January 29, 2026
1745926363674.jpg


ಚಿತ್ರದುರ್ಗ ಏಪ್ರಿಲ್.29:
ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಸಂಬಂಧ ಮೇ 05 ರಿಂದ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಕೈಗೊಳ್ಳಲಿದ್ದು, ಈ ಸಮೀಕ್ಷೆಯು ಮೂರು ಹಂತಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಮೊದಲ ಹಂತದ ಸಮೀಕ್ಷೆಯನ್ನು ಮೇ 05 ರಿಂದ 17 ರವರೆಗೆ ಮನೆ-ಮನೆ ಭೇಟಿ ನೀಡಿ ಸಮೀಕ್ಷಾ ಕಾರ್ಯ ಕೈಗೊಳ್ಳುವುದು. ಎರಡನೇ ಹಂತವು ಮೇ 19 ರಿಂದ 21 ರವರೆಗೆ ಸಮೀಕ್ಷೆ ಬ್ಲಾಕ್‍ಗಳಲ್ಲಿ ವಿಶೇಷ ಶಿಬಿರಗಳನ್ನು ಕೈಗೊಂಡು, ಮನೆ ಭೇಟಿಯಲ್ಲಿ ಬಿಟ್ಟುಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸುವುದು. ಮೂರನೇ ಹಂತ ಮೇ 19 ರಿಂದ 21 ರವರೆಗೆ ಸ್ವಯಂ ಘೋಷಣೆ (ಆನ್‍ಲೈನ್ ಮೂಲಕ) ಸಮೀಕ್ಷೆಗೆ ಮಾಹಿತಿ ಒದಗಿಸಬಹುದಾಗಿದೆ.
ಸಮೀಕ್ಷಾ ಕಾರ್ಯದ ಪೂರ್ವಭಾವಿಯಾಗಿ ರಾಜ್ಯ ಮಟ್ಟದಲ್ಲಿ ನಡೆದ ತರಬೇತಿಗೆ ಚಿತ್ರದುರ್ಗ ಜಿಲ್ಲಾ ಹಂತದಿಂದ 03 ಮಾಸ್ಟರ್ ಟ್ರೈನರ್‍ಗಳನ್ನು ನಿಯೋಜಿಸಲಾಗಿದ್ದು, ಈ ಟ್ರೈನರ್‍ಗಳು 2025ರ ಏಪ್ರಿಲ್ 25ರಂದು ಬೆಂಗಳೂರಿನಲ್ಲಿ ನಡೆದ ತರಬೇತಿಯಲ್ಲಿ ಭಾಗವಹಿಸಿ, ಸಮೀಕ್ಷಾ ಕಾರ್ಯಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು 2025ರ ಏಪ್ರಿಲ್ 28ರಂದು ನಡೆದ ಜಿಲ್ಲಾ ಮಟ್ಟದ ತರಬೇತಿ ಕಾರ್ಯದಲ್ಲಿ 06 ತಾಲ್ಲೂಕುಗಳಿಂದ ನಿಯೋಜಿಸಿರುವ ತಾಲ್ಲೂಕು ಮಟ್ಟದ 30 ಮಾಸ್ಟರ್ ಟ್ರೈನರ್‍ಗಳಿಗೆ ತರಬೇತಿಯನ್ನು ನೀಡಲಾಗಿರುತ್ತದೆ.
ಮೇ 02ರಂದು ತಾಲ್ಲೂಕು ಹಂತದಲ್ಲಿ ತಾಲ್ಲೂಕು ಮಟ್ಟದ ಮಾಸ್ಟರ್ ಟ್ರೈನರ್‍ಗಳಿಂದ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳುವ ಗಣತೀದಾರರಿಗೆ ಮತ್ತು ಮೇಲ್ವಿಚಾರಕರುಗಳಿಗೆ ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ ತಾಲ್ಲೂಕು ಸಮನ್ವಯ ಸಮಿತಿಯ ನೇತೃತ್ವದಲ್ಲಿ ತರಬೇತಿಯನ್ನು ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಸಂಬಂಧ ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಹೆಚ್.ಎನ್.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಏಕ ಸದಸ್ಯ ಆಯೋಗವು 2025ರ ಮಾರ್ಚ್ 27ರಂದು ಮುಖ್ಯಮಂತ್ರಿಗಳಿಗೆ ಮಧ್ಯಂತರ ವರದಿಯನ್ನು ಸಲ್ಲಿಸಿದ್ದು. ಈ ವರದಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾಗಿ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸುವ ಸಲುವಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ ಅವರು ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಿ ಆದೇಶಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ವೇಳಾಪಟ್ಟಿಯನ್ವಯ ಸಮೀಕ್ಷಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಎಲ್ಲಾ ಪರಿಶಿಷ್ಟ ಜಾತಿ ಜನಾಂಗದವರು ಗಣತೀದಾರರಿಗೆ ಅಗತ್ಯ ಮಾಹಿತಿಯನ್ನು ನೀಡಿ ಸಮೀಕ್ಷಾ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ್ ತಿಳಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading