ಚಿತ್ರದುರ್ಗ, ಮಾ.30: ಒಳಮೀಸಲಾತಿ ವಿಚಾರವನ್ನು ರಾಜಕೀಯ ಹಿತಾಸಕ್ತಿಗಾಗಿ ಬಳಸಲಾಗುತ್ತಿದೆ ಎಂದು ಡಾ. ವೇದಾಂತ ಏಳಂಜಿ ಅಭಿಪ್ರಾಯಪಟ್ಟರು.
ಅಂಬೇಡ್ಕರ್ ವಿಚಾರ ವೇದಿಕೆ, ಲುಂಬಿನಿ ಪ್ರಕಾಶ ಹಾಗೂ ಅನನ್ಯ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಚಳ್ಳಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪತ್ರಕರ್ತರ ಭವನದ ಬಿ.ವಿ. ವೈಕುಂಠರಾಜು ಸಭಾಂಗಣದಲ್ಲಿ ಆಯೋಜಿಸಿದ್ದ ಕವಿಗೋಷ್ಠಿ ಮತ್ತು ಒಳಮೀಸಲಾತಿ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಳಮೀಸಲಾತಿ ಜಾರಿ ನೈಜ ಸಾಮಾಜಿಕ ನ್ಯಾಯ ಸಾಧನೆಗೆ ಅಗತ್ಯವಾಗಿದ್ದು, ಈ ವಿಚಾರವನ್ನು ಕೆಲವು ರಾಜಕೀಯ ವಲಯಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಹೇಳಿದರು. ಈಗಾಗಲೇ ವಿವಿಧ ಆಯೋಗಗಳು ವರದಿ ನೀಡಿದರೂ, ಸರ್ಕಾರಗಳು ಅದನ್ನು ಜಾರಿಗೆ ತರುವಲ್ಲಿ ವಿಫಲವಾಗಿರುವುದನ್ನು ಅವರು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ರವಿಕುಮಾರ್ ನಿಹ, ಒಳಮೀಸಲಾತಿ ಜಾರಿಗೆ ತರಬೇಕು ಎಂದರು. ತೆಲಂಗಾಣ, ಹರಿಯಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಒಳಮೀಸಲಾತಿ ಜಾರಿಯಾಗಿರುವುದನ್ನು ಉದಾಹರಿಸಿ, ಇದು ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್. ಅಹೋಬಳಪತಿ ಮಾತನಾಡಿ, ಒಳಮೀಸಲಾತಿ ವಿಚಾರವು ಎರಡು ಸಮುದಾಯಗಳ ನಡುವಿನ ಸಂಘರ್ಷವಾಗಿ ಪರಿಣಮಿಸುತ್ತಿದ್ದು, ಇತರ ಸೂಕ್ಷ್ಮ ಜಾತಿಗಳ ಸಮಸ್ಯೆಗಳು ಕಡೆಗಣನೆಗೊಳಗಾಗುತ್ತಿರುವುದಾಗಿ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ಬಿ.ಎಂ. ಗುರುನಾಥ್ ಒಳಮೀಸಲಾತಿ ಹೋರಾಟದ ಹಿನ್ನಲೆ ಮತ್ತು ಅದರ ಬೆಳವಣಿಗೆಗಳನ್ನು ವಿವರಿಸಿದರು.
ಕವಿಗೋಷ್ಠಿಯಲ್ಲಿ ಮೋದೂರು ತೇಜ, ಶಿವಶಂಕರ ಸಿಗೇಹಟ್ಟಿ, ಡಾ. ಆರನಕಟ್ಟೆ ರಂಗನಾಥ, ಬಿದರೋಟಿ ರಂಗನಾಥ, ಡಾ. ಮಮತಾ ಏಳಂಜಿ ಸೇರಿದಂತೆ ಹಲವರು ಕವನ ವಾಚಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ವಿಚಾರ ವೇದಿಕೆಯ ಶ್ರೀನಿವಾಸರಾಜು ದೊಡ್ಡೇರಿ, ವಿಶ್ವಾನಂದ, ಪ್ರಕಾಶ ಯಾದಲಗಟ್ಟೆ, ಶಿಕ್ಷಕ ಸಿದ್ದೇಶ್, ಹನುಮಂತಪ್ಪ ದೊಡಗೂರು, ಡಾ. ಪ್ರದೀಪ್, ಡಾ. ಕುಮಾರ್ ಹೆಚ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮೋದೂರು ತೇಜ ಸ್ವಾಗತಿಸಿ, ಶಿವಶಂಕರ ಸಿಗೇಹಟ್ಟಿ ನಿರೂಪಿಸಿ ವಂದಿಸಿದರು.
About The Author
Discover more from JANADHWANI NEWS
Subscribe to get the latest posts sent to your email.