December 14, 2025
FB_IMG_1730296370937.jpg


ಚಿತ್ರದುರ್ಗ.ಅ.29:
ಕುಷ್ಠರೋಗ ಪ್ರಕರಣ ಪತ್ತೆ ಅಭಿಯಾನ ಜಾಗೃತಿ ಜಾಥಾಕ್ಕೆ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬುಧವಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಎ.ರವೀಂದ್ರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಜಿ.ಓ.ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 42 ಕುಷ್ಠರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮುದಾಯದಲ್ಲಿರುವ ಕುಷ್ಠ ರೋಗಿಗಳನ್ನು ಪತ್ತೆ ಹಚ್ಚುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ನವಂಬರ್ 04 ರಿಂದ 21 ರವರೆಗೆ 14 ದಿನಗಳ ಕಾಲ ಕುಷ್ಟರೋಗ ಪತ್ತೆ ಹಚ್ಚುವ ಅಭಿಯಾನ (ಎಲ್.ಸಿ.ಡಿ.ಸಿ) ಕಾರ್ಯಕ್ರಮವ ನಡೆಸಲಾಗುವುದು. ಸಮೀಕ್ಷೆ ಸಂಬಂಧ 1291 ತಂಡಗಳು, ಹಾಗೂ 129 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಆಶಾ ಕಾರ್ಯಕರ್ತರು ಹಾಗೂ ಪುರುಷ ಸ್ವಯಂಸೇವಕರು ಮನೆಮನೆ ಭೇಟಿ ನೀಡಿ ಕುಷ್ಟರೋಗ ಸಮೀಕ್ಷೆ ಮಾಡುವರು ಎಂದು ಮಾಹಿತಿ ನೀಡಿದರು.
ಕುಷ್ಟರೋಗವು ಶಾಪ ಪಾಪದಿಂದ ಬರುವ ಕಾಯಿಲೆಯಲ್ಲ, ಇದೊಂದು ಪುರಾತನ ಕಾಯಿಲೆ ಈ ಕಾಯಿಲೆಗೆ ಚಿಕಿತ್ಸೆ ಇದ್ದು, ರೋಗಿಗಳು ಹೆದರುವ ಅಗತ್ಯವಿಲ್ಲ. ಇದು ಮೈಕೋ ಬ್ಯಾಕ್ಟೀರಿಯಂ ಲೆಪ್ರೇ ಎಂಬ ರೋಗಾಣುವಿನಿಂದ ಬರುತ್ತದೆ. ರೋಗಿಯು ಕೆಮ್ಮುವುದರಿಂದ, ಸೀನುವುದರಿಂದ ತುಂತುರ ಹನಿಗಳ ಮುಖಾಂತರ ಆರೋಗ್ಯವಂತ ವ್ಯಕ್ತಿಯ ದೇಹ ಸೇರಿದರೆ ಈ ರೋಗವು ಹರಡುತ್ತದೆ.
ಕುಷ್ಠ ರೋಗಕ್ಕೆ ಎಂಡಿಟಿ ಚಿಕಿತ್ಸೆ ಇದ್ದು, ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆದ್ದರಿಂದ ಸಾರ್ವಜನಿಕರು ತಮ್ಮ ಮನೆಗಳಿಗೆ ಬರುವ ತಂಡಗಳಿಂದ ಪರೀಕ್ಷೆ ಮಾಡಿಸುವ ಮೂಲಕ ಸಮೀಕ್ಷೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ನಗರದ ಪ್ರಮುಖ ಬೀದಿಗಳಲ್ಲಿ ಕೈ ಕೈಜೋಡಿಸಿ ಕುಷ್ಠರೋಗ ನಿವಾರಿಸಿ ಎಂಬ ಘೋಷಣೆ ಕೂಗುತ್ತಾ ಮದಕರಿ ಸರ್ಕಲ್‍ನಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಯಿತು. ನಂತರ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಾಥಾ ಕಾರ್ಯಕ್ರಮ ಸಮಾಪ್ತಿಗೊಂಡಿತು.
ಕಾರ್ಯಕ್ರಮದಲ್ಲಿ ಡಿಎಂಓ ಡಾ. ಎನ್.ಕಾಶಿ, ಆರ್‍ಸಿಹೆಚ್‍ಒ ಡಾ.ಡಿ.ಎಂ.ಅಭಿನವ್, ತಾಲೂಕು ಆರೋಗ್ಯಾಧಿಕಾರಿ ಅಧಿಕಾರಿ ಡಾ. ಬಿ.ವಿ.ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯ್ಕ, ಉಪ ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಗೌರಮ್ಮ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್, ಎಸ್. ಮಂಜುನಾಥ್, ಮೂಗಪ್ಪ, ಡಿ ಎಲ್ ಓ ಕಚೇರಿ ಸಿಬ್ಬಂದಿಗಳಾದ ವೈ.ಟಿ.ತಿಪ್ಪೇಸ್ವಾಮಿ, ಚಂದ್ರಪ್ಪ, ಮಂಜುನಾಥ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗಂಗಾಧರೆಡ್ಡಿ, ರುದ್ರಮುನಿ, ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು .

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading