July 30, 2025
1753797016461.jpg


ಹಿರಿಯೂರು:
ಸಮಾಜದಲ್ಲಿ ಆಚರಣೆ ಮಾಡುತ್ತಿರುವ ಸಾಂಸ್ಕೃತಿಕ ಹಬ್ಬಗಳು ಮನುಷ್ಯನ ಪ್ರಗತಿಗೆ ಪೂರಕವಾಗಿದ್ದರೂ ಸಹ ಕೆಲವು ಆಚರಣೆಗಳು ಮೂಡನಂಬಿಕೆಗಳು ಮಾನವನಿಗೆ ಪ್ರಚೋದನೆಯನ್ನು ನೀಡುತ್ತಿದ್ದು, ಮನುಷ್ಯ ಈ ಮೂಢನಂಬಿಕೆಗಳಿಂದ ಹೊರಬರಲು ಹರಸಾಹಸ ಪಡುತ್ತಿದ್ದಾನೆ ಎಂಬುದಾಗಿ ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಸಂಚಾಲಕರಾದ ಹೆಚ್.ಎಸ್.ಮಾರುತೇಶಕೂನಿಕೆರೆ ಹೇಳಿದರು.
ತಾಲ್ಲೂಕಿನ ಕೂನಿಕೆರೆ ಸರ್ಕಾರಿ ಕನ್ನಡ ಹಾಗೂ ಉರ್ದು ಶಾಲೆಯ ಆವರಣದಲ್ಲಿ ನಾಗರಪಂಚಮಿ ಹಬ್ಬವನ್ನು ಮಾನವ ಬಂದುತ್ವ ವೇದಿಕೆ ವತಿಯಿಂದ ವಿನೂತನವಾಗಿ ಮಕ್ಕಳಿಗೆ ಹಾಲನ್ನು ವಿತರಿಸುವ ಮೂಲಕ ಸಾರ್ವಜನಿಕರಿಗೆ ಮಾದರಿಯಾಗುವಂತೆ ಬಸವ ಪಂಚಮಿಯನ್ನಾಗಿ ಆಚರಿಸಿ, ಜನರಲ್ಲಿ ಜಾಗೃತಿ ಮೂಡಿಸಿ, ನಂತರ ಅವರು ಮಾತನಾಡಿದರು.
ಹುತ್ತಕ್ಕೆ ಹಾಲನ್ನು ಸುರಿದು ಅವೈಜ್ಞಾನಿಕವಾದ ಆಚರಣೆಗೆ ಜನರು ಮುಂದಾಗುತ್ತಿದ್ದಾರೆ. ಇದರಿಂದ ಅಪಾರ ಪ್ರಮಾಣದ ಹಾಲು ವ್ಯರ್ಥವಾಗುತ್ತದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಪ್ರತಿವರ್ಷ ಅಪೌಷ್ಟಿಕತೆಯಿಂದ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಿದ್ದು, ಇಂತಹ ಮಕ್ಕಳಿಗೆ ಹಾಲನ್ನು ಕೊಟ್ಟರೆ ಅವರ ಹಸಿವು ನೀಗಿಸಿದಂತಾಗುತ್ತದೆ ಎಂಬುದಾಗಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಲನ್ನು ವ್ಯರ್ಥ ಮಾಡುವ ಬದಲಿಗೆ ಇಂತಹ ಶಾಲೆಯ ಮಕ್ಕಳಿಗೆ ಹಾಗೆಯೇ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಲನ್ನು ಕೊಟ್ಟರೆ ಅವರ ಆರೋಗ್ಯ ಸುಧಾರಿಸುತ್ತದೆ. ವಿದ್ಯಾವಂತರು ಇದನ್ನು ಎಲ್ಲರಿಗೂ ತಿಳಿಸುವ ಮೂಲಕ ಬದಲಾವಣೆಯ ಹೊಸ ಗಾಳಿ ಬೀಸಬೇಕಿದೆ.
ಮೌಢ್ಯತೆಯ ವಿರುದ್ಧ ನಂಬಿಕೆಗಳ ವಿರುದ್ಧ ನಾವೆಲ್ಲರೂ ಕೂಡ ಮಾತನಾಡುವಂತಾಗಬೇಕು ಹಾಗೂ ಮುಂದಿನ ದಿನಗಳಲ್ಲಿ ನಾಗರಪಂಚಮಿ ಹೆಸರಿನ ಬದಲು ಬಸವ ಪಂಚಮಿ ಎಂದು ಎಲ್ಲರೂ ಹೇಳುವಂತರಾಗಬೇಕು ಎಂಬುದಾಗಿ ಮಕ್ಕಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ಕನ್ನಡ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ ,ಸಹ ಶಿಕ್ಷಕರಾದ ಸುಧಾಮಣಿ, ಪಾರ್ವತಮ್ಮ, ಉರ್ದು ಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ್ , ಮಲ್ಲಿಕಾ ಬಾನ್ ಅಸ್ಮತ್ ಉನಿಸ, ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ರವಿಕುಮಾರ್, ಗ್ರಾಮ ಪಂಚಾಯಿತಿ ಮುಖಂಡರಾದ ಅಥಾವುಲ್ಲಾ ಹಾಗೂ ಅಂಗನವಾಡಿ ಸಿಬ್ಬಂದಿ, ಅಡಿಗೆ ಸಿಬ್ಬಂದಿಗಳು , ಗ್ರಾಮಸ್ಥರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading