ಹಿರಿಯೂರು |
ಹಿರಿಯೂರಿನ ನಂಜಯ್ಯನ ಕೊಟ್ಟಿಗೆ ಸ್ಮಶಾನದಲ್ಲಿ ಡಿಸೆಂಬರ್ 28ರ ಭಾನುವಾರ ನಡುರಾತ್ರಿ ಹನ್ನೆರಡು ಗಂಟೆಗೆ ಕುವೆಂಪು ಗೆಳೆಯರ ಬಳಗ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆಯ ಸಂಯುಕ್ತ ಆಯೋಜನೆಯಲ್ಲಿ ಕುವೆಂಪು ದಿನಾಚರಣೆ ಹಾಗೂ ಸ್ಮಶಾನ ಕವಿಗೋಷ್ಠಿ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು.
ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಗರದ ವಕೀಲರಾದ ಪಿ.ಆರ್. ದಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ, ಸ್ಮಶಾನವೆಂದರೆ ಭಯಾನಕ ಸ್ಥಳ ಎಂಬ ಸಾಮಾನ್ಯ ಮನೋಭಾವನೆ ಇರುವ ಸಂದರ್ಭದಲ್ಲಿ ನಡುರಾತ್ರಿ ಇಂತಹ ಸಾಹಿತ್ಯಿಕ ಕಾರ್ಯಕ್ರಮ ಆಯೋಜಿಸಿರುವುದು ಅಚ್ಚರಿಯ ಸಂಗತಿ. ಕುವೆಂಪುರವರ ತತ್ವ-ವಿಚಾರಗಳನ್ನು ಜೀವಂತವಾಗಿಡುವ ಉತ್ತಮ ಪ್ರಯತ್ನ ಇದಾಗಿದೆ ಎಂದು ಶ್ಲಾಘಿಸಿದರು.



ವಿಶ್ವ ಕನ್ನಡ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈ. ರವೀಶ ಅಕ್ಕರ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸಂಸ್ಥೆ ರಾಜ್ಯಾದ್ಯಂತ ವಿಭಿನ್ನ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಕುವೆಂಪು ಜನ್ಮಸ್ಥಳ ಕವಿಶೈಲದಲ್ಲಿ ಮೊದಲ ಕಾರ್ಯಕ್ರಮ ಆರಂಭಿಸಿದ್ದನ್ನು ಸ್ಮರಿಸಿದರು. ಕುವೆಂಪು ದಿನಾಚರಣೆಯನ್ನು ನಡುರಾತ್ರಿ ಸ್ಮಶಾನದಲ್ಲಿ ಆಚರಿಸುವುದು ವಿಭಿನ್ನ ಆಲೋಚನೆಯಾಗಿದ್ದು, ಹಿರಿಯೂರಿನಲ್ಲಿ ಗೆಳೆಯರ ಸಹಕಾರದಿಂದ ಇದು ಯಶಸ್ವಿಯಾಗಿರುವುದು ಸಂತಸದ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಎಚ್. ಶಫಿಉಲ್ಲಾ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸ್ಮಶಾನದಲ್ಲಿ ಕುವೆಂಪು ದಿನಾಚರಣೆ ಹಾಗೂ ಕವಿಗೋಷ್ಠಿ ನಡೆಸುವ ಮೂಲಕ ಸಮಾಜದಲ್ಲಿ ಇರುವ ಸ್ಮಶಾನ ಭಯವನ್ನು ಹೋಗಲಾಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಕುವೆಂಪು ವಿಚಾರಧಾರೆಗಳ ಮೂಲಕ ಸಮಾಜದ ಕಂದಾಚಾರಗಳನ್ನು ನಿವಾರಿಸುವ ಉದ್ದೇಶ ಈ ಕಾರ್ಯಕ್ರಮದ ಹಿನ್ನೆಲೆ ಎಂದರು.
ಕಾರ್ಯಕ್ರಮದ ವಿರುದ್ಧ ಕೆಲವರು ವ್ಯಕ್ತಪಡಿಸಿದ ನಿಂದನಾತ್ಮಕ ಮಾತುಗಳನ್ನು ಲೆಕ್ಕಿಸದೇ ಚಿತ್ರದುರ್ಗ, ತುಮಕೂರು, ಮೈಸೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ಕವಿಗಳು ಹಾಗೂ ಕವಯತ್ರಿಯರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತಿಳಿಸಿದರು. ಮಹಿಳೆಯರು ಯಾವುದೇ ಭಯವಿಲ್ಲದೆ ನಿರ್ಭೀತಿಯಿಂದ ಭಾಗವಹಿಸಿದ್ದುದೂ ವಿಶೇಷವೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪನ್ಯಾಸಕ ಅನಿಲ್ ಕುಮಾರ್, ಆಕಾಶವಾಣಿ ಸಂದರ್ಶಕ-ನಿರೂಪಕ ನವೀನ್ ಮಸ್ಕಲ್, ಹಾಸ್ಯ ಸಾಹಿತಿ ಜಗನ್ನಾಥ್ ಭಾಗವಹಿಸಿ ಮಾತನಾಡಿದರು.
ಕವಿಗೋಷ್ಠಿಯಲ್ಲಿ ಬೆಳಕುಪ್ರಿಯ, ನಿಶಾ ಮುಳಗುಂದ (ಮೈಸೂರು), ಲೀಲಾ ಗುರುರಾಜ್ (ತುಮಕೂರು), ಶಿವಮೂರ್ತಿ ಟಿ (ಕೋಡಿಹಳ್ಳಿ), ವೇಣುಕುಮಾರ್ (ಭರಂಪಪುರ), ಪ್ರವೀಣ್ ಕುಮಾರ್ (ಬ್ಯಾಡರಹಳ್ಳಿ), ಶಿವಾನಂದ (ಬಂಡೆಹಳ್ಳಿ), ಮುದ್ದುರಾಜ್ (ಹುಲಿ ತೊಟ್ಟಿಲು), ಹಂಸದಾಸ (ಚಳ್ಳಕೆರೆ), ರಂಗಧಾಮ (ಸಮುದ್ರದಳ್ಳಿ), ಭರತ್ ಎಚ್.ಜಿ.ಬಿ., ಪ್ರವೀಣ್ ಕೆ.ಎನ್ (ಮೈಸೂರು), ಶಾರದಾ ಜೈರಾಮ್ (ಚಿತ್ರದುರ್ಗ), ಸುರೇಂದ್ರ ಸ್ವಾಮಿ (ಕೊಪ್ಪಳ), ಕಿರಣ್ ಎಸ್ (ಮೈಸೂರು), ಶಶಿಧರ (ಕೋಡಿಹಳ್ಳಿ), ತೇಜಸ್ (ಆದಿವಾಲ), ಹೆಚ್.ಕೆ. ಗಿರಿಜಾ (ಹಿರಿಯೂರು), ರಾಜಣ್ಣ (ಗೋಪನಳ್ಳಿ), ಕೆಂಚಮ್ಮ ಅವರು ಕವನ ವಾಚನ ಮಾಡಿದರು.
ಭಾಗವಹಿಸಿದ ಎಲ್ಲ ಕವಿಗಳಿಗೆ ಇ-ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಶಾರದಾ ಜೈರಾಮ್ ಹಾಗೂ ಗಿರಿಜಾ ಪ್ರಾರ್ಥಿಸಿದರು, ರಂಗಧಾಮ ಸಮುದ್ರದಳ್ಳಿ ಸ್ವಾಗತಿಸಿದರು, ವೇಣುಕುಮಾರ್ ಭರಂಪಪುರ ನಿರೂಪಿಸಿದರು, ಶಿವಮೂರ್ತಿ ಟಿ ಕೋಡಿಹಳ್ಳಿ ವಂದಿಸಿದರು.
ಎಲ್ಲರ ಸಹಕಾರದಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.
About The Author
Discover more from JANADHWANI NEWS
Subscribe to get the latest posts sent to your email.