
ಚಿತ್ರದುರ್ಗ ಮೇ 29:
ಲ್ಯಾಂಡ್ ಬೀಟ್ ನಡೆಸುವ ಮೂಲಕ ಕಂದಾಯ ಇಲಾಖೆಯ ಭೂಮಿ ಸರ್ವೇ ನಡೆಸಿ, ಅನಧಿಕೃತ ಭೂಮಿ ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಪ್ರಯತ್ನಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಸೂಚನೆ ನೀಡಿದರು.
ಬೆಂಗಳೂರು ವಿಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ಕಂದಾಯ ಇಲಾಖೆ ವಿಷಯಗಳ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳ ಕಚೇರಿ ನಿರ್ಮಾಣಕ್ಕೆ ಕಂದಾಯ ಭೂಮಿ ಮಂಜೂರು ಮಾಡುವಂತೆ ಕೋರಿ ಸಲ್ಲಿಸಲಾದ ಸಾಕಷ್ಟು ಅರ್ಜಿಗಳು ಜಿಲ್ಲಾಧಿಕಾರಿಗಳ ಮುಂದಿವೆ. ಪೊಲೀಸ್, ಶಿಕ್ಷಣ, ಆರೋಗ್ಯ ಇಲಾಖೆಗಳಿಗೆ ನಗರಕ್ಕೆ ಹತ್ತಿರದಲ್ಲಿಯೇ ಸ್ಥಳಗಳನ್ನು ಮಂಜೂರು ಮಾಡಬೇಕು. ಜಿಲ್ಲಾಧಿಕಾರಿಗಳು ಭೂ ಒತ್ತುವರಿ ತೆರವು ಮಾಡಿ, ಅಗತ್ಯ ಇರುವ ಕಡೆ ಸಂಬಂಧಿಸಿದ ಇಲಾಖೆಗಳಿಗೆ ಭೂಮಿ ನೀಡಲು ಮುಂದಾಗಬೇಕು ಎಂದು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದರು.
ಫಾರಂ 53 ಹಾಗೂ 57 ಅಡಿ ಉಳುಮೆ ಮಾಡುತ್ತಿರುವ ಹಾಗೂ ಜಮೀನು ಮಂಜೂರು ಮಾಡಲು ಕೋರಿರುವ ಅರ್ಜಿಗಳ ಅಂಕಿ ಅಂಶಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಂದ ಪಡೆದ ಅವರು, ಗೋಮಾಳದ ಜಾಗವನ್ನು ಸಾರ್ವಜನಿಕರ ಬಳಕೆಗೆ ಮಂಜೂರು ಮಾಡಬಹುದು. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿನ ಕಾವಲು ಭೂಮಿಯನ್ನು ಮಂಜೂರು ಮಾಡದಂತೆ ಸರ್ವೋಚ್ಛ ನ್ಯಾಯಾಲಯ ತಡೆ ನೀಡಿದೆ. ಇದರ ಜೊತೆಗೆ ಕರ್ನಾಟಕ ಕ್ರಿಕೆಟ್ ಕ್ಲಬ್ ಸೇರಿದಂತೆ ಖಾಸಗಿಯವರಿಗೆ ವಿವಿದ ಉದ್ದೇಶಗಳಿಗಾಗಿ ನೀಡಿದ ಭೂಮಿಯ ಬಳಕೆಯಾಗದೆ ಇದ್ದರೆ ಅಂತಹ ಕಂದಾಯ ಭೂಮಿಗಳ ವಿವರವನ್ನು ಜಿಲ್ಲಾಧಿಕಾರಿಗಳು ಪಟ್ಟಿ ಮಾಡಿ ಪ್ರಾದೇಶಿಕ ಕಚೇರಿಗೆ ಸಲ್ಲಿಸುವಂತೆ ಬಿಸ್ವಾಸ್ ಅವರು ನಿರ್ದೇಶನ ನೀಡಿದರು. ವಿವಿಧ ಜಿಲ್ಲೆಗಳಲ್ಲಿನ ಭೂ ಸ್ವಾಧೀನದ ಮಾಹಿತಿಯನ್ನು ಗಣಕೀಕರಣ ಮಾಡಲು ಹೊಸ ತಂತ್ರಾಂಶ ಅಭಿವೃದ್ಧಿ ಪಡಿಸಲು ಸರ್ಕಾರದಲ್ಲಿ ಚಿಂತನೆ ನಡೆಸಲಾಗಿದೆ ಎಂದರು.
ಚಿತ್ರದುರ್ಗ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೂ ಮಳೆಯಿಂದಾಗಿ 11 ಜಾನುವಾರುಗಳು ಮೃತಪಟ್ಟಿವೆ. 148 ಮನೆಗಳು ಹಾನಿಯಾಗಿವೆ. ಸಂತ್ರಸ್ತರಿಗೆ ಪರಿಹಾರ ನೀಡಲು ಈಗಾಗಲೆ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ ಶೇ.94% ಲ್ಯಾಂಡ್ ಬೀಟ್ ನಡೆಸಲಾಗಿದೆ. ಕಾವಲು ಪ್ರದೇಶಗಳ ಮ್ಯಾಪಿಂಗ್ ಮಾಡಲು ತಾಂತ್ರಿಕ ಅಡ್ಡಿ ಉಂಟಾಗಿತ್ತು, ಇದನ್ನು ಸರಿಪಡಿಸಿ ಲ್ಯಾಂಡ್ ಬೀಟ್ ಮುಂದುವರೆಸಲಾಗಿದೆ. ಫಾರಂ 53 ಹಾಗೂ 57 ಅಡಿ ಜಿಲ್ಲೆಯಲ್ಲಿ 76 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮಾಹಿತಿ ನೀಡಿದರು.
ವಿಡಿಯೋ ಕಾನ್ಪರೆನ್ಸ್ ನಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಬೆಂಗಳೂರು ಕಂದಾಯ ವಿಭಾಗದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ, ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.