September 15, 2025
1745922436297.jpg


ಚಿತ್ರದುರ್ಗಏ.29:
ಜಿಲ್ಲೆಯಲ್ಲಿ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾರಕ ಕಾಯಿಲೆಗಳಿಂದ ದೂರವಿಟ್ಟು, ಆರೋಗ್ಯಯುತ ಮಕ್ಕಳಿಗಾಗಿ ಬಿಸಿಜಿ, ಹೆಪಟೈಟಿಸ್ ಬಿ, ಪೆಂಟಾ ಸೇರಿದಂತೆ ವಿವಿಧ ಲಸಿಕೆಗಳನ್ನು ಮಕ್ಕಳಿಗೆ ನೀಡಲಾಗುತ್ತಿದ್ದು, ಸಾರ್ವತ್ರಿಕ ಲಸಿಕಾ ಯೋಜನೆಯಲ್ಲಿ ಶೇ.100ರಷ್ಟು ಗುರಿ ಸಾಧನೆ ಮಾಡಬೇಕು. ಯಾವುದೇ ಕಾರಣಕ್ಕೂ ಲಸಿಕೆಯಿಂದ ಮಕ್ಕಳು ವಂಚಿತರಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿವಿಧ ಇಲಾಖೆಗಳ ಸಹಕಾರ ಮತ್ತು ಸಮನ್ವಯದೊಂದಿಗೆ ಕಾರ್ಯಕ್ರಮ ನಿರ್ವಹಿಸುವ ಮೂಲಕ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಮಾತನಾಡಿ, ವಿಶ್ವ ಲಸಿಕಾ ಸಪ್ತಾಹ ಪ್ರತಿ ವರ್ಷದಂತೆ ಈಗಾಗಲೇ ಏಪ್ರಿಲ್ 24 ರಿಂದ ಪ್ರಾರಂಭವಾಗಿದ್ದು, ಏಪ್ರಿಲ್ 30 ರವರೆಗೆ ನಡೆಸುವ ವಿಶೇಷ ಲಸಿಕಾ ಅಭಿಯಾನವಾಗಿರುತ್ತದೆ. ಪ್ರತಿ ಗುರುವಾರ ಮತ್ತು ಮಂಗಳವಾರ ದೈನಂದಿನ ಲಸಿಕಾ ಕಾರ್ಯಕ್ರಮ ಜರುಗುತ್ತಿದ್ದರೂ ಸಹ ವಿಶೇಷ ಲಸಿಕಾ ಸಪ್ತಾಹ ಕಾರ್ಯಕ್ರಮ ಲಸಿಕೆ ಪಡೆಯದೇ ಬಿಟ್ಟು ಹೋದ ಮಕ್ಕಳಿಗೆ ಹಾಗೂ ಸೇವಾ ವಂಚಿತ ಪ್ರದೇಶದಲ್ಲಿ ವಿಶೇಷ ಲಸಿಕಾ ಅಭಿಯಾನ ನಡೆಸಲಾಗುತ್ತದೆ ಎಂದು ಹೇಳಿದರು.
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಯಶಸ್ವಿಗೆ ವಿವಿಧ ಇಲಾಖೆಗಳ ಸಹಕಾರ ಅತ್ಯಗತ್ಯವಾಗಿದ್ದು, ನಗರಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು ಅಗತ್ಯ ಸಹಕಾರ ನೀಡಬೇಕು.
ನಗರಸಭೆ, ಪುರಸಭೆಗಳ ವ್ಯಾಪ್ತಿಯಲ್ಲಿ ಕೊಳಚೆ ಪ್ರದೇಶಗಳಲ್ಲಿ ಲಸಿಕಾ ಸತ್ರ ಏರ್ಪಡಿಸುವುದು ಮತ್ತು ಲಸಿಕಾ ಮಹತ್ವದ ಕುರಿತು ಅರಿವು ಮೂಡಿಸಿ, ಲಸಿಕಾಕರಣಕ್ಕೆ ಸಜ್ಜುಗೊಳಿಸಬೇಕು. ಪ್ರತಿ ತಿಂಗಳು ಸಿಟಿ ಟಾಸ್ಕ್ ಪೋರ್ಸ್ ಸಭೆ ನಡೆಸಿ, ದಢಾರ ರುಬೆಲ್ಲಾ ನಿರ್ಮೂಲನಾ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಮತ್ತು ಸಾರ್ವತ್ರಿಕ ಲಸಿಕಾಕರಣದ ಪ್ರಗತಿ ಪರಿಶೀಲನೆ ನಡೆಸಬೇಕು. ಯಾವುದೇ ಶಂಕಿತ ದಢಾರ ರುಬೆಲ್ಲಾ ಪ್ರಕರಣ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾ ಸತ್ರ ಹಮ್ಮಿಕೊಳ್ಳಲು ಕ್ರಮವಹಿಸುವುದು ಮತ್ತು ಎಲ್ಲ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವಂತೆ ಕ್ರಮವಹಿಸುವುದು. ತಮ್ಮ ವ್ಯಾಪ್ತಿಯಲ್ಲಿ ಬರುವ 5 ವರ್ಷದೊಳಗಿನ ಎಲ್ಲಾ ಮಕ್ಕಳ ದಢಾರ ರುಬೆಲ್ಲಾ ಲಸಿಕಾಕರಣದ ಮಾಹಿತಿಯನ್ನು ಕ್ರೂಢೀಕರಿಸಿ ಪರಿಶೀಲಿಸಿ ಲಸಿಕೆ ಪಡೆಯದ ಮತ್ತು ಬಿಟ್ಟು ಹೋದ ಮಕ್ಕಳಿಗೆ ಆರೋಗ್ಯ ಇಲಾಖೆಯೊಂದಿಗೆ ಸಮನ್ವಯಿಸಿ ಲಸಿಕಾಕರಣ ನಡೆಸಲು ಕ್ರಮವಹಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಲಸಿಕಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸಬೇಕು. ತಾಯಂದಿರ ಸಭೆಗಳಲ್ಲಿ ಲಸಿಕಾ ದಿನಾಂಕದ ಕುರಿತು, ಲಸಿಕಾ ಕಾರ್ಯಕ್ರಮದ ಕುರಿತು ತಿಳಿಸಬೇಕು ಎಂದರು.
ಶಾಲಾ ಲಸಿಕಾಕರಣ ಅಭಿಯಾನ: ಮುಂಬರುವ ಜೂನ್ ಹಾಗೂ ಜುಲೈ ಮಾಹೆಯಲ್ಲಿ ಶಾಲಾ ಲಸಿಕಾಕರಣಯನ್ನು ಅಭಿಯಾನ ರೀತಿಯಲ್ಲಿ ನಡೆಸೋಣ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಸಲಹೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯು ಎಲ್ಲ ಶಾಲೆಗಳಲ್ಲಿ ಲಸಿಕಾ ಸತ್ರ ಹಮ್ಮಿಕೊಳ್ಳಲು ಕ್ರಮವಹಿಸಬೇಕು. ಎಲ್ಲಾ, 5-6, 10 ಮತ್ತು 16 ವರ್ಷದ ಮಕ್ಕಳಿಗೆ ಲಸಿಕೆ ನೀಡುವಂತೆ ಕ್ರಮವಹಿಸಬೇಕು ಎಂದು ಹೇಳಿದರು.
ಆರ್‍ಸಿಹೆಚ್ ತಂತ್ರಾಂಶದಂತೆ 2023-24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ನೋಂದಾಯಿಸಿದ 20182 ಶಿಶುಗಳ ಪೈಕಿ 19871 ಶಿಶುಗಳಿಗೆ ಪೂರ್ಣ ಪ್ರಮಾಣದ ಲಸಿಕೆ ನೀಡುವ ಮೂಲಕ ಶೇ98 ಪ್ರಗತಿ ಸಾಧನೆ ಮಾಡಲಾಗಿದೆ. 2024-25ನೇ ಸಾಲಿನಲ್ಲಿ ನೋಂದಾಯಿಸಿದ 19184 ಶಿಶುಗಳ ಪೈಕಿ 18441 ಶಿಶುಗಳಿಗೆ ಪೂರ್ಣ ಪ್ರಮಾಣದ ಲಸಿಕೆ ನೀಡುವ ಮೂಲಕ ಶೇ.96 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಸೇರಿದಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಹಾಗೂ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading