
ಚಿತ್ರದುರ್ಗ ಮೇ 30:
ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕಾಗಿ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಶಿಕ್ಷಕರು ಮಕ್ಕಳು ಮತ್ತು ಪೋಷಕರು ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಹಿರಿಯೂರು ತಾಲ್ಲೂಕಿನ ಹರಿಯಬ್ಬೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗುಣಾತ್ಮಕ ಶಿಕ್ಷಣಕ್ಕಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳು, ಪಿಎಂಶ್ರೀ ಸ್ಕೂಲ್‍ಗಳು ಮತ್ತು ಮಾದರಿ ಶಾಲೆಗಳನ್ನು ನಡೆಸಲಾಗುತ್ತಿದೆ. ಈ ಶಾಲೆಗಳಲ್ಲಿ ಡಿಜಿಟಲ್ ಲರ್ನಿಂಗ್ ಮಾಡಿಸಲು ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ಟ್ಯಾಬ್‍ಗಳನ್ನು ನೀಡಲಾಗುತ್ತಿದ್ದು, ಇದನ್ನು ಸಮರ್ಪಕ ಬಳಕೆ ಮಾಡಿಕೊಳ್ಳಲು ಶಿಕ್ಷಕರಿಗೆ ಸೂಚಿಸಿದರು.
ಶಾಲೆಗಳಲ್ಲಿ ಕೊಠಡಿಗಳ ಕೊರತೆ ನಿವಾರಿಸಲು ಹೊಸದಾಗಿ 163 ಕೊಠಡಿಗಳನ್ನು ಮತ್ತು 124 ಶೌಚಾಲಯಗಳನ್ನು ಈ ವರ್ಷ ನಿರ್ಮಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ರೂ. 04 ಕೋಟಿ ವೆಚ್ಚದಲ್ಲಿ 40 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗಿತ್ತು ಎಂದು ತಿಳಿಸಿದರು. ಹಿರಿಯೂರು ತಾಲ್ಲೂಕಿನ ಇಬ್ಬರು ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ತಾಲ್ಲೂಕಿಗೆ ಹಾಗೂ ಜಿಲ್ಲೆಗೆ ಗೌರವ ಮತ್ತು ಕೀರ್ತಿ ತಂದುಕೊಟ್ಟಿದ್ದಾರೆ. ಅದೇ ರೀತಿ ಈ ವರ್ಷವೂ ಒಳ್ಳೆಯ ಫಲಿತಾಂಶ ತರಲು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೂ ಹೊರೆಯಾಗದಂತೆ ಶಿಕ್ಷಣ ನೀಡಲು ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಇಂಗ್ಲಿμï ಮೀಡಿಯಂ ಮತ್ತು ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಇದನ್ನು ಸಾರ್ವಜನಿಕರು ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಹಿರಿಯೂರು ತಾಲೂಕಿನಲ್ಲಿ ಶೈಕ್ಷಣಿಕ ಸಾಧನೆ ಉತ್ತಮಗೊಳ್ಳುತ್ತಿದ್ದು, ಎಲ್ಲಾ ಹಂತದ ಅಧಿಕಾರಿಗಳು ಉತ್ತಮ ಮೇಲ್ವಿಚಾರಣೆ ಮಾಡಿ ಮಕ್ಕಳ ಪ್ರಗತಿ ಉತ್ತಮಗೊಳಿಸುವಂತೆ ಸೂಚಿಸಿದರು.
ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ ತಿಪ್ಪೇಸ್ವಾಮಿ ಮಾತನಾಡಿ, ಆಂಗ್ಲ ಮಾಧ್ಯಮ ಇರುವ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಗೆ ನೂಕು ನುಗ್ಗಲು ಉಂಟಾಗಿದ್ದು, ಈಗಾಗಲೇ ಲಭ್ಯವಿರುವ ಸೀಟುಗಳು ಭರ್ತಿಯಾಗಿವೆ ಎಂದು ತಿಳಿಸಿದರು. ಉಳಿದಂತೆ ತಾಲ್ಲೂಕಿನಲ್ಲಿರುವ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿ, ಲಭ್ಯ ಇರುವ ಹೆಚ್ಚುವರಿ ಶಿಕ್ಷಕರ ಬಳಕೆ ಮಾಡಿಕೊಂಡು ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗುವುದೆಂದು ತಿಳಿಸಿದರು.
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಅಂಗವಾಗಿ ಪೂರ್ಣ ಕುಂಭದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸ್ವಾಗತಿಸಿದರು. ಕಾರ್ಯಕ್ರಮದ ಸ್ವಾಗತ, ನಿರೂಪಣೆ ಸೇರಿದಂತೆ ವಿವಿಧ ಹಂತಗಳನ್ನು ಶಾಲಾ ವಿದ್ಯಾರ್ಥಿಗಳೇ ನಿರ್ವಹಣೆ ಮಾಡಿದ್ದು ಆಕರ್ಷಕವಾಗಿತ್ತು. ವಿದ್ಯಾರ್ಥಿಗಳಿಗೆ ಕನ್ನಡ ಅಕ್ಷರಭ್ಯಾಸ ಪ್ರಾರಂಭಿಸುವುದರ ಮೂಲಕ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ತಿಪ್ಪೇರುದ್ರಪ್ಪ, ಬಿಸಿ ಊಟ ಸಹಾಯಕ ನಿರ್ದೇಶಕ ಮಹೇಶ್ವರ ರೆಡ್ಡಿ ಸೇರಿದಂತೆ ಶಿಕ್ಷಣ ಸಂಯೋಜಕರು, ಸಿಆರ್‍ಪಿ ಮತ್ತಿತರರು ಹಾಜರಿದ್ದರು. ಕೆಪಿಎಸ್ ಶಾಲೆಯ ಉಪಪ್ರಾಂಶಪಾಲ ರುದ್ರಮುನಿ, ಮುಖ್ಯ ಶಿಕ್ಷಕರಾದ ಮಂಜುನಾಥ್ ಮತ್ತು ಎಲ್ಲಾ ಶಿಕ್ಷಕರು, ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.



===========
About The Author
Discover more from JANADHWANI NEWS
Subscribe to get the latest posts sent to your email.