March 30, 2026
IMG-20260330-WA0155.jpg

ಚಳ್ಳಕೆರೆ ತಾಲೂಕಿನ ಕಾಟಂದೇವರ ಕೋಟೆ ಗ್ರಾಮದ ಮೂಲದ ಷರೀಫ್ ಎಂ ಅವರು ಕಡು ಬಡತನದಲ್ಲೇ ಹುಟ್ಟಿ, ತಮ್ಮ ಪರಿಶ್ರಮ ಮತ್ತು ದೃಢ ಸಂಕಲ್ಪದ ಮೂಲಕ ಪೊಲೀಸ್ ಇಲಾಖೆಯಲ್ಲಿ ಗಮನಾರ್ಹ ಸಾಧನೆ ಮಾಡಿ, ಮುಖ್ಯಮಂತ್ರಿಗಳ ಪದಕ – 2025ಕ್ಕೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಷರೀಫ್ ಎಂ ಅವರು 01-06-1992 ರಂದು ಇಮಾಮ್ ಸಾಬ್ ಮತ್ತು ಇಮಾಂಬಿ ದಂಪತಿಗಳಿಗೆ ಜನಿಸಿದರು. ಬಾಲ್ಯದಿಂದಲೇ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ ಅವರು ಬಿಸಿಎಂ ಹಾಸ್ಟೆಲ್‌ಗಳಲ್ಲಿ ವಾಸವಿದ್ದು ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ನಂತರ ಕೂಡ್ಲಿಗಿ ತಾಲೂಕಿನ ಸುಲ್ತಾನ್ ಪುರದಲ್ಲಿ ವಾಸವಾಗಿದ್ದ ತಮ್ಮ ಸಹೋದರಿಯ ನೆರವಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದರು.
ಇದರ ಫಲವಾಗಿ 10-03-2014 ರಂದು ಕೆಎಸ್‌ಐಎಸ್‌ಎಫ್ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾದರು. ಬುನಾದಿ ತರಬೇತಿ ಪೂರ್ಣಗೊಳಿಸಿದ ಬಳಿಕ ಆಂತರಿಕ ಭದ್ರತಾ ವಿಭಾಗದ ತಾಂತ್ರಿಕ ಘಟಕಕ್ಕೆ ನಿಯೋಜಿಸಲ್ಪಟ್ಟರು. 2017ರಲ್ಲಿ ಸಿವಿಲ್ ಪೊಲೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಆಗಿ ನೇಮಕಗೊಂಡರು.
ತಾಂತ್ರಿಕ ಪರಿಣಿತಿಯುಳ್ಳ ಷರೀಫ್ ಎಂ ಅವರು ಅಪರಾಧ ಪ್ರಕರಣಗಳ ತನಿಖೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ವಿಶೇಷವಾಗಿ ಕಾಲ್ ಡಿಟೇಲ್ ರೆಕಾರ್ಡ್‌ಗಳ (ಸಿಡಿಆರ್) ವಿಶ್ಲೇಷಣೆಯಲ್ಲಿ ನಿಪುಣರಾಗಿರುವ ಅವರು, ಅಪರಾಧ ವಿಭಾಗದ ಸವಾಲಿನ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. 2017ರಿಂದಲೂ ಕೊಲೆ, ಮಾರಣಾಂತಿಕ ಹಲ್ಲೆ, ದ್ವಿಚಕ್ರ ವಾಹನ ಕಳವು, ಮನೆಗಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಆರೋಪಿಗಳನ್ನು ಕಡಿಮೆ ಅವಧಿಯಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ.
ಅಪರಾಧಿಗಳ ಪತ್ತೆಹಚ್ಚುವಿಕೆಯಲ್ಲಿ ಮಾಹಿತಿ ಸಂಗ್ರಹಣೆ ಮತ್ತು ತಾಂತ್ರಿಕ ಸಹಾಯ ಒದಗಿಸುವಲ್ಲಿ ಷರೀಫ್ ಎಂ ಅವರ ಪರಿಶ್ರಮ ಅತ್ಯಂತ ಪ್ರಶಂಸನೀಯವಾಗಿದೆ. ಅವರ ನಿಷ್ಠೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ವೈಜ್ಞಾನಿಕ ಕೌಶಲ್ಯಗಳನ್ನು ಪರಿಗಣಿಸಿ ರಾಜ್ಯ ಸರ್ಕಾರವು ಅವರಿಗೆ ಮುಖ್ಯಮಂತ್ರಿಗಳ ಪದಕ – 2025 ನೀಡಿ ಗೌರವಿಸಿದೆ.
ಷರೀಫ್ ಎಂ ಅವರ ಈ ಸಾಧನೆ ಯುವಕರಿಗೆ ಪ್ರೇರಣೆಯಾಗಿದ್ದು, ಕಠಿಣ ಪರಿಶ್ರಮ ಮತ್ತು ದೃಢ ಮನಸ್ಸು ಇದ್ದರೆ ಯಾವ ಪರಿಸ್ಥಿತಿಯನ್ನೂ ಜಯಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading