ಚಿತ್ರದುರ್ಗ ಜ. 31:
ಪ್ರತಿನಿತ್ಯ ಸರ್ಕಾರಿ ಕಚೇರಿಗಳಲ್ಲಿ ಒತ್ತಡದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ರಾಜ್ಯ ಸರ್ಕಾರಿ ನೌಕರರು, ಒತ್ತಡವನ್ನು ಮರೆತು, ನೌಕರರ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಂಕ್ರಾಂತಿ ಸಂಭ್ರಮ ಸುಗ್ಗಿಯ ಸಿರಿ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರು, ಚಲನಚಿತ್ರ ನಟರು ಪ್ರಸ್ತುತಪಡಿಸಿದ ಸಂಗೀತ ರಸದೌತಣದ ಸವಿಯನ್ನು ಆಸ್ವಾದಿಸಿ ಸಂಭ್ರಮಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಕಳೆದ ಜ. 29 ಮತ್ತು 30 ರಂದು ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಮಟ್ಟದ ಕಾರ್ಯಕ್ರಮಗಳಲ್ಲಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳ ಜೊತೆಗೆ, ಸಂಜೆ ಹೊತ್ತು, ನೌಕರರ ಇಡೀ ಕುಟುಂಬವೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಂಭ್ರಮಿಸುವಂತಾಗಲು, ನೌಕರರ ಸಂಘದ ಜಿಲ್ಲಾ ಘಟಕವು ಈ ಬಾರಿ ಸಂಕ್ರಾಂತಿ ಸಂಭ್ರಮ ಎನ್ನುವ ಮನೋರಂಜನಾ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಿತು. ಚಲನಚಿತ್ರ ನಟ ನೆನಪಿರಲಿ ‘ಪ್ರೇಮ್”, ಸರಿಗಮಪ ರಿಯಾಲಿಟಿ ಶೋ ಮೂಲಕ ಜನಪ್ರತಿಯತೆ ಗಳಿಸಿದ ಗಾಯಕ ಕಂಬದ ರಂಗಯ್ಯ, ಸುಪ್ರಿತಾ ಭಟ್ ಹಾಗೂ ಜನಪದ ಗಾಯಕ ಕಡಬಗೆರೆ ಮುನಿರಾಜು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಟ ಪ್ರೇಮ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಂಜೆಯ ಸಂಕ್ರಾಂತಿ ಸಂಭ್ರಮಕ್ಕೆ ಕಳೆಗಟ್ಟಿದಂತಿತ್ತು. ಗಾಯಕ ಕಂಬದ ರಂಗಯ್ಯ, ಸುಪ್ರಿತಾ ಭಟ್ ಅವರು ಜನಪ್ರಿಯ ಚಲನಚಿತ್ರಗೀತೆಗಳನ್ನು ಹಾಡುತ್ತಿದ್ದರೆ, ಪ್ರೇಕ್ಷಕರು ಚಪ್ಪಾಳೆಗಳ ಸುರಿಮಳೆಗೈದು, ಕಲಾವಿದರನ್ನು ಇನ್ನಷ್ಟು ಉತ್ತೇಜಿಸಿದರು. ಕಡಬಗೆರೆ ಮುನಿರಾಜು ಅವರು ಪ್ರಸ್ತುತಪಡಿಸಿದ ಜನಪದ ಗೀತ ಗಾಯನಕ್ಕೆ ಕೇಳುಗರು ತಲೆದೂಗಿದರು. ಪ್ರತಿನಿತ್ಯ ಒತ್ತಡದಲ್ಲಿಯೇ ಕಚೇರಿ ಕೆಲಸಗಳನ್ನು ನಿರ್ವಹಿಸುತ್ತಿದ್ದ ಸರ್ಕಾರಿ ನೌಕರರಿಗೆ ಸಂಕ್ರಾಂತಿ ಸಂಭ್ರಮ ನಿಜಕ್ಕೂ, ಉಲ್ಲಾಸದ ಅಲೆಯಲ್ಲಿ ತೇಲುವಂತೆ ಮಾಡಿತು. ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಯ ಅಂಗವಾಗಿ ಕೇವಲ ಸರ್ಕಾರಿ ನೌಕರರಷ್ಟೇ ಪಾಲ್ಗೊಂಡು, ಹಗಲು ಹೊತ್ತಿನಲ್ಲಿ ಆಟೋಟಗಳನ್ನು ಆಡಿ, ತೆರಳುತ್ತಿದ್ದರು, ಆದರೆ ಕ್ರೀಡಾಕೂಟದ ಅಂಗವಾಗಿ ಈ ರೀತಿಯೂ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿ, ಸರ್ಕಾರಿ ನೌಕರರ ಜೊತೆಗೆ ಅವರ ಕುಟುಂಬದ ವರ್ಗದವರೂ ಪಾಲ್ಗೊಳ್ಳುವ ಮೂಲಕ ನೌಕರರು ಹಾಗೂ ಅವರ ಕುಟುಂಬದ ಮನಸ್ಸಿಗೆ ಉಲ್ಲಾಸ, ಉತ್ಸಾಹ ನೀಡಬಹುದು ಎನ್ನುವುದನ್ನು ನೌಕರರ ಸಂಘದ ಜಿಲ್ಲಾ ಘಟಕ ಸಾಬೀತುಪಡಿಸಿ, ಇತರೆ ಜಿಲ್ಲೆಗಳಿಗೆ ಮಾದರಿಯಾಯಿತು.
ಈ ಬಾರಿಯ ಕ್ರೀಡಾಕೂಟದಲ್ಲಿ 2,500 ಕ್ಕಿಂತ ಹೆಚ್ಚು ಸರ್ಕಾರಿ ನೌಕರರು ಭಾಗವಹಿಸಿದ್ದು ವಿಶೇಷವಾಗಿತ್ತು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಉತ್ತಮ ಗುಣಮಟ್ಟದ ಟೀ ಶರ್ಟ್ ಕ್ಯಾಪ್ ವಿತರಿಸಲಾಯಿತು. ಅಲ್ಲದೆ ನೌಕರರಿಗೆ ಉತ್ತಮ ರೀತಿಯಲ್ಲಿ ಸಂಕ್ರಾಂತಿ ಹಬ್ಬದ ವಿಶೇಷ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಯಿತು. ಸಂಜೆ ನಡೆದ ಸಂಕ್ರಾಂತಿ ಸಂಭ್ರಮದ ಕಾರ್ಯಕ್ರಮದಲ್ಲಿ ನೌಕರರ ಕುಟುಂಬ ವರ್ಗವೂ ಸೇರಿದಂತೆ ಸುಮಾರು 5,000ಕ್ಕೂ ಹೆಚ್ಚು ಜನ ಪಾಲ್ಗೊಂಡು ಸಂಗೀತ ರಸಮಂಜರಿಯನ್ನು ಸಂಭ್ರಮಿಸಿದರು. ಈ ಬಾರಿಯ ಸರ್ಕಾರಿ ನೌಕರರ ವಾರ್ಷಿಕ ಕ್ರೀಡಾಕೂಟ ಹಾಗೂ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದನ್ನು ಸರ್ಕಾರಿ ನೌಕರರು ಮುಕ್ತ ಕಂಠದಿಂದ ಶ್ಲಾಘಿಸಿದರು.
ಜ. 29 ಮತ್ತು 30 ರಂದು ನಡೆದ ವಾರ್ಷಿಕ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದ ಸರ್ಕಾರಿ ನೌಕರರಿಗೆ ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ ಸೇರಿದಂತೆ ವಿವಿಧ ಗಣ್ಯರು ಈ ಸಂಭ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು.
ಎಲ್ಲ ಕಾರ್ಯಕ್ರಮಗಳ ನೇತೃತ್ವವನ್ನು ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ ವಹಿಸಿ, ಎಲ್ಲ ವ್ಯವಸ್ಥೆ ಅಚ್ಚುಕಟ್ಟಾಗಿ ಇರುವಂತೆ ಸಂಘದ ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯದರ್ಶಿಗಳು, ಎಲ್ಲ ಪದಾಧಿಕಾರಿಗಳ ಜೊತೆ ಜೊತೆ ಕೈಜೊಡಿಸಿದರು. ಗೌರವಾಧ್ಯಕ್ಷ ನಾರಾಯಣಸ್ವಾಮಿ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಮಲ್ಲಿಕಾರ್ಜುನ್ ರಾಜ್ಯ ಪರಿಷತ್ ಸದಸ್ಯ ರಾಜಪ್ಪ ಎಸ್. ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಸಿ.ಟಿ. ವೀರೇಶ್, ಹಿರಿಯೂರು ತಾಲ್ಲೂಕು ಅಧ್ಯಕ್ಷ ರಮೇಶ್ ಆರ್ ಸೇರಿದಂತೆ ಜಿಲ್ಲಾ ಸಂಘದ ಕಾರ್ಯಾಧ್ಯಕ್ಷರು, ಹಿರಿಯ ಉಪಾಧ್ಯಕ್ಷರು, ಉಪಾಧ್ಯಕ್ಷರು, ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.