January 29, 2026
FB_IMG_1769693809604.jpg

********************
ಕರ್ನಾಟಕ ವಾರ್ತೆ (ಚಿತ್ರದುರ್ಗ) ಜ.29:
ಫೆಬ್ರವರಿ 01 ರಂದು ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಯುವನಿಧಿಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಜಿಲ್ಲೆಯ ಎಲ್ಲಾ ಫಲಾನುಭವಿಗಳು ಕಡ್ಡಾಯವಾಗಿ ನೊಂದಣಿ ಮಾಡಲು ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್ ನಿರ್ದೇಶನ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಗುರುವಾರ ಈ ಕುರಿತು ಜರುಗಿದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಉದ್ಯೋಗ ಮೇಳ ಫೆ. 01 ರಂದು ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದು, ಸುಮಾರು 1,800 ಅಭ್ಯರ್ಥಿಗಳು ಈಗಾಗಲೆ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಉದ್ಯೋಗ ಮೇಳದಲ್ಲಿ 7,500 ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಐಟಿ, ಬಿಟಿ, ಮೆಕ್ಯಾನಿಕಲ್, ಆಟೋಮೊಬೈಲ್ ಸೇರಿದಂತೆ ವಿವಿಧ ಕ್ಷೇತ್ರಗಳ ಸುಮಾರು 100 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ಬಿ.ಇ ಪದವೀಧರರಿಗಾಗಿ ಪ್ರತಿಷ್ಠಿತ ಐಟಿ ಕಂಪನಿಗಳು ಸಹ ಈ ಬಾರಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಇ ಹಾಗೂ ಇತರೆ ಯಾವುದೇ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಪ್ರತಿ ಅಭ್ಯರ್ಥಿ ಕನಿಷ್ಟ 05 ರಿಂದ 06 ರೆಸ್ಯೂಮ್ ಪ್ರತಿ ಹಾಗೂ ಪೂರಕ ದಾಖಲೆಗಳೊಂದಿಗೆ ಹಾಜರಾಗಬೇಕು. ಈಗಾಗಲೇ ಜಿಲ್ಲೆಯ ಉದ್ಯೋಗ ವಿನಿಮಯ ಕೇಂದ್ರದಲ್ಲಿ ತಾಂತ್ರಿಕ ಶಿಕ್ಷಣ ಪೂರೈಸಿದ 967ಕ್ಕೂ ಅಧಿಕ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ನೊಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಡಿಪೆÇ್ಲಮೋ ಹಾಗೂ ಐಟಿಐ ಪೂರೈಸಿದ 1,500 ವಿದ್ಯಾರ್ಥಿಗಳು ಇದ್ದಾರೆ. ಇದರೊಂದಿಗೆ ಯುವನಿಧಿ ಯೋಜನೆಯಡಿ 5,034 ಫಲಾನುಭವಿಗಳು ನಿರುದ್ಯೋಗ ಭತ್ಯೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಕಡ್ಡಾಯವಾಗಿ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಉದ್ಯೋಗ ಪಡೆದುಕೊಳ್ಳಬೇಕು. ಇದಕ್ಕಾಗಿ ಎಲ್ಲಾ ಅಧಿಕಾರಿಗಳು ಸಂಘಟಿತವಾಗಿ ಪ್ರಯತ್ನಿಸಿ ಪ್ರತಿ ಅಭ್ಯರ್ಥಿಗಳಿಗೂ ವೈಯಕ್ತಿಕವಾಗಿ ಕರೆ ಮಾಡಿ ನೊಂದಣಿ ಮಾಡಿಕೊಳ್ಳುವಂತೆ ತಿಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್ ತಿಳಿಸಿದರು.
ನೆರೆ ಜಿಲ್ಲೆಗಳ ಕಂಪನಿಗಳಿಗೂ ಆಹ್ವಾನ:
********** ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಗಡಿ ಭಾಗದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ವತಿಯಿಂದ ಚಿತ್ರದುರ್ಗ ಮಾತ್ರವಲ್ಲದೆ ತುಮಕೂರು, ಶಿವಮೊಗ್ಗ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಮುಖ ಕಂಪನಿಗಳನ್ನು ಆಹ್ವಾನಿಸಲಾಗಿದೆ. ಮೇಳದಲ್ಲಿ ಅಭ್ಯರ್ಥಿಗಳ ವಿದ್ಯಾರ್ಹತೆ ಆಧಾರಿಸಿ ಕಂಪನಿಗಳನ್ನು ಶಿಫಾರಸ್ಸು ಮಾಡಲು 8 ರಿಂದ 10 ಕೌಂಟರ್ ಗಳನ್ನು ತೆರೆಯಲಾಗುವುದು. ಸುಮಾರು 25 ಕೊಠಡಿಗಳಲ್ಲಿ ಉದ್ಯೋಗದಾತ ಕಂಪನಿಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಲಿಸಲಾಗುವುದು ಎಂದು ಹೇಳಿದರು.
ವ್ಯಾಪಕ ಪ್ರಚಾರಕ್ಕೆ ಸೂಚನೆ :
*********** ಉದ್ಯೋಗ ಮೇಳದಲ್ಲಿ ಹೆಚ್ಚಿನ ಅಭ್ಯರ್ಥಿಗಳು ಪಾಲ್ಗೊಳ್ಳುವಂತೆ ಮಾಡಲು ಸರಳವಾದ ಆನ್‍ಲೈನ್ ನೊಂದಣಿ ಪ್ರಕ್ರಿಯೆ ಮಾಡಲಾಗಿದೆ. ಗೂಗಲ್ ಫಾರ್ಮ್ ನಲ್ಲಿ ನೊಂದಣಿಗೆ ಕ್ಯೂಆರ್ ಕೋಡ್ ರೂಪಿಸಿ, ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಮೇಳ ಕುರಿತು ಜಿಲ್ಲೆಯ ಎಲ್ಲ 189 ಗ್ರಾಮ ಪಂಚಾಯತಿಗಳೂ ಸೇರಿದಂತೆ ಎಲ್ಲ ನಗರ, ಪಟ್ಟಣ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ವಚ್ಛ ವಾಹಿನಿ ವಾಹನಗಳಲ್ಲಿ ಜಿಂಗಲ್ ಪ್ರಸಾರ ಮಾಡುವ ಮೂಲಕ ಪ್ರಚಾರ ಕೈಗೊಳ್ಳಬೇಕು. ಎಲ್ಲ ಐಟಿಐ, ಡಿಪ್ಲೋಮಾ, ಪದವಿ, ಇಂಜಿನಿಯರಿಂಗ್ ಸೇರಿದಂತೆ ತಾಂತ್ರಿಕ ಶಿಕ್ಷಣದ ಕಾಲೇಜುಗಳ ಮುಖ್ಯಸ್ಥರ ಮೂಲಕ ವಿದ್ಯಾರ್ಥಿಗಳಿಗೆ ಸಂದೇಶ ತಲುಪಿಸುವ ಕಾರ್ಯ ಮಾಡಬೇಕು. ಉದ್ಯೋಗ ಮೇಳ ಸಂದರ್ಭದಲ್ಲಿ ಸರ್ಕಾರಿ ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್ ಕಾಲೇಜು ಸಿಬ್ಬಂದಿಗಳನ್ನು ಕಂಪನಿಗಳು ಸಂದರ್ಶನ ನಡೆಸುವ ಕೊಠಡಿಗಳಿಗೆ ಮೇಲ್ವಿಚಾರಣೆಗಾಗಿ ನಿಯೋಜಿಸಬೇಕು. ಹೆಚ್ಚು ಹೆಚ್ಚು ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿಗಳು ಸಮನ್ವಯದೊಂದಿಗೆ ನೊಂದಣಿ ಮಾಡಿಸುವ ಕಾರ್ಯ ಮಾಡಬೇಕು. ಉದ್ಯೋಗ ಮೇಳ ನಡೆಯುವ ಸ್ಥಳದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಗೊಂದಲಕ್ಕೆ ಅವಕಾಶಗದ ರೀತಿಯಲ್ಲಿ ಅಚ್ಚುಕಟ್ಟಾಗಿ ಮಾಹಿತಿ ನೀಡುವ ಕಾರ್ಯ ಆಗಬೇಕು ಎಂದು ಜಿಪಂ ಸಿಇಒ ಆಕಾಶ್ ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆ ಉಪನಿರ್ದೇಶಕ ಮಂಜುನಾಥ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ, ಉದ್ಯೋಗಾಧಿಕಾರಿ ರವೀಂದ್ರ, ಜಿಟಿಟಿಸಿ ಪ್ರಾಂಶುಪಾಲ ಸುಹಾಸ್, ಕಾರ್ಮಿಕ ಅಧಿಕಾರಿ ಅನಿಲ್ ಬಗಟೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಣ್ಣಕ್ಕಿ ಮಾರುತಿ, ಸಹಾಯಕ ಸಾಂಖ್ಯಿಕ ಅಧಿಕಾರಿ ವೇಮಣ್ಣ.ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading