ಚಳ್ಳಕೆರೆ:
ತಾಲೂಕಿನಲ್ಲಿರುವ ನೊಂದಾಯಿತ ಜಾತಿ ಸಮುದಾಯಗಳಿಗೆ ನಿವೇಶನ ಕಲ್ಪಿಸುವ ಉದ್ದೇಶದಿಂದ ಎಲ್ಲಾ ಅರ್ಹ ಸಮುದಾಯಗಳ ಮುಖಂಡರು ಫೆಬ್ರವರಿ 15ರೊಳಗೆ ತಮ್ಮ ಸಂಘದ ಲೆಟರ್‌ಹೆಡ್‌ನಲ್ಲಿ ತಾಲೂಕು ಕಚೇರಿಗೆ ಮನವಿ ಸಲ್ಲಿಸುವಂತೆ ತಹಶೀಲ್ದಾರ್ ರೆಹಾನ್ ಪಾಷಾ ತಿಳಿಸಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಸಮುದಾಯಗಳ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ಶಾಸಕರಾದ ಟಿ.ರಘುಮೂರ್ತಿ ಅವರ ಸೂಚನೆಯ ಮೇರೆಗೆ ಈ ಸಭೆ ಆಯೋಜಿಸಲಾಗಿದ್ದು, ತಾಲೂಕಿನಲ್ಲಿ ಎಲ್ಲಾ ಅರ್ಹ ಸಮುದಾಯಗಳಿಗೆ ನಿವೇಶನ ಒದಗಿಸುವ ಉದ್ದೇಶವಿದೆ ಎಂದರು. ಆದರೆ ಈ ಪ್ರಕ್ರಿಯೆ ಸ್ವಹಿತಾಸಕ್ತಿಗಾಗಿ ಅಲ್ಲದೆ, ಸಮುದಾಯದ ಒಟ್ಟಾರೆ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ನಡೆಯಬೇಕು ಎಂದು ಸ್ಪಷ್ಟಪಡಿಸಿದರು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ತಾಲೂಕಿನಲ್ಲಿ ಇರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳ ಭೂಮಿಯನ್ನು ಮೀಸಲಿಡಲಾಗುತ್ತಿದ್ದು, ಉಳಿದ ಜಾಗವನ್ನು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಹಂಚಿಕೆ ಮಾಡಲಾಗುತ್ತದೆ. ಆದ್ದರಿಂದ ಎಲ್ಲಾ ನೊಂದಾಯಿತ ಸಮುದಾಯಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಮಾತನಾಡಿ, ಪಂಚಾಯಿತಿ ಹಂತದಲ್ಲಿ ನಿವೇಶನ ಮಂಜೂರಿಗೆ ಸಂಬಂಧಿಸಿದಂತೆ ಸಮುದಾಯಗಳಿಂದ ಅರ್ಜಿ ಬಂದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ನಿವೇಶನಗಳ ಬೆಲೆ ನಿಗದಿ ಅಥವಾ ಉಚಿತ ಮಂಜೂರು ವಿಷಯ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಿದ್ದು, ತಾಲೂಕಿನಲ್ಲಿ ಲಭ್ಯವಿರುವ ಸಿಎ ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರ ಎಲ್ಲಾ ಸಮುದಾಯಗಳ ದಾರ್ಶನಿಕರ ಜಯಂತಿಗಳನ್ನು ಆಚರಿಸುವ ಮೂಲಕ ಸಮಾನ ನ್ಯಾಯ ಒದಗಿಸುತ್ತಿದೆ. ಅದರಂತೆಯೇ ತಾಲೂಕಿನ ಅತ್ಯಂತ ಹಿಂದುಳಿದ ಹಾಗೂ ಸಣ್ಣ ಸಮುದಾಯಗಳಿಗೆ ನಿವೇಶನ, ಸಮುದಾಯ ಭವನ ಹಾಗೂ ಸ್ಮಶಾನ ಭೂಮಿಯನ್ನು ಮಂಜೂರು ಮಾಡಬೇಕೆಂಬುದು ಶಾಸಕರ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಸಮುದಾಯಗಳಿಗೆ ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಬನಶ್ರೀ ವೃದ್ಧಾಶ್ರಮದ ಸಂಸ್ಥಾಪಕಿ ಮಂಜುಳಮ್ಮ, ಮಡಿವಾಳರ ಸಂಘದ ಮುಖಂಡ ನಾಗರಾಜ್, ಸವಿತಾ ಸಮಾಜದ ಅಧ್ಯಕ್ಷ ಎಸ್.ರಾಜಣ್ಣ ಸೇರಿದಂತೆ ಹಲವು ಸಮುದಾಯಗಳ ಮುಖಂಡರು ತಮ್ಮ ಸಮುದಾಯಗಳಿಗೆ ನಿವೇಶನ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ತಹಶೀಲ್ದಾರ್ ರೆಹಾನ್ ಪಾಷಾ, ತಾಲೂಕು ಪಂಚಾಯಿತಿ ಇಓ ಶಶಿಧರ್, ಪೌರಾಯುಕ್ತ ಜಗರೆಡ್ಡಿ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.