January 29, 2026
n6066220041715154944593963a61bac2d489128788c659483b224e9a885d95e970c2e0915139aa1c068444.jpg


ಚಿತ್ರದುರ್ಗ ಅ.29:
ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಕರಡು ಮತದಾರರ ಪಟ್ಟಿಯನ್ನು ಮಂಗಳವಾರದಂದು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರಕಟಿಸಿದರು.
ಕರಡು ಮತದಾರರ ಪಟ್ಟಿ ಪ್ರಕಟ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಚುನಾವಣಾ ಆಯೋಗದ ನಿರ್ದೇಶನದಂತೆ ಮಂಗಳವಾರದಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಇದೀಗ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಕಾರ್ಯವೂ ಕೂಡ ಪ್ರಾರಂಭವಾಗಿದ್ದು, ಸಾರ್ವಜನಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಇದೇ ಅ.29 ರಿಂದ ನವೆಂಬರ್ 28 ರವರೆಗೆ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಮತದಾರರ ನೊಂದಣಿಗೆ ಸಂಬಂಧಿಸಿದಂತೆ 2024ರ ನವೆಂಬರ್ 9ರಂದು ಶನಿವಾರ, ನ.10ರಂದು ಭಾನುವಾರ, ನವೆಂಬರ್ 23ರಂದು ಶನಿವಾರ ಮತ್ತು ನ.24 ರಂದು ಭಾನುವಾರ ಜಿಲ್ಲೆಯಲ್ಲಿ ವಿಶೇಷ ನೋಂದಣಿ ಕಾರ್ಯಾಚರಣೆ ಹಮ್ಮಿಕೊಂಡು, ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು. 2024ರ ಡಿಸೆಂಬರ್ 24 ರಂದು ಹಕ್ಕು ಮತ್ತು ಆಕ್ಷೇಪಣೆಗಳನ್ನು ತಿರ್ಮಾನಿಸಲಾಗುವುದು. 2025ರ ಜನವರಿ 06ರಂದು ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆ ಮಾಡಲಾಗುವುದು ಎಂದು ತಿಳಿಸಿದರು.
ಸದ್ಯ ಜಿಲ್ಲೆಯಲ್ಲಿ ಒಟ್ಟು 1661 ಮತಗಟ್ಟೆಗಳಿದ್ದು, ಒಟ್ಟು 14,35,994 ಮತದಾರರಿದ್ದಾರೆ. ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳಿಸಲು ಅರ್ಹರಿರುವ ಎಲ್ಲರನ್ನೂ ಸೇರಿಸಲು, ವಿವಿಧ ರಾಜಕೀಯ ಪಕ್ಷಗಳು ಕೂಡ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಕುರಿತು ವ್ಯಾಪಕ ಪ್ರಚಾರ ನೀಡಬೇಕು. ರಾಜಕೀಯ ಪಕ್ಷದವರು ಪ್ರತಿಯೊಂದು ಮತಗಟ್ಟೆಗೂ ಮತಗಟ್ಟೆ ಮಟ್ಟದ ಏಜೆಂಟರನ್ನು ನೇಮಕ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ಭಾರತ ಚುನಾವಣಾ ಆಯೋಗವು ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 14ಕ್ಕೆ ತಿದ್ದುಪಡಿ ಮಾಡಿ ಮತದಾರರ ನೊಂದಣಿ ನಿಯಮಗಳು 1960ಕ್ಕೆ ಅನುಗುಣವಾಗಿ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರ್ಪಡೆ ಮಾಡಲು ನಾಲ್ಕು ಅರ್ಹತಾ ದಿನಾಂಕಗಳನ್ನು ನೀಡಿ ಅವಕಾಶ ಕಲ್ಪಿಸಿದ್ದು, ಅದರಂತೆ 1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ, 1ನೇ ಅಕ್ಟೋಬರ್ ಆಗಿರುತ್ತದೆ. 2025ರ ಜನವರಿ 01, ಏಪ್ರಿಲ್ 01, ಜುಲೈ 01, ಅ.01ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಹಾಗೂ ಅರ್ಹ ಮತದಾರರು ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಮಾಹಿತಿಯನ್ನು ತಿದ್ದುಪಡಿ ಮಾಡಿಸಬೇಕಾದಲ್ಲಿ ಮತ್ತು ಅದೇ ವಿಧಾನಸಭಾ ಕ್ಷೇತ್ರದ ಬೇರೆ ಮತಗಟ್ಟೆಗೆ ವರ್ಗಾಯಿಸಬೇಕಾಗಿದ್ದಲ್ಲಿ ನಿಗಧಿಪಡಿಸಿರುವ ನಮೂನೆಗಳಲ್ಲಿ 2024ರ ಅ.29 ರಿಂದ ನ.28 ರೊಳಗೆ ಅರ್ಜಿಗಳನ್ನು ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ಮತದಾನ ಕೇಂದ್ರದಲ್ಲಿ, ತಾಲ್ಲೂಕು ಕಚೇರಿಯಲ್ಲಿ, ಉಪವಿಭಾಗಾಧಿಕಾರಿಗಳ ಕಾರ್ಯಾಲದಯಲ್ಲಿ ನೀಡಿ ಸ್ವೀಕೃತಿ ಪಡೆಯಬಹುದಾಗಿದೆ ಎಂದರು.
ಕರಡು ಮತದಾರರ ಪಟ್ಟಿಯನ್ನು ಮತಗಟ್ಟೆ ಕೇಂದ್ರ, ಗ್ರಾಮ ಪಂಚಾಯಿತಿ ಕಚೇರಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ, ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ www.ceokarnataka.kar.nic.in ಮತ್ತು https://chitradurga.nic.in ವೆಬ್‍ಸೈಟ್‍ನಲ್ಲಿಯೂ ಸಹ ಪರಿಶೀಲಿಸಿಕೊಂಡು ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಹಾಗೂ ಅರ್ಜಿಗಳನ್ನು VHA (Voter help Line) ನಲ್ಲಿಯೂ ಆನ್‍ಲೈನ್ ಮೂಲಕ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಮುಖ್ಯವಾಗಿ ಪ್ರತಿಯೊಬ್ಬ ಯುವಕರು ಮತದಾರರ ಪಟ್ಟಿಯಲ್ಲಿ ತಪ್ಪದೇ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಕೋರಿದೆ. ಈ ಸಂಬಂಧ ಪ್ರಾಂಶುಪಾಲರು ತಮ್ಮ ಕಾಲೇಜಿನಿಂದ ಒಬ್ಬ ಉಪಾಧ್ಯಾಯರು ಮತ್ತು ಒಬ್ಬ ವಿದ್ಯಾರ್ಥಿಯನ್ನು ನೇಮಕ ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬಹುದಾಗಿದೆ. ತಾಲ್ಲೂಕು ಕಚೇರಿಯ ಸಮನ್ವಯದೊಂದಿಗೆ ಅರ್ಹ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಬಗ್ಗೆ ಹಾಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಜಾಗೃತಿ ಮೂಡಿಸಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರನ್ನು ನೊಂದಾಯಿಸಲು ಪ್ರತಿಯೊಬ್ಬ ನಾಗರೀಕರ ಹಕ್ಕಾಗಿರುತ್ತದೆ. ಈ ಸದಾವಕಾಶವನ್ನು ಪ್ರತಿಯೊಬ್ಬರು ತಪ್ಪದೆ ಉಪಯೋಗಿಸಿಕೊಳ್ಳಬೇಕು. ಮತದಾರರ ಪಟ್ಟಿಯ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಜಿಲ್ಲಾ ಸಂಪರ್ಕ ಕೇಂದ್ರದ ಸಹಾಯವಾಣಿ ಸಂಖ್ಯೆ-ಟೋಲ್ ಫ್ರೀ ಸಂಖ್ಯೆ 1950ಕ್ಕೆ ಕರೆ ಮಾಡಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸಿಪಿಐ (ಎಂ) ಡಿಒಸಿ ಸಿ.ಕೆ.ಗೌಸ್‍ಪೀರ್, ಜಿಲ್ಲಾ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ಟಿ.ಯಶವಂತ ಕುಮಾರ್ ಸೇರಿದಂತೆ ಚುನಾವಣೆ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading