
“ಮಕ್ಕಳು ನಮ್ಮ ಹೂಡಿಕೆಗಳಲ್ಲ …,ಲಾಭ ಸಹಿತ ಮರಳಿಸಲು….”
ಮಕ್ಕಳು ನಮಗೆ ಕನ್ನಡಿ ನಮ್ಮನ್ನು ನಾವು ನೋಡಿಕೊಳ್ಳಲು
ನಮ್ಮ ಮಕ್ಕಳು ಹಾಗಾಗಬೇಕು ಈಗಾಗಬೇಕು ನಾವು ಆದ ಹಾಗೆ ಅವರು ಆಗಬಾರದು ನಮಗೆ ಇರುವ ಹಾಗೆ ಯಾವುದೇ ಕೊರತೆ ಅವರಿಗೆ ಕಾಡಬಾರದು ,ನಾವು ಪಟ್ಟ ಕಷ್ಟಗಳು ಅವರು ಪಡಬಾರದು, ಈ ಪ್ರಪಂಚದಲ್ಲಿ ಏನೇನು ಉತ್ತಮವಾದದ್ದು ಇದೆಯೋ ಅದೆಲ್ಲವೂಗಳು ನಮ್ಮ ಮಕ್ಕಳಿಗೆ ಸಿಗಬೇಕು. ಅವರು ಯಾರ ಮುಂದೆಯೂ ಕೈಚಾಚಬಾರದು ,ತಲೆ ತಗ್ಗಿಸಬಾರದು, ಅವರನ್ನು ತುಂಬಾ ವಿದ್ಯಾವಂತರನ್ನಾಗಿ ಮಾಡಬೇಕು, ಬುದ್ಧಿವಂತರನ್ನಾಗಿಸಬೇಕು ,ಆರೋಗ್ಯ ,ಆಯುಷ್ಯ ,ವಿನಯವಂತರನ್ನಾಗಿಸಬೇಕು ,ಜಯಶಾಲಿಗಳನ್ನಾಗಿಸಬೇಕು ಧೈರ್ಯಶಾಲಿಗಳನ್ನಾಗಿಸಬೇಕು ,ಐಶ್ವರ್ಯವಂತರನ್ನಾಗಿಸಬೇಕು, ಯಶಸ್ವಿ ವ್ಯಕ್ತಿಗಳಾಗಿ ಈ ಜಗತ್ತಿನಲ್ಲಿರುವ ಅತ್ಯುತ್ತಮವಾದದ್ದನ್ನೆಲ್ಲ ಅವರು ಅನುಭವಿಸಬೇಕು .ಕೋಟ್ಯಾಧಿಪತಿಗಳಾಗಬೇಕು ,ಡಾಕ್ಟರ್, ಇಂಜಿನಿಯರ್, ಲೆಕ್ಚರರ್ ,ಪ್ರೊಫೆಸರ್ ,ಸೈಂಟಿಸ್ಟ್, ಪಿಎಂ, ಸಿಎಂ ಹೀಗೆ ನಮ್ಮ ಮಕ್ಕಳು ಹಾಗಾಗಬೇಕು ಈಗಾಗಬೇಕೆಂಬ ಸಾವಿರಾರು ಕನಸುಗಳನ್ನು ಹೊತ್ತ ಕನಸುಗಾರರು ನಾವು ಅವರ ಹೆತ್ತವರು .ಅವರು ಇನ್ನೂ ಗರ್ಭದಲ್ಲಿರುವಾಗಲೇ ನಮಗೆ ಗಗನದೆತ್ತರಕ್ಕೆ ಬೆಳೆಸುವ ಹಂಬಲ, ಇದು ಎಲ್ಲ ತಂದೆ ತಾಯಿಯರ ಆಕಾಂಕ್ಷೆ ಆಗಿರುತ್ತದೆ .ಅದಕ್ಕಾಗಿ ಅದೆಷ್ಟೋ youtube ಚಾನೆಲ್ಗಳಲ್ಲಿ ಹುಡುಕಿ ಹೆಕ್ಕಿ ಆದರ್ಶ ಪಾಲಕರ ಗುಣಲಕ್ಷಣಗಳಂತ ಅದೆಷ್ಟೋ ವಿಡಿಯೋಗಳ ಸರಮಾಲೆಗಳನ್ನೇ ನೋಡುತ್ತಾ ಅಳವಡಿಸಿಕೊಂಡು ಹುಟ್ಟುವ ಮೊದಲೇ ಅಮೆಜಾನ್ flipkart ಅಂತ ವೆಬ್ಸೈಟ್ಗಳಿಗೆ ಭೇಟಿ ಕೊಟ್ಟು ಹುಟ್ಟದ ಮಕ್ಕಳಿಗಾಗಿಯೇ ಅದೆಷ್ಟೋ ಆಟೋ ಉಪಕರಣಗಳನ್ನು ಖರೀದಿಸಿ ಖಜಾನೆಗೆ ತುಂಬಿಸಿಕೊಂಡಿರುತ್ತೇವೆ ,ಜಗತ್ತನ್ನೇ ಮರೆತ ನಮಗೆ ಅವರೇ ಜಗತ್ತಾಗಿ ಬಿಡುತ್ತಾರೆ . 206 ಮೂಳೆಗಳು ಒಟ್ಟಿಗೆ ಮುರಿದು ಹೋದರೆ ಎಷ್ಟು ನೋವಾಗುತ್ತದೆಯೋ ಅಷ್ಟು ನೋವಾಗುವುದೆಂದು ಗೊತ್ತಿದ್ದರೂ ,ಹೆಣ್ಣಿಗೆ ಹೆರಿಗೆ ಪುನರ್ಜನ್ಮ ಎಂಬುದರ ಅರಿವಿದ್ದರೂ, ನಾವು ಬದುಕುವುದು ಬಹುಶಹ ಃ ಅಂತಹ ಗೊತ್ತಿದ್ದರೂ ನಾವು ಬೇಕೆಂದಿದ್ದನ್ನು ತಿನ್ನಲಾಗುವುದಿಲ್ಲ ,ಅಡ್ಡಾಡುವಂತಿಲ್ಲ ,ನಿದ್ದೆ ಕಟ್ಟಬೇಕು ,ಹಗಲಿರಳು ಆ ಮಗುವಿನ ಸೇವೆ ಮಾಡಬೇಕೆಂಬುದರ ಪ್ರಜ್ಞೆ ಇದ್ದರೂ ,ನಾವು ಎಲ್ಲದಕ್ಕೂ ತಯಾರಾಗಿ ಬಿಡುತ್ತೇವೆ ನಮ್ಮ ಜೀವ ಹೋದರು ಸರಿ ಮಕ್ಕಳಬೇಕೆಂಬ ನಿರ್ಧಾರವನ್ನು ದೃಢ ಮಾಡಿಬಿಟ್ಟೆವು. ಎಲ್ಲವನ್ನು ಸಹಿಸಿಕೊಂಡು ಮುದ್ದಾದ ಮಕ್ಕಳಿಗೆ ಜನ್ಮ ನೀಡಿದ ನಾವು ಅವರ ನಗುವ ಕಂಡು ನೋವ ಮರೆತವರು, ಹಗಲಿರಳು ಎನ್ನದೆ ಸಾಕಿ ಸಲಹಿದವರು, ಅವರಿಗಾಗಿ ಜಗತ್ತಿನೊಂದಿಗಿನ ಸಹವಾಸವನ್ನೇ ಬಿಟ್ಟು ಕೊಟ್ಟವರು ,ಅವರತ್ತರೆ ಅಳುವವರು, ನಕ್ಕಾಗ ನೋವೆಲ್ಲ ಮರೆತು ಅವರೊಂದಿಗೆ ನಕ್ಕವರು, ಮಕ್ಕಳೊಂದಿಗೆ ಮಕ್ಕಳಾಗಿ ದೊಡ್ಡವರೆಂಬದನ್ನೇ ಮರೆತವರು ,ತಂದೆ ತಾಯಿಯಾದಾಗಲೇ ಸಂಪೂರ್ಣ ನಮ್ಮ ತಂದೆ ತಾಯಿಗಳ ತ್ಯಾಗವನ್ನು ಅರಿತುಕೊಂಡವರು, ನಮ್ಮೆಲ್ಲ ಖರ್ಚು ಮೋಜು ಮಸ್ತಿಗಳಿಗೆ ಕಡಿವಾಣ ಹಾಕಿಕೊಂಡವರು, ದುಡಿಮೆಯ ಮೂಲಗಳನ್ನು ಹೆಚ್ಚು ಮಾಡಿಕೊಂಡವರು. ಹುಟ್ಟಿದಾಗಲೇ ಹಲವಾರು ಇನ್ಸೂರೆನ್ಸ್ ಗಳನ್ನು ಇನ್ನೂ 18 ರಿಂದ 20 ವರ್ಷಕ್ಕೆ ಬೇಕೆಂದು ಕೊಂಡುಕೊಂಡವರು. ನಮ್ಮ ಮಕ್ಕಳು ಅತ್ಯುನ್ನತ ಶ್ರೇಷ್ಠ ಶಾಲೆಯಲ್ಲಿ ಓದಬೇಕೆಂದು ಇರುವ ಎಲ್ಲಾ ಶಾಲೆಗಳಿಗೆ ಸೇರಿಸುವ ಮೊದಲೇ ಭೇಟಿಕೊಟ್ಟು ವಿಚಾರಿಸಿ ಅಲ್ಲೊಂದು ಸೀಟನ್ನು ಪಕ್ಕ ಮಾಡಿಟ್ಟವರು .ಬಟ್ಟೆ ಹಾಕುವುದರಿಂದ ಹಿಡಿದು ಆಯಿಲ್, ಸೋಪು, ಶಾಂಪು, ಬೇಬಿ ಕ್ರೀಮ್, ಪೌಡರ್ ,ಲೋಬಾನ ,ಹಾಸಿಗೆ ,ತೊಟ್ಟಿಲು, ತಿನ್ನಿಸಲು, ಕುಡಿಸಲು ,ಕುಣಿಸಲು ಆಡಿಸಲು ,ಮಲಗಿಸಲು ,ಅಷ್ಟೇ ಏಕೆ ಅವರು ಮಾಡಿದ ಟಾಯ್ಲೆಟ್ ಕ್ಲೀನ್ ಮಾಡುವುದಕ್ಕೂ ಮಾರ್ಕೆಟಿನಲ್ಲಿರುವ ಅತ್ಯುತ್ತಮವಾದದ್ದನ್ನೇ ಹುಡುಕಿ ತಂದವರು, ನಾವೇ ಅವರ ಹೆತ್ತವರು …ಯಾರಾದರೂ ನಮ್ಮ ಮಕ್ಕಳ ಬಗ್ಗೆ ಅವಹೇಳನ ಮಾಡಿದರೆ ಅವರ ಸಹವಾಸದಿಂದ ದೂರಾದವರು, ಅದೇಕೋ.. ಇಂದು ನಮ್ಮ ಮಕ್ಕಳ ಅಂಕ ಪಟ್ಟಿಯನ್ನು ಹಿಡಿದುಕೊಂಡು ಅವರಿವರ ಮಕ್ಕಳಿಗೆ ನಮ್ಮ ಮಕ್ಕಳ ಹೋಲಿಸಿ ನಾವೇ ಅವರ ಮನಸ್ಸಿಗೆ ಘಾಸಿ ಸಿ ಮಾಡುತ್ತಿರುವವರು. ಅವರು ಕೇಳಿದ್ದನ್ನೆಲ್ಲ ಕೊಡಿಸುವ ನಾವೇ ಅವರಿಗೆ ಸಮಯ ಕೊಡದವರು, ಅವರ ಆಸೆ ,ಆಕಾಂಕ್ಷೆ, ಕನಸುಗಳೇನು ಎಂದು ತಿಳಿದುಕೊಳ್ಳದೆ ಬರೀ ಅಂಕಗಳಿಗೆ ಕಡೆ ಗಮನಹರಿಸುತ್ತಿರುವವರು. ನಮ್ಮ ಕನಸುಗಳನ್ನೇನು ನನಸು ಮಾಡಿಕೊಳ್ಳಲಾಗಲಿಲ್ಲವೆಂದು, ನಮ್ಮ ಕನಸುಗಳನ್ನು ನಮ್ಮ ಮಕ್ಕಳ ಮೇಲೆ ಹೇರುತ್ತಿರುವವರು, ಅವರ ಕನಸುಗಳ ಚಿವುಟುತ್ತಿರುವವರು ,ಅವರ ಬಾಲ್ಯವನ್ನು ಕಸಿದು ಕೊಳ್ಳುತ್ತಿರುವವರು. ಅದೇ ಆಗಬೇಕು, ಹೀಗೆ ಇರಬೇಕು ,ಅಲ್ಲಿ ಹೋಗಬಾರದು, ಅದು ಕಲಿತರೆ ಪ್ರಯೋಜನವಿಲ್ಲ ,ಅದು ಬೇಡ ,ಇದು ಬೇಡ, ಎಂದು ಹೇಳಿ ಹೇಳಿ ರಾಂಕ್ ಎಂಬ ಮಾಯಜಿಂಕೆಯ ಹಿಂದೆ ಓಡಿಸುತ್ತಿರುವವರು. ಇನ್ನಾದರೂ ಯೋಚಿಸಬೇಕಿದೆ ….ನಮ್ಮ ಮಕ್ಕಳನ್ನು ನಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ನಾವುಗಳು ಹೆತ್ತಿರುವುದೇ ಅಥವಾ ಅವರ ಕನಸುಗಳಿಗೆ ನಾವು ರೆಕ್ಕೆ ಕಟ್ಟಲೇ ಎಂದು… ಜೊತೆಗೆ, ಮಕ್ಕಳು ನಮ್ಮ ಹೂಡಿಕೆಗಳಲ್ಲ ಲಾಭ ಸಹಿತ ಮರಳಿಸಲು ಎಂಬ ಸತ್ಯವನ್ನು ಅರಿತುಕೊಳ್ಳಬೇಕಿದೆ…..
ದೀಪ ಹರೀಶ್ ಆರ್
ಚಿತ್ರದುರ್ಗ


About The Author
Discover more from JANADHWANI NEWS
Subscribe to get the latest posts sent to your email.