕ್ಕಿ, ರಾಗಿ ನೀಡಿದರೆ ಇನ್ನು ಹೆಚ್ಚು ಸ್ಥಿತಿವಂತರು ಗೋಡಂಬಿ, ದ್ರಾಕ್ಷಿ, ಅಂಜೂರ ಸೇರಿದಂತೆ ಇನ್ನಿತರ ವಸ್ತುಗಳನ್ನು ಕೊಡುಗೆಯಾಗಿ ನೀಡುವುದು ಕಂಡುಬಂತು. ಪ್ರಾರ್ಥನೆಗೆ ತೆರಳುವಾಗ ಒಂದು ಹಾದಿಯಲ್ಲಿ ತೆರಳಿದರೆ ಬರುವಾಗ ತಮ್ಮ ಹಿರಿಯರ ಸಮಾಧಿಗಳಿಗೆ ನಮಸ್ಕರಿಸಿ ಮತ್ತೊಂದು ಹಾದಿಯಲ್ಲಿ ಮನೆಗೆ ತರಳಿದರು.
ಚಂದ್ರನನ್ನು ನೋಡಿ ಉಪವಾಸವನ್ನು ಆರಂಭಿಸಲಾಗುತ್ತದೆ. ಅದೇ ರೀತಿ 29 ದಿನ ಪೂರ್ಣಗೊಂಡ ನಂತರ ಚಂದ್ರನ ನೋಡಿ ಉಪವಾಸ ಅಂತ್ಯಗೊಳಿಸಲಾಗುತ್ತದೆ. ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಉಪಾಹಾರ ಸೇವಿಸಲಾಗುತ್ತದೆ. ನಂತರ ಸಂಜೆ ಸೂರ್ಯ ಮುಳುಗಿದ ನಂತರ ಆಹಾರ ಸೇವಿಸಲಾಗುತ್ತದೆ.
ಬೆಳಗ್ಗೆಯೆ ಪ್ರಾರ್ಥನೆಗೂ ಮುನ್ನ ‘ಶೀರ್ ಕುರ್ಮಾ’ ಸೇವಿಸುತ್ತಾರೆ. ಈ ತಿನಿಸು ಈ ಹಬ್ಬದ ಒಂದು ವಿಶಿಷ್ಟ ಖಾದ್ಯವಾಗಿದೆ.ಶಾವಿಗೆ, ಹಾಲು, ಕೋವಾ, ಕರ್ಜೂರ ಸೇರಿದಂತೆ ಇನ್ನಿತರ ಒಣಗಿಸಿದ ಹಣ್ಣುಗಳನ್ನು ಬೆರೆಸಿ ತಯಾರು ಮಾಡಲಾಗುತ್ತದೆ. ಉಪವಾಸ ಸಮಾಪ್ತಿ ದಿನದಂದು ಇದನ್ನು ಸೇವಿಸಲಾಗುತ್ತದೆ ಎಂದು ಮುಸ್ಲಿಂ ಧರ್ಮಗುರು ಮುಫ್ತಿ ಮೊಹಮ್ಮದ್ ಸೊಹೇಬ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಾಮಿಯ ಮಸೀದಿ ಅಧ್ಯಕ್ಷ ಸೈಯದ್ ಅನ್ವರ್, ಉಪಾಧ್ಯಕ್ಷ ಮಹಮ್ಮದ್ ರಫೀಕ್, ಕಾರ್ಯದರ್ಶಿ ಸಿದ್ದಿಕ್ ಸಾಹೇಬ್ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.