January 30, 2026
IMG-20260130-WA0199.jpg

ಚಳ್ಳಕೆರೆ:
ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿದ್ದ ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲೇ ಮರು ನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಪೌರಕಾರ್ಮಿಕರು ನಗರದ ನಗರಸಭೆ ಎದುರು ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ – ವಾಸುದೇವ ಮೇಟಿ ಬಣದ ಸದಸ್ಯರು ಬೆಂಬಲ ಸೂಚಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಶ್ವಕರ್ಮ ಸಮಾಜದ ಮುಖಂಡ ಹಾಗೂ ನಗರಸಭೆ ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್, ಕಳೆದ ಹಲವು ವರ್ಷಗಳಿಂದ ನಗರಸಭೆಯಲ್ಲಿ ಸುಮಾರು 16 ಯುವಕರು ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದು, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಪ್ರಾಣದ ಲೆಕ್ಕವಿಲ್ಲದೆ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು. ಆದರೆ ಇತ್ತೀಚಿನ ದಿನಗಳಲ್ಲಿ ಇವರಿಗೆ ಕೆಲಸ ನೀಡದೆ ಬೇರೆಯವರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಇದು ಪೌರಕಾರ್ಮಿಕರಿಗೆ ತೀವ್ರ ಅನ್ಯಾಯವಾಗಲಿದೆ. ಈ ಧೋರಣೆ ಮುಂದುವರಿದರೆ ಇವರ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಕ್ಷಣದಿಂದಲೇ ಹೊರಗುತ್ತಿಗೆ ಆಧಾರದ ಮೇಲೆ ಮರು ನೇಮಕ ಮಾಡಬೇಕು. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಬದಲಿ ಪೌರಕಾರ್ಮಿಕರನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು. ಹೊಸದಾಗಿ ಯಾರನ್ನೂ ನೇಮಿಸಿಕೊಳ್ಳಬಾರದು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ರೆಹಾನ್ ಪಾಷಾ ಮನವಿ ಸ್ವೀಕರಿಸಿ ಮಾತನಾಡಿ, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೌರಾಯುಕ್ತ ಜಗರೆಡ್ಡಿಗೂ ಸೂಚನೆ ನೀಡಿ, ಮುಂಜಾನೆಯಿಂದಲೇ ನಗರ ಸ್ವಚ್ಛತೆಯಲ್ಲಿ ಶ್ರಮಿಸುವ ಪೌರಕಾರ್ಮಿಕರಿಂದಲೇ ನಗರ ಸ್ವಚ್ಛವಾಗಿದ್ದು, ಅವರನ್ನು ಮುಂದುವರಿಸಬೇಕು ಎಂದು ಹೇಳಿದರು. ಇದಕ್ಕೆ ಪೌರಕಾರ್ಮಿಕರು ಸಮ್ಮತಿ ಸೂಚಿಸಿ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಈ ವೇಳೆ ವಾಸುದೇವ ಮೇಟಿ ಬಣದ ತಾಲೂಕು ಅಧ್ಯಕ್ಷ ಜಯಲಕ್ಷ್ಮಿ, ಫರೀದ್ ಖಾನ್, ಪ್ರಸನ್ನ ಕುಮಾರ್, ಮುಷ್ಕರ ನಿರತರಾದ ಮಹಾಂತೇಶ್, ಶಿವರಾಜ್, ತಿಮ್ಮಣ್ಣ, ಯೋಗೇಶ್, ಪವನ್, ಗಿಡ್ಡಪ್ಪ, ಸುದೀಪ್, ಅನಿಲ್ ಕುಮಾರ್, ಹನುಮಂತರಾಯ, ದಯಾನಂದ, ಶಿವಮೂರ್ತಿ, ಮಾರುತಿ, ಮನೋಜ್, ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading