January 30, 2026
veerendra-pappi.jpg

ಬೆಂಗಳೂರು / ಚಳ್ಳಕೆರೆ, ಜನವರಿ 29:
ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಹಾಗೂ ಜೂಜಾಟ ದಂಧೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ), ಬೆಂಗಳೂರು ವಲಯ ಕಚೇರಿ, ಕೆ.ಸಿ. ವೀರೇಂದ್ರ ಹಾಗೂ ಅವರ ಸಹಚರರ ವಿರುದ್ಧ ಭಾರೀ ಕ್ರಮ ಕೈಗೊಂಡಿದ್ದು, ರೂ.177.3 ಕೋಟಿ ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.

ಮನಿ ಲಾಂಡರಿಂಗ್ ತಡೆ ಕಾಯ್ದೆ–2002 (PMLA) ಅಡಿಯಲ್ಲಿ 29.01.2026ರಂದು ತಾತ್ಕಾಲಿಕ ಜಪ್ತಿ ಆದೇಶ ಹೊರಡಿಸಲಾಗಿದ್ದು, ಜಪ್ತಿಗೊಂಡ ಆಸ್ತಿಗಳಲ್ಲಿ ಕೃಷಿ ಭೂಮಿಗಳು, ವಸತಿ ನಿವೇಶನಗಳು ಸೇರಿದಂತೆ ಸ್ಥಾವರ ಆಸ್ತಿಗಳು ಹಾಗೂ ಚಲ ಆಸ್ತಿಗಳು ಸೇರಿವೆ. ಇವುಗಳು ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದಿಂದ ಗಳಿಸಿದ ಅಪರಾಧ ಆದಾಯದಿಂದಲೇ ಸಂಪಾದಿತವಾಗಿವೆ ಎಂದು ಇಡಿ ತಿಳಿಸಿದೆ.
ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗಳಲ್ಲಿ ದಾಖಲಾಗಿದ್ದ ಅನೇಕ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿತ್ತು. ಈ ಪ್ರಕರಣಗಳು King567 ಸೇರಿದಂತೆ ಹಲವು ಅಕ್ರಮ ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳ ಮೂಲಕ ಸಾರ್ವಜನಿಕರನ್ನು ವಂಚಿಸಿದ ಪ್ರಕರಣಗಳಿಗೆ ಸಂಬಂಧಿಸಿದವು.

ವಂಚನೆ, ನಕಲಿ ಗುರುತು ಪ್ರದರ್ಶನ ಹಾಗೂ ಬೆದರಿಕೆ ಮೂಲಕ ಜನರಿಂದ ಹಣ ಕಸಿದುಕೊಳ್ಳಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ತನಿಖೆಯ ವೇಳೆ ಕೆ.ಸಿ. ವೀರೇಂದ್ರ ಮತ್ತು ಅವರ ಸಹಚರರು ದೇಶವ್ಯಾಪಿ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಜಾಲದ ರೂವಾರಿಗಳಾಗಿದ್ದಾರೆ ಎಂಬುದು ದೃಢಪಟ್ಟಿದೆ. ನಕಲಿ ಆನ್‌ಲೈನ್ ಕ್ಯಾಸಿನೋ ಮಾದರಿಯ ವೆಬ್‌ಸೈಟ್‌ಗಳ ಮೂಲಕ ಆಟಗಾರರನ್ನು ಸೆಳೆದು, ಆರಂಭದಲ್ಲಿ ನಕಲಿ ಗೆಲುವು ತೋರಿಸಿ ನಂಬಿಕೆ ಗಳಿಸಿದ ಬಳಿಕ, ಹಣ ಹಿಂಪಡೆಯುವುದನ್ನು ತಡೆಹಿಡಿಯಲಾಗುತ್ತಿತ್ತು.
ಪೇಮೆಂಟ್ ಗೇಟ್‌ವೇಗಳ ಮೂಲಕ ನೂರಾರು ಮ್ಯೂಲ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ಅಪರಾಧ ಆದಾಯವನ್ನು ಶುದ್ಧೀಕರಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ದಂಧೆಯ ಮೂಲಕ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಇಡಿ ಹಲವು ರಾಜ್ಯಗಳಲ್ಲಿ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಹಾಗೂ ಜಪ್ತಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಗದು, ಚಿನ್ನದ ಬಾರ್ಸ್, ಚಿನ್ನ–ಬೆಳ್ಳಿ ಆಭರಣಗಳು, ವಾಹನಗಳು, ಡಿಜಿಟಲ್ ಸಾಧನಗಳು ಹಾಗೂ ಅಪರಾಧಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಪ್ರಕರಣ ಸಂಬಂಧ ಕೆ.ಸಿ. ವೀರೇಂದ್ರ ಅವರನ್ನು ಬಂಧಿಸಿ, ಮಾನ್ಯ ವಿಶೇಷ ನ್ಯಾಯಾಲಯದಲ್ಲಿ ಆರೋಪ ಪತ್ರ ಸಲ್ಲಿಸಲಾಗಿದೆ.
ಪ್ರಸ್ತುತ ಜಪ್ತಿಯೊಂದಿಗೆ, ಈ ಪ್ರಕರಣದಲ್ಲಿ ಇಡಿ ಇದುವರೆಗೆ ರೂ.320 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ. ಜೊತೆಗೆ ತನಿಖೆಯ ವೇಳೆ ರೂ.2,300 ಕೋಟಿಗೂ ಅಧಿಕ ಅಪರಾಧ ಆದಾಯವನ್ನು ಗುರುತಿಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಉಳಿದ ಅಪರಾಧ ಆದಾಯ ಪತ್ತೆ ಹಾಗೂ ಈ ಅಕ್ರಮ ಜಾಲದಲ್ಲಿ ಭಾಗಿಯಾದ ಎಲ್ಲಾ ಲಾಭಾರ್ಥಿಗಳ ಗುರುತಿಗಾಗಿ ತನಿಖೆ ಮುಂದುವರಿದಿದೆ ಎಂದು ಇಡಿ ಸ್ಪಷ್ಟಪಡಿಸಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading