March 17, 2026
FB_IMG_1769868833323.jpg

ಚಿತ್ರದುರ್ಗಜ.31:
ರೈತರು ಕೃಷಿಯಲ್ಲಿ ಸುಸ್ಥಿರ ಇಳುವರಿ ಪಡೆಯಲು ಮತ್ತು ಸಾಗುವಳಿ ವೆಚ್ಚವನ್ನು ಕಡಿಮೆ ಮಾಡಲು ಸಮಗ್ರ ಪೀಡೆ ನಿರ್ವಹಣಾ ಪದ್ಧತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಚಿತ್ರದುರ್ಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಬಿ. ಮಂಜುನಾಥ ಅವರು ಕರೆ ನೀಡಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಬೆಂಗಳೂರಿನ ಪ್ರಾದೇಶಿಕ ಕೇಂದ್ರೀಯ ಸಮಗ್ರ ಕೀಟ ನಿರ್ವಹಣಾ ಕೇಂದ್ರದ ವತಿಯಿಂದ ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂನಲ್ಲಿ ಕೃಷಿ ಪರಿಕರ ಮಾರಾಟಗಾರರಿಗಾಗಿ ಆಯೋಜಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಅವಶ್ಯಕತೆಗೆ ಅನುಗುಣವಾಗಿ ಮಾತ್ರ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸಬೇಕು. ಆಗ ಮಾತ್ರ ಕೃಷಿ ಲಾಭದಾಯಕವಾಗಲು ಸಾಧ್ಯ ಎಂದು ತಿಳಿಸಿದ ಅವರು, ಶೇಂಗಾ ಬೆಳೆಯ ಸಮಗ್ರ ಪೀಡೆ ನಿರ್ವಹಣೆಯ ಮಾಹಿತಿ ಕರಪತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಉಪ ಕೃಷಿ ನಿರ್ದೇಶಕ ಉಮೇಶ್ ಡಿ. ಮಾತನಾಡಿ, ಅಂಗಡಿಗೆ ಬರುವ ರೈತರಿಗೆ ಕೃಷಿ ಪರಿಕರ ಮಾರಾಟಗಾರರು ಕೇವಲ ಕೀಟನಾಶಕಗಳನ್ನು ಮಾರುವುದಕ್ಕೆ ಸೀಮಿತವಾಗಬಾರದು. ರೋಗ ಮತ್ತು ಕೀಟಗಳ ನಿರ್ವಹಣೆಗೆ ರಾಸಾಯನಿಕ ಕೀಟನಾಶಕಗಳನ್ನು ಕೊನೆಯ ಅಸ್ತ್ರವಾಗಿ ಶಿಫಾರಸ್ಸು ಮಾಡಬೇಕು.ರೈತರಿಗೆ ಮಾಗಿ ಉಳುಮೆ, ಸರಿಯಾದ ತಳಿ ಆಯ್ಕೆ, ಬೀಜೋಪಚಾರ, ಜೈವಿಕ ಗೊಬ್ಬರ ಹಾಗೂ ಮಿಶ್ರ ಮತ್ತು ಅಂತರ ಬೆಳೆಗಳ ಅಳವಡಿಕೆಯ ಬಗ್ಗೆ ಮನವರಿಕೆ ಮಾಡಿಕೊಡುವಂತೆ ಅವರು ಮಾರಾಟಗಾರರಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ಕೃಷಿ ನಿರ್ದೇಶಕ ಶಿವಕುಮಾರ್ ಕೆ.ಎಸ್., ದೇಶದ ಆಹಾರ ಭದ್ರತೆ ಮತ್ತು ರೈತರ ಆದಾಯ ವೃದ್ಧಿಗೆ ಸಮಗ್ರ ಕೃಷಿ ಪದ್ಧತಿಯೇ ಸೂಕ್ತ ಮಾರ್ಗ ಎಂದರು.
ಬೆಂಗಳೂರು ಕೇಂದ್ರದ ಸಸ್ಯ ಸಂರಕ್ಷಣಾಧಿಕಾರಿ ಡಾ. ಜಯಸಿಂಹ ಅವರು, ವಿವೇಚನೆಯಿಲ್ಲದೆ ರಾಸಾಯನಿಕ ಬಳಸುವುದರಿಂದ ಆಹಾರ ಪದಾರ್ಥಗಳ ರಫ್ತಿನ ಮೇಲೆ ಉಂಟಾಗುತ್ತಿರುವ ಕಠಿಣ ಪರಿಣಾಮಗಳ ಬಗ್ಗೆ ಎಚ್ಚರಿಸಿದರು. ನಂತರ ರೈತರು ಕೀಟನಾಶಕಗಳನ್ನು ಬಳಸುವಾಗ, ಬಳಸುವ ಮುನ್ನ ಮತ್ತು ಬಳಕೆಯ ನಂತರ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಸಹಾಯ ಸಸ್ಯ ಸಂರಕ್ಷಣಾಧಿಕಾರಿಗಳಾದ ವಿ.ಭವ್ಯ ರಾಷ್ಟ್ರೀಯ ಕೀಟ ಸರ್ವೇಕ್ಷಣಾ ವ್ಯವಸ್ಥೆ ಮೊಬೈಲ್ ಅಪ್ಲಿಕೇಶನ್ ಬಳಕೆ ಕುರಿತು ಹಾಗೂ ನವೀನ್ ಜೈವಿಕ ಕೀಟನಾಶಕಗಳು ಹಾಗೂ ಪರಭಕ್ಷಕ ಜೀವಿಗಳ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.
ತರಬೇತಿಯಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ ಆರ್ ಸೇರಿದಂತೆ ಜಿಲ್ಲೆಯ ನೂರಾರು ಕೃಷಿ ಪರಿಕರ ಮಾರಾಟಗಾರರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading