January 29, 2026
FB_IMG_1730253227908.jpg


ಚಿತ್ರದುರ್ಗ ಅ.29:
ಜಗತ್ತಿನ ವೈದ್ಯ ಪದ್ದತಿಗೆ ಆಯುರ್ವೇದವನ್ನು ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ. ಪ್ರತಿಯೊಂದು ಮನೆಯಲ್ಲೂ ಔಷಧೀಯ ಸಸ್ಯ ಹಾಗೂ ಗಿಡ ಮೂಲಿಕೆಗಳನ್ನು ಬೆಳೆಸುವುದರ ಜೊತೆಗೆ, ಆಯುರ್ವೇದ ಪದ್ದತಿಗಳನ್ನು ರೂಢಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ನಗರ ಸಭೆ ಸಹಯೋಗದಲ್ಲಿ, ಮಂಗಳವಾರ ನಗರ ಸಭೆಯ ಸಭಾಂಗಣದಲ್ಲಿ, ಧನ್ವಂತರಿ ಜಯಂತಿ ಅಂಗವಾಗಿ ಆಯೋಜಿಸಲಾದ 9ನೇ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ತನ್ನದೇ ಆದ ಭವ್ಯ ಇತಿಹಾಸ, ಪರಂಪರೆ ಹೊಂದಿದ ದೇಶ. ಎಲ್ಲಾ ಕ್ಷೇತ್ರಗಳಲ್ಲಿ ಅದರಲ್ಲೂ ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಚರಕ, ಧನ್ವಂತರಿ ಶುಶ್ರೂಷೆಯ ಪರಂಪರೆಯನ್ನು ಜಗತ್ತಿಗೆ ಸಾರಿದೆ. ಈ ಹಿಂದೆ ಆಧುನೀಕರಣ, ನಗರೀಕರಣ ಇನ್ನಿತರೆ ಆವಿಷ್ಕಾರಗಳು ಇಲ್ಲದೇ ಹಿರಿಯರ ಸ್ಪರ್ಶ, ವಾತ್ಸಲ್ಯ ಮನೋಭಾವ, ಪ್ರಾಥಮಿಕ ಚಿಕಿತ್ಸೆಗಳಿದಿಂದ ಅದೆಷ್ಟೋ ಕಾಯಿಲೆಗಳನ್ನು ಗುಣಪಡಿಸುತ್ತಿದ್ದರು. ನಮ್ಮ ಆಹಾರ ಪದ್ದತಿ, ಸಂಸ್ಕಾರ, ಸಂಸ್ಕೃತಿ, ಹವ್ಯಾಸ, ಅಭ್ಯಾಸಗಳೆಲ್ಲವೂ ಆರೋಗ್ಯಕ್ಕೆ ಪೂರಕವಾಗಿದ್ದವು. ಆದರೆ ಇಂದು ಅವೆಲ್ಲವೂ ಬದಲಾಗಿ ಆರೋಗ್ಯಕ್ಕೆ ಸಂಚಕಾರ ತರುತ್ತಿವೆ. ಆದ್ದರಿಂದ ಉತ್ತಮವಾದ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯವಾಗಿರಬಹುದು. ಆಯುಷ್ ಲೋಕದ ದೈವ ಧನ್ವಂತರಿಯವರು ಹಾಕಿ ಕೊಟ್ಟಂತಹ ಆಯುರ್ವೇದ ವಿಧಾನ, ಗುಣಗಳ ಜೊತೆಗೆ ಯೋಗವನ್ನು ಪಾಲನೆ ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬಹುದು. ಪ್ರತಿಯೊಬ್ಬರು ತಮ್ಮ ಮನೆಯ ಸುತ್ತ ಮುತ್ತ ಔಷಧೀಯ ಗುಣವುಳ್ಳ ಸಸ್ಯಗಳನ್ನು ಬೆಳೆಸಿ, ಸೇವಿಸುವುದರ ಮೂಲಕ ಉತ್ತಮವಾದ ಆರೋಗ್ಯವನ್ನು ಕಾಪಡಿಕೊಳ್ಳಬೇಕು. ಇಂದು ಆಯುರ್ವೇದದ ಕಡೆ ಇಡೀ ಜಗತ್ತೇ ತಿರುಗಿ ನೋಡುತ್ತಿದೆ. ಆಯುರ್ವೇದ ಜೊತಗೆ ಯೋಗ ಹವ್ಯಾಸಗಳನ್ನು ನಾವು ಮತ್ತು ನಮ್ಮ ಮಕ್ಕಳು ರೂಡಿಸಿಕೊಳ್ಳುವ ಮೂಲಕ ನಿರಂತರವಾಗಿ ಮುಂದಿನ ಪೀಳಿಗೆಗೆ ಕೊಂಡುಯ್ಯುವ ಕೆಲಸ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಅಮೃತ ಆಯುರ್ವೇದಿಕ್ ಕಾಲೇಜ್ ಪ್ರಾಂಶುಪಾಲ ಡಾ.ಪ್ರಶಾಂತ್ ಮಾತನಾಡಿ, ದೇಶದ ಪರಂಪರೆ ಸಂಸ್ಕೃತಿ, ಸಂಸ್ಕಾರ, ಆಹಾರ, ಹಳ್ಳಿಯ ಸೊಗಡು ಹಾಗೂ ನಮ್ಮ ತನವನ್ನು ನಾವು ಮರೆತು ಪಾಶ್ಚಿಮಾತ್ಯ ದೇಶಗಳೆಡೆಗೆ ಮಾರು ಹೋಗುತ್ತಿದ್ದೇವೆ. ಪ್ರಸ್ತುತ ಆಯುರ್ವೇದ ಪಾಲನೆಯಾಗುತ್ತಿದೆ ಎಂದರೆ ಅದೂ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ. ಫಾಸ್ಟ್ ಫುಡ್‌ನಂತಹ ತಿನಿಸುಗಳನ್ನು ಸೇವಿಸುವ ಮೂಲಕ ಅನೇಕ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆಯುರ್ವೇದವನ್ನು ಬಳಸುವ ಮೂಲಕ ಆಯುರ್ವೇದ ಉಳಿಸೋಣ ಎಂದರು.
ನಗರದ ರಸ್ತೆಗೆ ಧನ್ವಂತರಿ ಹೆಸರು ನಾಮಕರಣ : ನಗರ ಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಜೋಗಿಮಟ್ಟಿ ರಸ್ತೆಯ ಟೀಚರ್ಸ್ ಕಾಲೋನಿಯ ದ್ವೀಪಥ ರಸ್ತೆಗೆ ದೇವವೈದ್ಯ ಧನ್ವಂತರಿಯ ಹೆಸರು ಇಡುವುದಾಗಿ ನಗರ ಸಭೆ ಅಧ್ಯಕ್ಷೆ ಬಿ.ಎನ್.ಸುಮಿತ ರಾಘವೇಂದ್ರ ಕಾರ್ಯಕ್ರಮದಲ್ಲಿ ಹೇಳಿದರು.
ಉಚಿತ ಆರೋಗ್ಯ ತಪಾಸಣೆ ಶಿಬಿರ : ಆಯುರ್ವೇದ ದಿನಾಚರಣೆ ಅಂಗವಾಗಿ ನಗರ ಸಭೆಯ ಪೌರ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಆಯುರ್ವೇದ ಇಲಾಖೆಯ ಕರಪತ್ರಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಕ್ಷ ತಾಜ್‌ಪೀರ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ನಗರ ಸಭೆ ಆಯುಕ್ತೆ ಎಂ.ರೇಣುಕಾ, ನಗರ ಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ನಸರುಲ್ಲಾ ಸೇರಿದಂತೆ ಆಯುಷ್ಯ ವೈದ್ಯಾಧಿಕಾರಿಗಳು, ನಗರ ಸಭೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading